ಸನ್ಮಾರ್ಗ ವಾರ್ತೆ
ಇಸ್ಲಾಮೋಫೋಬಿಯಾದ ಮಧ್ಯೆ ವಿಶ್ವದ ಗಮನ ಸೆಳೆಯುತ್ತಿರುವ ರಾಜಕುಮಾರಿ
ದೆಹಲಿ, ಮೇ.1: ವಿಶ್ವದಲ್ಲಿ ಕೊರೋನಾ ಲಾಕ್ಡೌನ್ ಮಧ್ಯೆ, ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮೋಫೋಬಿಯಾವನ್ನು ಪ್ರಶ್ನೆ ಮಾಡಿರುವ ಯುಎಇ ಯ ರಾಜಕುಮಾರಿ ಹಿಂದ್ ಅಲ್ ಖಾಸಿಮಿ, ಭಾರತದ ಹಿಂದೂಗಳು ಮಾತ್ರ ಎಮಿರೇಟ್ಸ್ ಗೆ ಬರುವುದು ಬೇಡ ಎಂದು ನಾನು ಸಾರ್ವಜನಿಕವಾಗಿ ಹೇಳಿದರೆ ಭಾರತೀಯರಿಗೆ ಹೇಗನಿಸಬಹುದು ಎಂದು ಹಿಂದ್ ಅಲ್ ಖಾಸ್ಸಿಮಿ ಖಾರವಾಗಿಯೇ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಮಗೆ ಭಾರತೀಯರೆಲ್ಲರೂ ಒಂದೇ. ಭಾರತೀಯರನ್ನು ನಾವು ಹಿಂದೂ, ಮುಸ್ಲಿಮ್, ಕ್ರೈಸ್ತರು ಎಂದು ವಿಂಗಡಿಸಿ ನೋಡುವುದಿಲ್ಲ, ನಮ್ಮನ್ನು ಹಾಗೆ ಬೆಳೆಸಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯರು ನಮ್ಮನ್ನು ದ್ವೇಷಿಸಿದ್ದು ಹಿಂದೆಂದೂ ಕಾಣಲಿಲ್ಲ. ಈಗ ಇದು ಹೊಸದಾಗಿ ಆರಂಭಗೊಂಡಿದೆ ಎಂದು ಭಾರತೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ಹಾಗೂ ಲೇಖಕಿಯಾಗಿರುವ ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಯುಎಇ ರಾಜಕುಟುಂಬದ ಸದಸ್ಯೆಯಾಗಿದ್ದು ಇತ್ತೀಚೆಗೆ ಭಾರತದ ಹಲವರು ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಮರು ಮತ್ತು ಅರಜ್ ಪ್ರಜೆಗಳ ವಿರುದ್ಧ ದ್ವೇಷ, ನಿಂದನೆಯ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕುತ್ತಿರುವುದನ್ನು ಖಂಡಿಸಿ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರತದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಹಲವು ಶತಮಾನಗಳ ಇತಿಹಾಸವಿರುವ ಭಾರತೀಯರು ನಮ್ಮನ್ನು ದ್ವೇಷಿಸಿದ್ದು ಹಿಂದೆಂದೂ ಕಾಣಲಿಲ್ಲ. ಈಗ ಇತ್ತೀಚಿಗೆ ಹೊಸದಾಗಿ ಆರಂಭಗೊಂಡಿದೆ ಎಂದಿರುವ ಅವರು, ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಭಾರತಕ್ಕೆ ಸುಮಾರು 14 ಬಿಲಿಯನ್ ಡಾಲರ್ ಹಣ ಯುಎಇಯಿಂದ ರವಾನೆಯಾಗುತ್ತದೆ. ಇದು ನಿಂತರೆ ಭಾರತದ ಆರ್ಥಿಕತೆ ಹೇಗಾಗಬಹುದು ಎಂದು ಯೋಚಿಸಿ. ಆದರೆ ನಾವದನ್ನು ಬಯಸುವುದಿಲ್ಲ ಎಂದು ರಾಜಕುಮಾರಿ ಸಂದರ್ಶನದ ವೇಳೆ ಹೇಳಿದ್ದಾರೆ.
