ಕ್ವಾರಂಟೈನ್ ನಲ್ಲಿದ್ದ ಇಬ್ಬರು ತಬ್ಲಿಗಿಗಳ ಸಾವು: ಅಧಿಕಾರಿಗಳು, ವೈದ್ಯರ ನಿರ್ಲಕ್ಷ್ಯವೇ ಕಾರಣ; ತನಿಖೆಗೆ ಆಯೋಗದಿಂದ ಒತ್ತಾಯ

0
1671

ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್ 26- ಇಲ್ಲಿನ ಸುಲ್ತಾನಪುರಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಇಬ್ಬರು ವ್ಯಕ್ತಿಗಳ ಸಾವು ಸಂಭವಿಸಿರುವುದಕ್ಕೆ ದೆಹಲಿ ಅಲ್ಪಸಂಖ್ಯಾತ ಆಯೋಗವು ಆಕ್ಷೇಪ ವ್ಯಕ್ತಪಡಿಸಿದೆ.

ಈ ಕ್ವಾರಂಟೈನ್ ಕೇಂದ್ರದಲ್ಲಿದ್ದ ಈ ಇಬ್ಬರೂ ಮಧುಮೇಹಿಗಳಾಗಿದ್ದು ಸರಿಯಾಗಿ ಆಹಾರ, ಔಷಧ ಮತ್ತು ಅಗತ್ಯ ಸೇವೆಗಳು ಅಲಭ್ಯವಾದ ಕಾರಣ ಅವರು ಸಾವಿಗೀಡಾಗಿದ್ದಾರೆ ಎಂದು ಆಯೋಗದ ಸಮಿತಿ ಆರೋಪಿಸಿದೆ. ಆದ್ದರಿಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಲ್ಲಿ ಈ ಸಾವಿನ ಕುರಿತಂತೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಜಂಟಿ ಪತ್ರ ಬರೆದಿರುವ ಆಯೋಗದ ಅಧ್ಯಕ್ಷ ಜಫರುಲ್ಲಾ ಖಾನ್ ಮತ್ತು ಸದಸ್ಯ ಕರ್ತಾರ್ ಸಿಂಗ್ ಕೊಚ್ಚಾರ್ ಅವರು ಈ ಇಬ್ಬರ ಸಾವಿಗೆ ಅದನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಹೇಳಿದ್ದಾರೆ.

ಹತ್ತು ದಿನಗಳ ಹಿಂದೆ ಹಾಜಿ ರಿಜ್ವಾನ್ ಸಾವಿಗೀಡಾದರೆ 60 ವರ್ಷದ ಮುಹಮ್ಮದ್ ಮುಸ್ತಫಾ ಅವರು ಏಪ್ರಿಲ್ 22ರಂದು ಸಾವಿಗೀಡಾಗಿದ್ದಾರೆ. ಈ ಇಬ್ಬರೂ ತಮಿಳುನಾಡಿನವರಾಗಿದ್ದು, ನಿಝಾಮುದ್ದೀನ್ ಮರ್ಕಜ್ ಸಮ್ಮೇಳನದಲ್ಲಿ ಭಾಗವಹಿಸಿದವರಾಗಿದ್ದಾರೆ. ತಬ್ಲಿಗಿ ಜಮಾಅತ್ ಇನಲ್ಲಿ ಭಾಗವಹಿಸಿದವರು ಮತ್ತು ಇತರರನ್ನು ದೆಹಲಿಯ ಸುಲ್ತಾನಪುರಿ, ನರೇಲಾ ಮತ್ತು ದ್ವಾರಕಾದ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ತಮಿಳುನಾಡು, ಕೇರಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಿಂದ ಆಗಮಿಸಿದ ತಬ್ಲಿಗಿ ಜಮಾಅತ್ ನ ಸದಸ್ಯರು ಮತ್ತು ಮಲೇಶಿಯಾ, ಥಾಯ್ ಲ್ಯಾಂಡ್, ಶ್ರೀಲಂಕಾ ಮತ್ತು ಕಿರ್ಗಿಸ್ತಾನ್ ದಿಂದ ತಬ್ಲಿಗಿ ಸಮ್ಮೇಳನಕ್ಕೆ ಆಗಮಿಸಿದವರು ಈ ಕೇಂದ್ರಗಳಲ್ಲಿ ಇದ್ದಾರೆ.

ಇವರು ವೃದ್ಧರಾಗಿದ್ದು ಮತ್ತು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು ಅವರಿಗೆ ವಿಶೇಷ ಆರೈಕೆಯ ಅಗತ್ಯ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಅಮಾನವೀಯವಾಗಿ ವರ್ತಿಸಲಾಗುತ್ತಿದೆಎಂದೂ ಸಮಿತಿ ಹೇಳಿದೆ. ಬೆಳಗಿನ ಆಹಾರ 11ಗಂಟೆಗೆ ಮತ್ತು ರಾತ್ರಿ ಆಹಾರವನ್ನು 10ರಿಂದ 11 ಗಂಟೆಯ ನಡುವೆ ನೀಡಲಾಗುತ್ತಿದೆ. ಅಲ್ಲದೆ, ಆಹಾರ ಉತ್ತಮವಾಗಿಲ್ಲ. ಇದರಿಂದಾಗಿ ಕೆಲವರು ವಾಂತಿ ಮಾಡಿದರೆ ಇನ್ನೂ ಕೆಲವರು ಹೊಟ್ಟೆನೋವಿನ ಸಮಸ್ಯೆ ಅನುಭವಿಸಿದ್ದಾರೆ.

ಹೃದಯ ಸಂಬಂಧಿ ರೋಗ ಇರುವವರು ಹಾಗೂ ಮಧುಮೇಹಿಗಳು ಇದ್ದರೂ ಅವರಿಗೆ ಸೂಕ್ತ ಔಷಧಿಯನ್ನು ವಿತರಿಸಲಾಗಿಲ್ಲ. ವೈದ್ಯರು ಅಪರೂಪವಾಗಿ ಈ ಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಕ್ವಾರಂಟೈನ್ ಕೇಂದ್ರದಲ್ಲಿ 25 ದಿನಗಳನ್ನು ಯಾರು ಪೂರೈಸಿರುವರೋ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಕೂಡ ಪತ್ರದಲ್ಲಿ ವಿನಂತಿಸಲಾಗಿದೆ. ರಮಝಾನ್ ನ ಈ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಅವರಿಗೆ ಆಹಾರ ವಿತರಿಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.