ಪ್ರವಾದಿ ಮುಹಮ್ಮದ್ ನಿಂದೆ ಪ್ರಕರಣ: ದಕ್ಷಿಣ ಆಫ್ರಿಕಾದ ಪೊಲೀಸ್ ಸಚಿವ ಕ್ಷಮಾಯಾಚನೆ; ತನಿಖೆಗೆ ಆದೇಶ

0
821

ಸನ್ಮಾರ್ಗ ವಾರ್ತೆ

ಜೋಹಾನ್ಸ್ ಬರ್ಗ್, ಏಪ್ರಿಲ್ 27- ಲಾಕ್ಡೌನ್ ಕಾನೂನನ್ನು ಉಲ್ಲಂಘಿಸರುವವರನ್ನು ತರಾಟೆಗೆತ್ತಿಕೊಳ್ಳುವ ಭರದಲ್ಲಿ ಪೊಲೀಸರು ಧರ್ಮನಿಂದನೆಯ ಮಾತಾಡಿರುವುದಕ್ಕೆ ದಕ್ಷಿಣ ಆಫ್ರಿಕಾದ ಪೊಲೀಸ್ ವ್ಯವಹಾರಗಳ ಸಚಿವರಾಗಿರುವ ಬೇಕಿ ಸೆಲೆ ಅವರು ಮುಸ್ಲಿಮರ ಕ್ಷಮೆಯಾಚಿಸಿದ್ದಾರೆ. ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆದ ಬಳಿಕ ಸಚಿವರ ಈ ಕ್ಷಮೆಯಾಚನೆ ನಡೆದಿದೆ.

ಸುಮಾರು 20 ಮುಸ್ಲಿಮರು ನಮಾಜ್ ಮಾಡುತ್ತಿದ್ದ ವೇಳೆ ಪೊಲೀಸರೋರ್ವರು ಅಲ್ಲಿಗೆ ಪ್ರವೇಶಿಸುತ್ತಾರೆ ಮತ್ತು ನೀವೇನು ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗಿಂತ ದೊಡ್ಡವರೇ, ನಿಮ್ಮ ಮುಹಮ್ಮದರೇನು ಅಧ್ಯಕ್ಷರಿಗಿಂತ ದೊಡ್ಡವರೇ ಎಂದು ಪ್ರಶ್ನಿಸುವುದು ವಿಡಿಯೋದಲ್ಲಿದೆ.

ಈ ಕುರಿತಂತೆ ಹೇಳಿಕೆ ನೀಡಿರುವ ಸಚಿವರು, ನಮಾಜ್ ಮಾಡುತ್ತಿರುವವರನ್ನು ಬಂಧಿಸುವ ವೇಳೆ ಧರ್ಮ ನಿಂದೆಯ ಮಾತಾಡಿರುವುದು ಅಸ್ವೀಕಾರಾರ್ಹ ಮತ್ತು ಈ ಕುರಿತಂತೆ ಶೀಘ್ರ ತನಿಖೆಗೆ ಆದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆ ಕೂಡ ಪೊಲೀಸರ ಮಾತಿಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದೆ ಮತ್ತು ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ಕೊಟ್ಟಿದೆ.

ದಕ್ಷಿಣ ಆಫ್ರಿಕಾದ ಜಮೀಯತುಲ್ ಉಲಮಾ ಸಂಘಟನೆಯು ಪೊಲೀಸರ ಮಾತನ್ನು ಖಂಡಿಸಿದ್ದು ಇದು ಪ್ರವಾದಿ ಮುಹಮ್ಮದರ ಘನತೆಗೆ ಕುಂದು ತರುವ ಮಾತಷ್ಟೇ ಅಲ್ಲ ಪೊಲೀಸರು ಬೂಟುಗಾಲಿನ ಮೂಲಕ ಪ್ರಾರ್ಥನಾ ಸ್ಥಳಕ್ಕೆ ಪ್ರವೇಶಿಸಿದ್ದು ಖಂಡನಾರ್ಹ ಎಂದು ಹೇಳಿದೆ. ಅದೇ ವೇಳೆ ಮುಸ್ಲಿಮರು ಲಾಕ್ಡೌನ್ ನಿಯಮವನ್ನು ಪಾಲಿಸುವಂತೆಯೂ ಕರೆ ಕೊಟ್ಟಿದೆ.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕಠಿಣ ಲಾಕ್ಡೌನ್ ನಿಯಮ ಜಾರಿಯಲ್ಲಿದೆ. ಔಷಧ ಮತ್ತು ಆಹಾರವನ್ನು ಖರೀದಿಸುವ ಹೊರತಾಗಿ ಜನರು ಮನೆಯಿಂದ ಹೊರಬರದಂತೆ ನಿಯಮಗಳನ್ನು ಹೇರಲಾಗಿದೆ. ಉಳಿದ ಎಲ್ಲಾ ರೀತಿಯ ಗುಂಪು ಸೇರುವಿಕೆಯನ್ನು ಕೂಡ ನಿಷೇಧಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಸದ್ಯ ಕೊರೋನಾದಿಂದಾಗಿ 85 ಮಂದಿ ಸಾವಿಗೀಡಾಗಿದ್ದು 4350 ಮಂದಿ ಸೋಂಕಿತರಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.