130 ಕೋಟಿ ಭಾರತೀಯರೂ ನಮ್ಮವರೇ, ಒಬ್ಬರ ತಪ್ಪಿಗೆ ಎಲ್ಲರನ್ನೂ ತಪ್ಪಿತಸ್ಥರಂತೆ ಕಾಣಬೇಡಿ- ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್

0
1907

ಸನ್ಮಾರ್ಗ ವಾರ್ತೆ

ನಾಗಪುರ, ಏಪ್ರಿಲ್ 27- ಯಾರಾದರೂ ತಪ್ಪೆಸಗಿದರೆ ಎಲ್ಲರನ್ನೂ ತಪ್ಪಿತಸ್ಥರಂತೆ ಕಾಣಬಾರದು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ತಬ್ಲಿಗಿ ಜಮಾಅತ್ ನ ವಿಷಯದಲ್ಲಿ ದೇಶದಲ್ಲಿ ನಡೆಯುತ್ತಿರುವ ದ್ವೇಷ ಪ್ರಚಾರಕ್ಕೆ ಜಾಗತಿಕವಾಗಿ ಪ್ರತಿರೋಧಗಳು ಎದುರಾಗುತ್ತಿರುವ ಸಂದರ್ಭದಲ್ಲಿಯೇ ಭಾಗವತ್ ಅವರ ಈ ಹೇಳಿಕೆ ಹೊರಬಿದ್ದಿದೆ. ಆನ್ಲೈನ್ ಮೂಲಕ ತನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಯಾರಾದರೂ ಯಾವುದಾದರೂ ತಪ್ಪೆಸಗಿದರೆ ಅದರ ಹೆಸರಲ್ಲಿ ಎಲ್ಲರನ್ನೂ ತಪ್ಪಿತಸ್ಥರಂತೆ ಕಾಣಬಾರದು. ಕೆಲವರು ಈ ಬಗೆಯ ಪ್ರಚಾರವನ್ನು ದುರುಪಯೋಗಪಡಿಸಬಹುದು. ಕ್ಷಮೆ ಮತ್ತು ಶಾಂತಿ ನಮ್ಮಲ್ಲಿರಬೇಕು. ಭಯವೋ ಸಿಟ್ಟೋ ಇರಬಾರದು. ಹಾಗೇನಾದರೂ ಆದರೆ ದೇಶವಿರೋಧಿಗಳು ಅದನ್ನು ದೇಶದ ವಿರುದ್ಧ ಬಳಸಬಹುದು. 130 ಕೋಟಿ ಭಾರತೀಯರು ನಮ್ಮವರಾಗಿದ್ದಾರೆ. ಕೊರೋನಾದ ಈ ಸಂದರ್ಭದಲ್ಲಿ ಯಾರು ಕಷ್ಟದಲ್ಲಿದ್ದಾರೋ ಅವರಿಗೆ ಪಕ್ಷಪಾತವಿಲ್ಲದೆ ನೆರವಾಗಬೇಕು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಇಸ್ಲಾಮಿ ಫೋಬಿಯಾ ವ್ಯಾಪಕವಾಗಿದೆ ಮತ್ತು ಕೇಂದ್ರ ಸರಕಾರ ಈ ಕುರಿತಂತೆ ಕ್ರಮ ಕೈಗೊಳ್ಳಬೇಕೆಂದು ಐವತ್ತಕ್ಕಿಂತಲೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟವಾದ ಓಐಸಿಯು ಕಳೆದ ವಾರ ಆಗ್ರಹಿಸಿತ್ತು. ಕೊರೋನಾದ ನೆಪದಲ್ಲಿ ಭಾರತದಲ್ಲಿ ಇಸ್ಲಾಮಿನ ವಿರುದ್ಧ ದ್ವೇಷ ಪ್ರಚಾರವನ್ನು ಹೆಚ್ಚುಗೊಳಿಸುವ ರಹಸ್ಯ ಪ್ರಯತ್ನಗಳು ನಡೆದಿವೆ ಎಂದು ಕೂಡ ಓಐಸಿ ಹೇಳಿತ್ತು.

ಕೊರೋನಾದ ಹೆಸರಲ್ಲಿ ದೇಶದ ಅನೇಕ ಕಡೆ ಮುಸ್ಲಿಮರ ವಿರುದ್ಧ ಅನೇಕಾರು ಆಕ್ರಮಣಗಳು ನಡೆದಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಸಹಿತ ಹಲವು ಅಂತಾರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿದ್ದುವು. ಕೊರೋನಾ ಜಿಹಾದ್ ಎಂಬ ಹೆಸರಲ್ಲಿ ಕೋಮುವಾದಿಗಳು ದೇಶದ ಮುಸ್ಲಿಮರನ್ನು ಬೇಟೆಯಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಆರೋಪಿಸಿತ್ತು.

ನರೇಂದ್ರ ಮೋದಿ ಸರಕಾರವು ಹಿಂದು ಮತ್ತು ಮುಸ್ಲಿಮರ ನಡುವೆ ವಿಭಜನೆಯನ್ನು ಸೃಷ್ಟಿಸುವುದಕ್ಕೆ ಕೊರೋನಾವನ್ನು ಉಪಯೋಗಿಸುತ್ತಿದೆ ಎಂದು ಖ್ಯಾತ ಬರಹಗಾರ್ತಿ ಅರುಂಧತಿರಾಯ್ ಕೂಡ ಇತ್ತೀಚೆಗೆ ಆರೋಪಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.