ಸನ್ಮಾರ್ಗ ವಾರ್ತೆ
ನವದೆಹಲಿ,ಸೆ.30: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿರುವ ತೀರ್ಪಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ (ಜೆಐಹೆಚ್) ತೀವ್ರ ನಿರಾಶೆ ವ್ಯಕ್ತಪಡಿಸಿದೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಜೆಐಹೆಚ್ ರಾಷ್ಟ್ರಾಧ್ಯಕ್ಷರಾದ ಸೈಯದ್ ಸಾದತುಲ್ಲಾಹ್ ಹುಸೇನಿಯವರು, “ಜಮಾಅತೆ ಇಸ್ಲಾಮೀ ಹಿಂದ್ ಇಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನಲ್ಲಿ ತೀವ್ರ ನಿರಾಶೆಯನ್ನು ವ್ಯಕ್ತಪಡಿಸುತ್ತಿದೆ. 28 ವರ್ಷಗಳ ನಂತರವೂ ಜನರು ಬಯಸುತ್ತಿದ್ದ ನ್ಯಾಯವನ್ನು ತಲುಪಿಸಲಾಗಿಲ್ಲ. 10 ತಿಂಗಳ ಹಿಂದೆಯೇ ಭಾರತದ ಸುಪ್ರೀಂ ಕೋರ್ಟ್ ಧ್ವಂಸ ಪ್ರಕರಣವನ್ನು ‘ಕ್ರಿಮಿನಲ್ ಆಕ್ಟ್ ಮತ್ತು ಕಾನೂನಿನ ಉಲ್ಲಂಘನೆ’ ಎಂದು ಕರೆದಿದ್ದರೂ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಗೊತ್ತುಪಡಿಸಿದ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮಸೀದಿಯನ್ನು ಕೆಡವಲು ಯಾವುದೇ ಪಿತೂರಿ ನಡೆದಿಲ್ಲ ಮತ್ತು ಈ ಕೃತ್ಯ ಸ್ವಯಂಪ್ರೇರಿತವಾಗಿದೆ ಮತ್ತು ಮೊದಲೇ ಯೋಜಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಹೇಗೆ ಬಂದಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಎಲ್.ಕೆ ಅಡ್ವಾಣಿಯವರು ಪ್ರಾರಂಭಿಸಿದ ಇಡೀ ‘ರಾಮ್ ಜನ್ಮಭೂಮಿ ಚಳುವಳಿ ಮತ್ತು ರಥಯಾತ್ರೆ’ ಮಸೀದಿ ಇರುವ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವುದಾಗಿ ಘೋಷಿಸಿದ್ದು ಇದರ ಉದ್ದೇಶವಲ್ಲ ಎಂದಾಗಿದ್ದರೆ ಅಸ್ತಿತ್ವದಲ್ಲಿರುವ ಮಸೀದಿಯನ್ನು ದೇವಾಲಯವನ್ನಾಗಿ ಪರಿವರ್ತಿಸುವ ಕುರಿತು ಆರೋಪಿಗಳು ಹಲವಾರು ಬಾರಿ ಪುನರಾವರ್ತಿಸಿರುವುದು, ನೂರಾರು ಬಾರಿ ಸಾರ್ವಜನಿಕವಾಗಿ ಬಹಿರಂಗಗೊಳಿಸಿರುವುದು, ಇದರ ಪರಿಣಾಮವಾಗಿ 1992ರ ಡಿಸೆಂಬರ್ 6ರಂದು ಸಾವಿರಾರು ಉನ್ಮಾದಿತ ಕರ ಸೇವಕರು ಮಾಡಿದ ಅಪರಾಧ ಕೃತ್ಯವು ಪಿತೂರಿಗೆ ಸಾಕ್ಷಿಯಲ್ಲದಿದ್ದರೇ ಮತ್ತಿನ್ನೇನು?” ಎಂಬುದಾಗಿ ಅವರು ಪ್ರಶ್ನಿಸಿದರು.
ಈ ದೇಶದ ಎಲ್ಲಾ ನ್ಯಾಯ ಪ್ರಿಯ ನಾಗರಿಕರು ಈ ತೀರ್ಪಿನಿಂದ ಎಂದಿಗೂ ತೃಪ್ತರಾಗುವುದಿಲ್ಲವಾದ್ದರಿಂದ, ಈ ಪ್ರಕರಣವನ್ನು ಉನ್ನತ ನ್ಯಾಯಾಲಯಗಳ ಮುಂದೆ ಪ್ರಶ್ನಿಸಲು ನಾವು ಬೆಂಬಲಿಸುತ್ತೇವೆ. ನಾವು ಸುಸಂಸ್ಕೃತ ಸಮಾಜದಲ್ಲಿ ವಾಸಿಸುತ್ತಿದ್ದೇವೆ, ಇಲ್ಲಿ ಕಾನೂನಿನ ನಿಯಮವು ಅತ್ಯುನ್ನತವಾಗಿದೆ ಮತ್ತು ಒಬ್ಬರ ರಾಜಕೀಯ ಕಾರ್ಯಸೂಚಿ ಅಥವಾ ಪ್ರಾದೇಶಿಕ ಗುರಿಗಳನ್ನು ಸಾಧಿಸಲು ಕಾನೂನನ್ನು ಕಡೆಗಣಿಸುವ ಯಾವುದೇ ಹೆಚ್ಚುವರಿ ನ್ಯಾಯಾಂಗೀಯ ಶಕ್ತಿ ಅಥವಾ ಹಿಂಸಾಚಾರವನ್ನು ನಾವು ಒಪ್ಪುವುದಿಲ್ಲ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಇತಿಹಾಸವು ನಮ್ಮ ರಾಷ್ಟ್ರವನ್ನು ದಯೆಯಿಂದ ನಿರ್ಣಯಿಸುವುದಿಲ್ಲ, ಇಲ್ಲಿ ನ್ಯಾಯದ ವಿಳಂಬವಾಗಿದೆ, ನ್ಯಾಯವು ನಿರಾಕರಿಸಲ್ಪಟ್ಟಿದೆ ಮತ್ತು ಆರೋಪಿ ಅಪರಾಧಿಗಳಿಗೆ ಬಹುಮಾನ ನೀಡಲಾಗಿದೆ ಮತ್ತು ಖುಲಾಸೆಗೊಳಿಸಲಾಗಿದೆ ” ಎಂದು ಅವರು ಹೇಳಿದರು.












