ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಸೆ.30: ಭಾರತ ಕೊರೋನ ಪ್ರಕರಣದ ಪೂರ್ಣ ಲೆಕ್ಕವನ್ನು ಹೊರಗೆಡಹಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಭಾಗವಾಗಿ ಡೆಮಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ರೊಂದಿಗೆ ಬುಧವಾರ ನಡೆದ ಚರ್ಚೆಯಲ್ಲಿ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಮೆರಿಕದಲ್ಲಿ 70 ಲಕ್ಷ ಕೊರೋನ ಪ್ರಕರಣಗಳು 2 ಲಕ್ಷ ಸಾವುಗಳು ವರದಿಯಾಗಿರುವ ಕುರಿತು ಬೈಡನ್ ಟೀಕಿಸಿದಾಗ ಉತ್ತರಿಸಿದ ಟ್ರಂಪ್ ಲೆಕ್ಕಗಳನ್ನು ಹೇಳುವಾಗ ನಮಗೆ ಚೀನದಲ್ಲಿ, ಭಾರತದಲ್ಲಿ, ರಷ್ಯದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರು ನಮಗೆ ನಿಜವಾದ ಲೆಕ್ಕವನ್ನೂ ಕೊಡುವುದಿಲ್ಲ ಎಂದು ಹೇಳಿದರು.
ದುರಂತವನ್ನು ತಡೆಯಲು ಟ್ರಂಪ್ರಲ್ಲಿ ಯಾವುದೇ ಯೋಜನೆ ಇಲ್ಲ ಎಂದು ಜೋ ಬೈಡನ್ ಟೀಕಿಸಿದರು. ಸಮಸ್ಯೆಯ ಆಳವು ಫೆಬ್ರುವರಿಯಲ್ಲಿ ಮನದಟ್ಟಾಗಿತ್ತು. ಅದನ್ನು ತಡೆಯಲು ಟ್ರಂಪ್ ಏನೂ ಮಾಡಲಿಲ್ಲ. ಚರ್ಚೆಯನ್ನು ಪ್ರಮುಖ ಅಮೆರಿಕನ್ ಟಿವಿ ನಿರೂಪಕ ಕ್ರಿಸ್ವಿಲಾಸ್ ನಿರೂಪಿಸಿದರು.
ಎರಡನೆ ಹಂತದ ಸಂವಾದ ಅಕ್ಟೋಬರ್ 15ಕ್ಕೆ ಮತ್ತು ಮೂರನೆ ಹಂತದ ಸಂವಾದ ಅಕ್ಟೋಬರ್ 22ಕ್ಕೆ ನಡೆಯಲಿದೆ. ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.












