ನಮ್ಮ ಪಕ್ಷವು ಲಾಕ್‌ಡೌನ್ ಆರಂಭಿಕ ಹಂತದಲ್ಲಿ ಸಲಹೆಗಳನ್ನು ನೀಡಿತ್ತು; ರಾಜ್ಯದಲ್ಲಿ ಕೋವಿಡ್ ಉಲ್ಬಣವಾಗಲು ಸರಕಾರದ ನಿರ್ಲಕ್ಷ್ಯವೇ ಕಾರಣ- ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಆರೋಪ

0
786

ಸನ್ಮಾರ್ಗ ವಾರ್ತೆ

ಮಂಗಳೂರು,ಜು.19: ಕೊರೋನ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಮುಂಜಾಗ್ರತೆಗಳನ್ನು, ಸಮರ್ಪಕವಾಗಿ ಕೈಗೊಳ್ಳದ ಕಾರಣದಿಂದಲೇ ಇಂದು ಇದು ಕೈಮೀರಿ ಹೋಗುವ ಹಂತಕ್ಕೆ ತಲುಪಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕನ್ನಡ ಜಿಲ್ಲಾ ಘಟಕ ತೀವ್ರ ಕಳವಳ ವ್ಯಕ್ತ ಪಡಿಸಿದೆ.

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ಪ್ರಥಮ ಲಾಕ್‌ಡೌನ್ ಆರಂಭದಲ್ಲೇ ಕೆಲವು ನಿರ್ದೇಶನಗಳನ್ನು ನೀಡಿದ್ದು ಆದರೆ ಅವೆಲ್ಲವನ್ನೂ ಅಂದು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿತು ಎಂಬುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಅಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡಿದ ಅವರು, ದ.ಕನ್ನಡ ಜಿಲ್ಲೆಯಲ್ಲಿ, ಬಂಟ್ವಾಳದ ಕೊರೋನ ಪ್ರಥಮ ಮರಣ ಪ್ರಕರಣ ಸಂಭವಿಸಿದಾಗಲೇ, ಜಿಲ್ಲಾಡಳಿತ ತುರ್ತಾಗಿ ಪ್ರತಿ ತಾಲೂಕು ಮಟ್ಟದಲ್ಲಿ ಕೊರೋನ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ, ಕೇವಲ ರೋಗ ಲಕ್ಷಣಗಳನ್ನು ಹೊಂದಿರುವ ಜನಗಳಿಗೆ ಮಾತ್ರವಲ್ಲದೆ ಅವರ ಸಂಪರ್ಕವನ್ನು ಹೊಂದಿರುವ ಸರ್ವರಿಗೂ ಉಚಿತ ಪರೀಕ್ಷಾ ಸೌಲಭ್ಯವನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದೆವು. ಎಂದು ಅವರು ಹೇಳಿದರು.

ಇದು ಎಪ್ರಿಲ್ ತಿಂಗಳ 20 ರ ಸಂಯುಕ್ತ ಕರ್ನಾಟಕ ಪತ್ರಿಕೆ ಸೇರಿದಂತೆ ಕೆಲವು ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು. ನಾವು ನಮ್ಮ ಪಕ್ಷದ ನೆಲೆಯಲ್ಲಿ ಅಗತ್ಯವಿರುವ ಎಲ್ಲರಿಗೂ ಉಚಿತ ಕ್ವಾರಂಟೈನ್ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಸಹಕರಿಸುವಂತೆ ಸರಕಾರವನ್ನು ಯಾಚಿಸಿದ್ದೆವು, ನಮ್ಮ ಪಕ್ಷವು ಯಾವುದೇ ಸಲಹೆಗಳನ್ನು ತಜ್ಞರಾದ ಸಂಪನ್ಮೂಲ ವ್ಯಕ್ತಿಗಳಲ್ಲಿ ಸಮಾಲೋಚನೆ ನಡೆಸಿ, ಚರ್ಚಿಸಿದ ನಂತರವೇ, ಮುಂದಿಡುವ ಪರಿಪಾಠವನ್ನು ಇಟ್ಟುಕೊಂಡಿದ್ದು, ಅದರಂತೆ ಸರಕಾರವನ್ನು, ಸ್ಥಳೀಯಾಡಳಿತವನ್ನು, ಅಧಿಕಾರಿಗಳನ್ನು ಸಂಪರ್ಕಿಸಿ, ಇತ್ಯಾದಿಯಾಗಿ ನಮ್ಮ ಹಲವಾರು ನಿವೇದನೆಗಳನ್ನು ಮಾತ್ರವಲ್ಲದೆ, ನಮ್ಮ ಕಡೆಯಿಂದ ನೀಡಬಹುದಾದ ಸಹಕಾರ ಸೌಲಭ್ಯಗಳ ಬಗ್ಗೆಯೂ ತಿಳಿಸಿದ್ದೆವಾದರೂ ಕಡೆಗಣಿಸಲ್ಪಟ್ಟ ಉತ್ತರಗಳು ದೊರೆತಿದ್ದವು ಎಂದು ಅವರು ಆರೋಪಿಸಿದರು.

