ಹತ್ರಸ್ ಸಾಮೂಹಿಕ ಅತ್ಯಾಚಾರ, ಕೊಲೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ: ಭೀಮ್ ಆರ್ಮಿ ನಾಯಕ ಚಂದ್ರಶೇಖರ್‌‌‌ಗೆ ಗೃಹ ಬಂಧನ

0
597

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.1: ಉತ್ತರಪ್ರದೇಶದ ಹತ್ರಸ್‍ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಕಾಂಗ್ರೆಸ್, ಎಡಪಕ್ಷ ಸಂಘಟನೆಗಳು, ಭೀಮ್ ಆರ್ಮಿ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೊಡಬೇಕೆಂದು ಪ್ರತಿಭಟನಾಕಾರರು ಉತ್ತರ ಪ್ರದೇಶ ಭವನದ ಮುಂದೆ, ಇಂಡಿಯಾ ಗೇಟಿನ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ಮಂಗಳವಾರ ಸಂತ್ರಸ್ತೆ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ದಿಲ್ಲಿಯಲ್ಲಿ ಹಲವಾರು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ತಂದೆ ತಾಯಿಯ ಒಪ್ಪಿಗೆಯಿಲ್ಲದೆ ಮಧ್ಯ ರಾತ್ರೆ ವೇಳೆ ಬಾಲಕಿಯ ಮೃತದೇಹವನ್ನು ಉತ್ತರ ಪ್ರದೇಶ ಪೊಲೀಸರು ಸಂಸ್ಕರಿಸಿದ್ದು ಕೂಡ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿದೆ.

ಬುಧವಾರ ಬೆಳಗ್ಗೆ ದಿಲ್ಲಿಯ ಉತ್ತರ ಪ್ರದೇಶ ಭವನದ ಮುಂದೆ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಡಪಕ್ಷಗಳ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದು, ಕೊರೋನ ಮಾರ್ಗಸೂಚಿಯನ್ನು ಪಾಲಿಸದೆ ಒಟ್ಟು ಸೇರಿದ್ದಕ್ಕಾಗಿ ಕಾರ್ಯಕರ್ತರನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಆಗಿದ್ದಾರೆ. ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಬುಧವಾರ ಸಂಜೆ ಕರೆ ನೀಡಿದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯನ್ನು ಪೊಲೀಸರು ತಡೆದಿದ್ದಾರೆ. ಕಾರ್ಯಕರ್ತರನ್ನು ಬಲಪ್ರಯೋಗಿಸಿ ತೆರವುಗೊಳಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಿದ್ದು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಐಸಾ ಆರೋಪಿಸಿದೆ.

ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ ರಾವಣ‌ಗೆ ಗೃಹ ಬಂಧನ

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ನಾಯಕ ಚಂದ್ರ ಶೇಖರ ಆಝಾದ್‍ರನ್ನು ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಸಹರಾನ್ಪುರದ ಮನೆಯಲ್ಲಿ ಅವರು ಈಗ ನೆಲೆಸಿದ್ದಾರೆ. ನಮ್ಮ ಸಹೋದರಿಯನ್ನು ಕುಟುಂಬವನ್ನು ದೂರವಿಟ್ಟು ಅವರ ಸಮ್ಮತಿಯಿಲ್ಲ ಮಧ್ಯರಾತ್ರೆಯಲ್ಲಿ ಪೊಲೀಸರು ಮೃತದೇಹ ಸಂಸ್ಕರಿಸಿದ್ದು ಹೇಗೆ ಎಂಬುದನ್ನು ಜಗತ್ತಿಡೀ ನೋಡಿತು. ಸರಕಾರ ಮತ್ತು ಪೊಲೀಸರ ನೈತಿಕತೆ ಸತ್ತಿದೆ. ಬುಧವಾರ ರಾತ್ರೆಯಿಂದ ಪೊಲೀಸರು ನನ್ನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಸಹಾರನ್ ಪುರದ ಮನೆಯಲ್ಲಿ ಬಂಧನದಲ್ಲಿರಿಸಿದ್ದಾರೆ. ಆದರೂ ಇದರ ವಿರುದ್ಧ ಹೋರಾಡುವೆ ಎಂದು ಚಂದ್ರಶೇಖರ್ ಆಝಾದ್ ಟ್ವೀಟ್ ಮಾಡಿದ್ದಾರೆ.