ಸೂಕ್ತ ದಾಖಲೆಗಳಿದ್ದರೂ ಗೋಕಳ್ಳತನದ ಆರೋಪದಲ್ಲಿ ತನ್ನ ಮೇಲೆ ಜಾಮೀನು ರಹಿತ ಸುಳ್ಳು ಪ್ರಕರಣ ದಾಖಲಿಸಲಾಗಿದೆ: ಜಾನುವಾರು ವ್ಯಾಪಾರಿ ಮುಹಮ್ಮದ್ ಹನೀಫ್ ಆರೋಪ

0
867

ಸನ್ಮಾರ್ಗ ವಾರ್ತೆ

ಮಂಗಳೂರು,ಜೂ.19:ರಾಣೆಬೆನ್ನೂರಿನಿಂದ ಎಮ್ಮೆಗಳನ್ನು ಖರೀದಿಸಿ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಜಾನುವಾರು ವ್ಯಾಪಾರಿ, ಜೋಕಟ್ಟೆಯ ಮುಹಮ್ಮದ್ ಹನೀಫ್ ಗುಡ್ಡೆಮನೆಯವರ ಮೇಲೆ ಜೂನ್ 14 ರಂದು ಉರ್ವಾ ಪೋಲಿಸ್ ಠಾಣೆಗೆ ಸಮೀಪದಲ್ಲಿಯೇ 15 ದುಷ್ಕರ್ಮಿಗಳ ತಂಡವು ಹಲ್ಲೆ ನಡೆಸಿತ್ತು.

ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಘಟನೆಯ ಕುರಿತು ವಿವರಗಳನ್ನು ನೀಡಿದ್ದು, “ತನ್ನ ಮೇಲೆ ಗೋ ಕಳ್ಳತನದ ಆರೋಪದಡಿ ಜಾಮೀನು ರಹಿತ ಸುಳ್ಳು ಪ್ರಕರಣ ದಾಖಲಿಸಲಾಗಿದೆ” ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಕೆ.ಅಶ್ರಫ್, ಸಂತ್ರಸ್ತ ಹನೀಫ್‌ರ ಸಹೋದರ ಹೈದರ್ ಜಮಾಅತ್‌, ಜೋಕಟ್ಟೆ ಗ್ರಾ.ಪಂ. ಉಪಾಧ್ಯಕ್ಷ ಸಂಶುದ್ದೀನ್ ಉಪಸ್ಥಿತರಿದ್ದರು.

ನನ್ನ ಮೇಲೆ 15ರಷ್ಟು ಮಂದಿ ಹಲ್ಲೆ ನಡೆಸಿರುವ ಕುರಿತು ಸಿಸಿಟಿವಿ ದಾಖಲೆಗಳಿದ್ದು, ಮಾರಕ ಆಯುಧಗಳಿಂದ ದಾಳಿ ನಡೆಸಲು ದುಷ್ಕರ್ಮಿಗಳ ತಂಡ ಮುಂದಾಗಿತ್ತು. ಇದುವರೆಗೆ ಕೇವಲ ಆರು ಜನರ ಮೇಲೆ ಮಾತ್ರ ದುರ್ಬಲ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಮುಹಮ್ಮದ್ ಹನೀಫ್ ಹೇಳಿದರು.

ಹಲ್ಲೆ ನಡೆದ ವೇಳೆ ನನ್ನ ವಾಹನ ಸಂಪೂರ್ಣ ಜಖಂಗೊಳಿಸಲಾಗಿದೆ, ನನ್ನ ಜೇಬಿನಲ್ಲಿದ್ದ 7,800 ರೂ. ದೋಚಲಾಗಿದೆ’ ಎಂದು ಮುಹಮ್ಮದ್ ಹನೀಫ್ ಆರೋಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಜೂನ್ 17ರಂದು ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದು, ಅದನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು. ಮತ್ತು ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಈ ನಡುವೆ ವಿವಿಧ ಠಾಣೆಗಳಲ್ಲಿ ತನ್ನ ಮೇಲೆ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿ ದೂರು ದಾಖಲಾಗಿರುವುದಾಗಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದ್ದು, ಆದರೆ ತನ್ನ ಮೇಲೆ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು, ಜಾಮೀನು ದೊರಕಿದೆ ಎಂದು ಅವರು ಹೇಳಿದ್ದಾರೆ.

ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಸ್ಪಷ್ಟ ಮಾರ್ಗಸೂಚಿಯನ್ನು ಪ್ರಕಟಿಸಬೇಕು‌. ಮಾಜಿ ಜಿಲ್ಲಾಧಿಕಾರಿಗಳು ಈ ಕುರಿತು ಮೊಬೈಲ್ ಆ್ಯಪ್ ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಜಾನುವಾರು ಖರೀದಿ, ಮಾರಾಟವನ್ನು ಮುಂದಿರಿಸಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೋಕಟ್ಟೆಯ ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ

ಓದುಗರೇ,ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.