ಸನ್ಮಾರ್ಗ ವಾರ್ತೆ
ಪಾಟ್ನ,ಅ.24: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಲಾಲು ಪ್ರಸಾದ್ ಯಾದವ್ರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಗೆದ್ದು ಸರಕಾರ ರಚಿಸಿದ ನಂತರ ಲಾಲೂರ ಮಹಾಸಖ್ಯದಿಂದ ಹೊರ ಹೋಗಿ ಮೋದಿಯ ಜೊತೆ ಸೇರಿ ಅಧಿಕಾರ ಉಳಿಸಿಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕಟುವಾದ ಟೀಕೆ ಮಾಡಿದ್ದಾರೆ.
ಜೈಲಿನಲ್ಲಿರುವ ಲಾಲುಜಿ ನವೆಂಬರ್ ಒಂಬತ್ತಕ್ಕೆ ಜಾಮೀನಿನಲ್ಲಿ ಹೊರಬರಲಿದ್ದಾರೆ. ಮರು ದಿವಸ ಮುಖ್ಯಮಂತ್ರಿ ಗಾದಿಯಿಂದ ನಿತೀಶ್ರನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಯಲಿದೆ ಎಂದು ತೇಜಸ್ವಿ ಹೇಳಿದರು. ಭೋಜ್ಪುರಿಯಲ್ಲಿ ಲಾಲೂರ ಶೈಲಿಯಲ್ಲಿ ಮಾತಾಡಿದ ತೇಜಸ್ವಿ ಪ್ರಧಾನಿಯ ವಿರುದ್ಧ ಕಟು ಶಬ್ದಗಳನ್ನು ಬಳಸಿದರು.
ಕೊರೋನ ಹರಡಿಕೊಂಡ ನಂತರ 144 ದಿನಗಳ ಕಾಲ ಮುಖ್ಯಮಂತ್ರಿಯ ವಸತಿಯಲ್ಲೇ ಕೂತ ನಿತೀಶ್ ಈಗ ಚುನಾವಣೆಗಾಗಿ ಮಾತ್ರ ಹೊರಬಂದಿದ್ದಾರೆ ಎಂದು ತೇಜಸ್ವಿ ಕಟಕಿಯಾಡಿದರು. ತಾನು ಮುಖ್ಯಮಂತ್ರಿಯಾದರೆ ಮೊದಲ ಸಚಿವ ಸಂಪುಟ ಸಂಬೆಯಲ್ಲಿ ಹತ್ತು ಲಕ್ಷ ಬಿಹಾರಿ ಯುವಕರಿಗೆ ಸರಕಾರಿ ಕೆಲಸ ನೀಡುವ ಆದೇಶಕ್ಕೆ ಸಹಿ ಹಾಕುವೆ ಎಂದು ರಾಹುಲ್ ಗಾಂಧಿಯ ಜೊತೆ ನಡೆದ ರ್ಯಾಲಿಯಲ್ಲಿ ತೇಜಸ್ವಿ ಘೋಷಿಸಿದರು.