ಒಂದು ರೀತಿಯಲ್ಲಿ ಸಾಗಹಾಕುವ ವಿಳಂಬದ ನೀತಿಯನ್ನು ಅನುಸರಿಸುವ ಮೂಲಕ ನಿಷ್ಕ್ರಿಯ ಸ್ಪಂದನವು ಇಂದು ಸಮಸ್ಯೆಯನ್ನು ಬಗೆಹರಿಸಲು ಪಾಡುಪಡುವ ಹಂತಕ್ಕೆ ತಲುಪಿಸಿದೆ. ಆದ್ದರಿಂದ ಇನ್ನಾದರೂ ಸರ್ಕಾರ ತಕ್ಷಣ ಗಮನ ಹರಿಸಿ ಪ್ರಸಕ್ತವಾಗಿ ಕೊರೋನ ಕ್ಷಿಪ್ರಗತಿಯಲ್ಲಿನ ಬೆಳವಣಿಗೆಗೆ ತಡೆಯಲ್ಪಡುವ ಯೋಜನೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿಬೇಕಿದ್ದು, ಸಮೂಹ ಹರಡುವಿಕೆಗೆ ತಲುಪದಂತೆ ಜಾಗೃತರಾಗಬೇಕಾಗಿದೆ.

ಕೊರೋನ ಸೋಂಕಿತರು ಮತ್ತು ಮೃತರ ಹೆಸರಿನಲ್ಲಿ ನಡೆಯುತ್ತಿರುವ ಭೀತಿ ಸೃಷ್ಟಿಸುವ ವಾತಾವರಣ ಹಾಗೂ ಜಿಲ್ಲಾಧಿಕಾರಿಗಳ ಸ್ಪಷ್ಟನಾ ಹೇಳಿಕೆಗಳು ಆಗಾಗ ಜನರಲ್ಲಿ ಭೀತಿಯನ್ನು ಹುಟ್ಟುಹಾಕುತ್ತಿದ್ದು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಲು ಪ್ರಯತ್ನಗಳು ನಡೆಯಬೇಕಿದೆ.

ಕೊರೋನ ಸೋಂಕಿನ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಮಾಡುವ ಲೂಟಿಗೆ ಸರಕಾರ ಕಡಿವಾಣಕ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಟಿಬದ್ದತೆಯನ್ನು ತೋರಬೇಕು ಮತ್ತು ಈಗಾಗಲೇ ಸರಕಾರ ನೀಡಿರುವ ಸುತ್ತೋಲೆಯಂತೆ, ಕೊರೋನ ಪೀಡಿತರಿಗೆ ಉಚಿತ ಸೇವೆಯನ್ನು ಒದಗಿಸುವ ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಉಚಿತ ಶುಶ್ರೂಷೆ ದೊರೆಯುತ್ತಿದೆಯೇ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳನ್ನು ನೇಮಿಸಬೇಕಿದೆ.

ರಾಜ್ಯ ಸರ್ಕಾರ ನೀಡುವ ಭರವಸೆಗಳು, ಕೇಂದ್ರದ ಯೋಜನೆಗಳಂತೆ ಕೇವಲ ಪತ್ರಿಕಾ ಪ್ರಕಟಣೆಗೆ ಮಾತ್ರ ಸೀಮಿತವಾಗಬಹುದು. ಪಾರದರ್ಶಕವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಸರಕಾರ ಮುಂದಾಗಬೇಕಿದ್ದು, ಅಗಯ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಖಾಸಗಿ ಆಸ್ಪತ್ರೆಗಳು ದೋಚುವ ಹಣದಲ್ಲಿ ಸರಕಾರದ ಪಾಲಿದೆ ಎಂಬ ಆರೋಪದಲ್ಲಿ ತನ್ನ ಕೈವಾಡವಿಲ್ಲ ಎಂಬುದನ್ನು ಸರಕಾರ ಸಾಬೀತು ಪಡಿಸಬೇಕಿದೆ ಎಂದು ಅವರು ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.