ಅಣ್ಣನನ್ನು ಬಾವಿಗೆ ತಳ್ಳಿ ತಂಗಿ ಮೇಲೆ ಅತ್ಯಾಚಾರ: ಮಧ್ಯಪ್ರದೇಶದಲ್ಲೊಂದು ಆಘಾತಕಾರೀ ಘಟನೆ- ಶುಭಂ ಬೆಲೆ, ಸಂದೀಪ್ ಖಾದಿಯ ಸಹಿತ ಐವರ ಸೆರೆ

0
1315

ಸನ್ಮಾರ್ಗ ವಾರ್ತೆ

ಭೋಪಾಲ್ ಮೇ 1- ಅಣ್ಣನ ಜೊತೆ ಬೈಕಿನಲ್ಲಿ ತೆರಳುತ್ತಿದ್ದ 18 ವರ್ಷದ ತಂಗಿಯ ಮೇಲೆ ಏಳು ಮಂದಿಯ ತಂಡ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು, 21 ವರ್ಷದ ಅಣ್ಣನನ್ನು ಬಾವಿಗೆ ತಳ್ಳಿ ಆ ಬಳಿಕ ಈ ತಂಗಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತರೂ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಭಂ ಬೆಲೆ (22)ಮತ್ತು ಸಂದೀಪ್ ಖಾದಿಯ (23) ಹಾಗೂ ಮೂವರು ಅಪ್ರಾಪ್ತರು ಬಂಧಿತರಲ್ಲಿ ಸೇರಿದ್ದಾರೆ. ಲೋಕೇಶ್ ಸೋನಿ (22), ಪವನ್ ಬೆಲೆ (24) ಎಂಬ ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 8.30 ರ ಸಮಯದಲ್ಲಿ ಈ ಘಟನೆ ನಡೆದಿದ್ದು ಅಣ್ಣ ಮತ್ತು ತಂಗಿ ಬೈಕ್ ನಲ್ಲಿ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಈ ಗುಂಪು ಅವರನ್ನು ತಡೆಯಿತಲ್ಲದೆ ಅಣ್ಣನನ್ನು ಪಕ್ಕದ ಬಾವಿಗೆ ತಳ್ಳಿ ತಂಗಿಯ ಮೇಲೆ ಅತ್ಯಾಚಾರ ನಡೆಸಿತ್ತು. ಗುರುವಾರ ಬೆಳಗಿನ ಜಾವ ಎರಡು ಗಂಟೆಯವರೆಗೆ ಈ ಗುಂಪು ಆ ಯುವತಿಯ ಮೇಲೆ ಆಕ್ರಮಣ ನಡೆಸಿತ್ತು. ಅತ್ಯಾಚಾರಿಗಳು ಸ್ಥಳದಿಂದ ಕಾಲ್ಕಿತ್ತ ಬಳಿಕ ಈ ತಂಗಿ ಬಾವಿಯಲ್ಲಿರುವ ಅಣ್ಣನನ್ನು ರಕ್ಷಿಸಿ ತನ್ನ ಗ್ರಾಮಕ್ಕೆ ಮರಳಿದರೆಂದು ಕೊಡುವಾಲಿ ಪೊಲೀಸ್ ಠಾಣೆಯ ಅಧಿಕಾರಿ ರಾಜೇಂದ್ರ ದರ್ವ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಅತ್ಯಾಚಾರ, ಅಪಹರಣ, ಕೊಲೆಯತ್ನ ಇತ್ಯಾದಿ ಸೆಕ್ಷನ್ ಗಳಡಿ ಕೇಸು ದಾಖಲಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.