ಭಾರತದಲ್ಲಿ ಎಲ್ಲರೂ ಈ ರೀತಿ ಇಲ್ಲ ಮತ್ತು ಇವರು ಭಾರತದ ಎಲ್ಲರನ್ನೂ ಪ್ರತಿನಿಧಿಸುತ್ತಿಲ್ಲ ಎಂಬುವುದು ಗೊತ್ತಿದೆ. ಆದರೆ ಈ ರೀತಿಯ ಮುಸ್ಲಿಮ್ ಮತ್ತು ಅರಬ್ ದ್ವೇಷ ಭಾರತೀಯರಿಂದ ನಾವು ನಿರೀಕ್ಷಿಸುವುದಿಲ್ಲ ಎಂದು ಅವರು ಖಾರವಾಗಿಯೇ ಹೇಳಿದ್ದಾರೆ.
ಯುಎಇಯಲ್ಲಿ ಇರುವ ಹಲವಾರು ಹಿಂದೂಗಳು ಇತ್ತೀಚೆಗೆ ಅರಬ್ ಮತ್ತು ಮುಸ್ಲಿಮ್ ದ್ವೇಷದ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಇಂತಹ ದ್ವೇಷಪೂರಿತ ಮಾತುಗಳನ್ನು ನಮ್ಮ ದೇಶ ಸಹಿಸುವುದಿಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ಹಿಂದ್ ಅಲ್ ಖಾಸ್ಸಿಮಿ ಹೇಳಿದ್ದಾರೆ.
ಅರಬ್ ದೇಶಗಳಾದ್ಯಂತ ಇರುವ ಹಲವು ಹಿಂದೂಗಳು ಮುಸ್ಲಿಮ್ ಮತ್ತು ಅರಬ್ ಪ್ರಜೆಗಳ ಕುರಿತು ಅವಹೇಳನ ಮತ್ತು ಇಸ್ಲಾಮೊಫೋಬಿಯಾದ ಪೋಸ್ಟ್ಗಳನ್ನು ಹಾಕುತ್ತಿರುವುದರ ವಿರುದ್ಧ ಅರಬ್ ದೇಶಗಳಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ.
ಕೊರೋನಾ ಲಾಕ್ ಡೌನ್ ಮಧ್ಯೆ ಭಾರತದಲ್ಲಿ ನಡೆಯುತ್ತಿರುವ ಕೋಮು ತಾರತಮ್ಯ ಹಾಗೂ ಇಸ್ಲಾಮೋಫೋಬಿಯಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡುತ್ತಿದೆ.
ಯುಎಇಯಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಇಂತಹ ಅವಹೇಳನ, ನಿಂದನೆ ಮತ್ತು ಧಾರ್ಮಿಕ ತಾರತಮ್ಯ ಭಾರತದ ಕಾನೂನಿಗೆ ವಿರುದ್ಧವಾಗಿದೆ ಎಂದು ಅಲ್ಲಿನ ಭಾರತೀಯರಿಗೆ ತಿಳಿಸುತ್ತಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅರಬ್ ಮಹಿಳೆಯರ ಸ್ಥಾನಮಾನವನ್ನೇ ಪ್ರಶ್ನಿಸಿ ಟ್ವಿಟ್ಟರ್ ನಲ್ಲಿ ಹಾಕಿದ್ದ ವಿವಾದಾತ್ಮಕ ಟ್ವೀಟೊಂದು ಇತ್ತೀಚೆಗೆ ಅರಬ್ ದೇಶಗಳಲ್ಲಿ ವೈರಲ್ ಆಗಿ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಆ ಬಳಿಕ ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ದ್ವೇಷವನ್ನು ಬಿತ್ತುತ್ತಿರುವ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇಂತತಹ ಸನ್ನಿವೇಶಗಳ ನಡುವೆಯೂ ಉತ್ತರ ಪ್ರದೇಶ, ದೆಹಲಿಯಂತಹ ರಾಜ್ಯದಲ್ಲಿ ಕೆಲ ಬಿಜೆಪಿ ಶಾಸಕರ ಮುಸ್ಲಿಂ ವಿರೋಧಿ ಧೋರಣೆಯನ್ನು ಮುಂದುವರೆಸುತ್ತಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇದೆ.
ಓದುಗರೇ, sanmarga ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












