Home ಸುದ್ದಿ ಕಥದಾ ಮಸೀದಿಗೆ ಕೊನೆಗೂ ಲಭಿಸಿತು ಲೌಡ್ ಸ್ಪೀಕರ್
ಕಥದಾ: ಕಳೆದ ಆಗಸ್ಟ್ 20 ರಂದು ಗಾದ್ವಿ ಸಮುದಾಯದ ಓರ್ವ ವ್ಯಕ್ತಿಯು ಅದಾನ್ ಕರೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಿನಲ್ಲಿಯೇ ಗಾದ್ವಿ ಮತ್ತು ಮುಸ್ಲಿಮ್ ಸಮುದಾಯದ ನಡುವೆ ಕಲಹವೇರ್ಪಟ್ಟಿತ್ತು. ಈ ಕಲಹದಲ್ಲಿ ಮುಸ್ಲಿಮ್ ಸಮುದಾಯದ 70ರ ಹರೆಯದ ವೃದ್ಧ ವ್ಯಕ್ತಿ ಸೇರಿದಂತೆ ಐವರು ಗಾಯಗೊಂಡಿದ್ದರು. ಆದರೆ ಪೊಲೀಸರು ಮಧ್ಯ ಪ್ರವೇಶಿಸುವ ಮೂಲಕ ಕಥದಾದ ಎರಡು ಸಮುದಾಯಗಳ ನಡುವೆ ಶಾಂತಿ ಸ್ಥಾಪನೆ ನಡೆಸಿದರಲ್ಲದೇ ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸಲು ಅನುವುಮಾಡಿಕೊಟ್ಟರು.
ಅಖಿಲ ಕಚ್ಚ್ ಸುನ್ನಿ ಮುಸ್ಲಿಮ್ ಹಿತ ರಕ್ಷಕ್ ಸಮಿತಿಯ ಮುಖ್ಯಸ್ಥರಾದ ಇಬ್ರಾಹೀಮ್ ಹಾಲೆಪೋತ್ರರವರು ಕಥವಾದಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾ, “ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಮುಸ್ಲಿಮರಿಗೆ ಲೌಡ್ ಸ್ಪೀಕರ್ ಬಳಸಿ ಪ್ರಾರ್ಥನೆ ಕರೆ ನೀಡಲು ಅನುಮತಿ ನೀಡಲಿಲ್ಲ. ಆದುದರಿಂದ ನಾವು ಮಸೀದಿಯ ಒಳಗೆಯೇ ಸ್ಥಾಪಿಸಲಾದ ಸಣ್ಣ ಸ್ಪೀಕರ್ ಮೂಲಕ ನಮಾಝ್ ನಿರ್ವಹಿಸುತ್ತಿದ್ದೆವು. ಆದರೆ ಆಗಸ್ಟ್ 20 ರಂದು ನಮ್ಮ ಸಮುದಾಯದ 70ರ ವಯೋ ವೃದ್ಧ ಸೇರಿದಂತೆ ಐವರ ಮೇಲೆ ಗಾದ್ವಿ ಸಮುದಾಯದವರು ಹಲ್ಲೆ ನಡೆಸಿದರು. ಆದರೂ ನಾವು ಮೌನವಾಗಿಯೇ ಪ್ರತಿಭಟಿಸಲು ತೀರ್ಮಾನಿಸಿದ್ದೆವು. ಹಾಗಾಗಿ ನಾವು ಕಚ್ಚ್ ನ ಮುಸ್ಲಿಮರನ್ನು ಕಥದಾಕ್ಕೆ ನೆರವು ನೀಡಲು ಆಹ್ವಾನಿಸಿದೆವು. ಇದು ಹಲವರ ಗಮನ ಸೆಳೆಯಿತಲ್ಲದೇ ಜಿಲ್ಲಾಡಳಿತ ಮತ್ತು ಪೊಲೀಸರ ಮಧ್ಯಸ್ಥಿತಿಯಿಂದ ಎರಡು ಸಮುದಾಯಗಳ ಉಪಸ್ಥಿತಿಯಲ್ಲಿಯೇ ಸ್ಪೀಕರ್ ಅಳವಡಿಸಲು ಅನುವು ಮಾಡಿಕೊಡಲಾಯ್ತು” ಎಂದು ಹೇಳಿದ್ದಾರೆ.
ಕಥದಾದ ಮುಸ್ಲಿಮ್ ಸಮುದಾಯದ ಮುಖಂಡರಾದ ಉಮರ್ ಚೌಹಾಣ್ರವರು “ಹಲವು ವರ್ಷಗಳಿಂದ ನಾವು ಈ ಹಳ್ಳಿಯಲ್ಲಿ ಸಾಮರಸ್ಯದಿಂದ ಜೀವಿಸುತ್ತಿದ್ದೇವೆ. ನಾವು ಪರಸ್ಪರರ ಮೌಲ್ಯಗಳನ್ನು ಗೌರವಿಸುತ್ತೇವೆ. ಆದುದರಿಂದಲೇ ನಾವು ಮೌನವಾಗಿಯೇ ಪ್ರತಿಭಟಿಸಲು ತೀರ್ಮಾನಿಸಿದೆವು. ಮಾಂದ್ವಿ ಪೊಲೀಸ್ ಅಧಿಕಾರಿ ಎಮ್ಆರ್ ಗಮೇಟಿಯವರು ಮಧ್ಯಪ್ರವೇಶಿಸಿ ನಮಗೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸಲು ಸಹಾಯ ಮಾಡಿದ್ದಾರೆ” ಎಂದರು.
ಚರಣ್ ಸಮುದಾಯದ ಮುಖಂಡರಾದ ವಿಜಯ್ ಗಾದ್ವಿಯರು “ತಪ್ಪು ತಪ್ಪೇ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾವು ಶಾಂತಿ ಮತ್ತು ಸಾಮರಸ್ಯದೊಂದಿಗೆ ಪರಸ್ಪರರು ಬಾಳಬೇಕಿದೆ” ಎಂದು ತಿಳಿಸಿದರು.