ಲೇಖಕಿ: ಸಿಹಾನ ಬಿ.ಎಂ.
ಜಗತ್ತಿನಾದ್ಯಂತ ಇಂದು ಫ್ರಾನ್ಸ್ ಉತ್ಪನ್ನಗಳು ಬಹಿಷ್ಕರಿಸಲ್ಪಡುತ್ತಿದೆ. ಕತ್ತಾರ್, ಸೌದಿ ಅರೇಬಿಯಾ, ಮೊರಾಕೊ, ಟ್ಯುನೇಶಿಯಾ, ಅಲ್ಮೇರಿಯಾ, ಈಜಿಪ್ಟ್, ಇರಾನ್ ಮೊದಲಾದ ದೇಶಗಳು ಇಂದು ಫ್ರಾನ್ಸಿನ ವಿರುದ್ಧ ಧ್ವನಿಯೆತ್ತಿವೆ. “ಪರಧರ್ಮವನ್ನು ಪರಿಹಾಸ್ಯ ಮಾಡದಿರು” ಎಂದು ಜಗಕೆ ಸಾರಿದ ಪರಧರ್ಮ ಸಹಿಷ್ಣು ಪ್ರವಾದಿ ಮುಹಮ್ಮದ್(ಸ)ರವರ ಕಾರ್ಟೂನ್ ಚಿತ್ರ ರಚಿಸಿ ಅವಹೇಳನ ಮಾಡಿದ ಕೃತ್ಯವೇ ಇಂದು ಜಗತ್ತು ಫ್ರಾನ್ಸಿನ ವಿರುದ್ಧ ಪ್ರತಿಭಟಿಸಲು ಕಾರಣ. ಬದಲಾಗಿ ಆ ಕಾರ್ಟೂನ್ ಚಿತ್ರ ರಚಿಸಿದ ಸ್ಯಾಮ್ಯೋಲ್ ಪಾಟಿ ಎಂಬ ಅಧ್ಯಾಪಕನ ಶಿರಚ್ಛೇದ ಮಾಡಿದ ದುಷ್ಕರ್ಮಿಗಳ ಕೃತ್ಯವನ್ನು ಸಮರ್ಥಿಸುವ ಪರಿಯಲ್ಲ. ಪ್ರತಿಯೊಬ್ಬರಿಗೂ ಅವರವರ ಧರ್ಮವೇ ಶ್ರೇಷ್ಠ. ಧರ್ಮ, ಆಚಾರ,ಪ್ರವಾದಿಗಳು,ಧರ್ಮಗ್ರಂಥಗಳು ಪ್ರತೀ ಧರ್ಮವಿಶ್ವಾಸಿಗೆ ಪವಿತ್ರ. ಇತರರ ಆರಾಧ್ಯದೈವ ಮತ್ತು ಸಂದೇಶವಾಹಕರನ್ನು ಹೀಯಾಳಿಸುವುದು ಮಹಾಪರಾಧ.
ಭಯೋತ್ಪಾದನೆಯನ್ನು ವಿರೋಧಿಸುವ ಇಸ್ಲಾಮ್ ಇತರರ ಧರ್ಮವನ್ನು ಹೀಯಾಳಿಸುವುದನ್ನು ಖಂಡಿಸಿದೆ. ಜೊತೆಗೆ ಇತರರ ಆರಾಧ್ಯ ದೈವಗಳನ್ನು ಪರಿಹಾಸ್ಯ ಮಾಡಿ ತೆಗಳಬಾರದೆಂದು ತಾಕೀತು ಮಾಡಿದೆ. ಕುರ್ ಆನ್ ಹೇಳುತ್ತದೆ , ” ಓ ಮುಸ್ಲಿಮರೇ, ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿ”(ಪ.ಕು. 6: 108).ಅದು ಸಮಾಜದ ಸ್ವಸ್ಥತೆಯನ್ನು ನಾಶಗೊಳಿಸುವ ಮಾರಕಾಸ್ತ್ರ. ಇಂದು ಜಗತ್ತು ಕೊರೋನ ಮತ್ತು ಕೋಮು ವೈರಸ್ ಗಳ ಮಧ್ಯೆ ಇಬ್ಬಾಯಿಯ ಖಡ್ಗ ಹಿಡಿದು ಸೆಣಸಾಡುವ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಪ್ರವಾದಿ ಮುಹಮ್ಮದ್(ಸ)ರ ಕಾರ್ಟೂನ್ ಚಿತ್ರ ರಚಿಸಿ ಅವಹೇಳನ ಮಾಡಿದ ಅಧ್ಯಾಪಕನನ್ನು ಮೂರ್ನಾಲ್ಕು ಕಿರಾತಕರು ಶಿರಚ್ಛೇದ ಮಾಡಿದ ಕೃತ್ಯ ಅಮಾನವೀಯ. ಅದೂ ಅಲ್ಲದೆ ಫ್ರಾನ್ಸಿನ ಚರ್ಚಿಗೆ ಪ್ರವೇಶಿಸಿ ಮೂವರು ಅಮಾಯಕ ಮಹಿಳೆಯರನ್ನು ದೇವನಾಮ ಉಚ್ಛರಿಸುತ್ತಾ ತಿವಿದು ಹತ್ಯೆಗೊಳಿಸಿದ ದುಷ್ಕರ್ಮಿಗಳು ಅದ್ಯಾವ ದೇವನಿಗಾಗಿ ಇಂತಹ ನರಹತ್ಯೆಯ ಕೃತ್ಯವನ್ನು ಎಸಗುತ್ತಿರುವರೋ…? ಹೃದಯ ಹೀರದ ದೇವಪ್ರೇಮವು ಕೇವಲ ನಾಲಗೆಗೆ ಸೀಮಿತಗೊಳಿಸಿ ಅನ್ಯರ ಪ್ರಾಣವನ್ನು ಅನ್ಯಾಯವಾಗಿ ಬಲಿ ತೆಗೆದ ನರರಾಕ್ಷಸರು. ಕೊಲೆಗೆ ಕೊಲೆಯೇ ಶಿಕ್ಷೆಯ ರೂಪವೆಂದು ದೇವನಿಯಮವ ಕಲಿಸಿದ ಪ್ರಿಯ ಪ್ರವಾದಿಯವರ ಅನುಯಾಯಿಗಳೆಂದು ಕರೆಸಿಕೊಳ್ಳಲು ಇವರು ಅನರ್ಹರು. ಅದೊಂದು ಹೇಡಿತನದ ಆಕ್ರಮಣ. ಅವರು ಪ್ರವಾದಿ ಪ್ರೇಮದ ಎಳ್ಳಷ್ಟು ಅಂಕುರಿಲ್ಲದ ಅಪರಾಧಿಗಳು.
ಪವಿತ್ರ ಕುರ್ ಆನ್ ಹೇಳುತ್ತದೆ ;
“ನೀವು ಅತಿಕ್ರಮ ಎಸಗಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ.”
(ಪ.ಕು.2:190)
” ಒಬ್ಬ ಮನುಷ್ಯನನ್ನು ಅನ್ಯಾಯವಾಗಿ ವಧಿಸಿದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ.”
(ಪವಿತ್ರ ಕುರ್ಆನ್- 5 :32)
ಇನ್ನು ಹೇಳುವುದಾದರೆ ಕಾರ್ಟೂನ್ ಚಿತ್ರ ಬಿಡಿಸಿದ ಆ ಅಧ್ಯಾಪಕನ ಕೃತ್ಯವಂತು ಕ್ಷಮಿಸಲರ್ಹವಲ್ಲದು. ಇತರರ ಧರ್ಮದ ಆಚಾರ,ವಿಚಾರ, ಸಂಪ್ರದಾಯ, ದೇವರು, ಸಂದೇಶವಾಹಕರ ಹಂಗಿಸುವಿಕೆ ಸಮಾಜವನ್ನು ಪ್ರಕ್ಷುಬ್ಧಗೊಳಿಸುವಂತಹ ಕೃತ್ಯ. ಇವೆಲ್ಲಕ್ಕಿಂತ ಮಿಗಿಲಾಗಿ ಅಕ್ರಮಿಗಳಿಗೆ ಶಿಕ್ಷೆ ಜಾರಿಗೊಳಿಸಬೇಕಾದ ಸರಕಾರದ ನಿಲುವು ಜನರನ್ನು ದಾರಿತಪ್ಪಿಸಲು ಒಂದು ಸಮುದಾಯದ ಮೇಲೆ ಹೀನಾತಿಹೀನ ಕೋಮುವ್ಯಾಧಿಯ ಬುತ್ತಿ ಕಟ್ಟುವ ಕಾಯಕಗೈಯ್ಯುತ್ತಿರುವುದು ಅಕ್ಷಮ್ಯ ಅಪರಾಧ. ರಾಷ್ಟೀಯತೆಯ ಪ್ರಜ್ಞೆ ಉದ್ದೀಪನಗೊಳಿಸಲು ಸಜ್ಜಾಗಬೇಕಾಗಿದ್ದ ಫ್ರಾನ್ಸಿನ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಇಂದು ಹಂತಕರ ಕೃತ್ಯವನ್ನಾಧರಿಸಿ ಅಮಾಯಕ ಸಮುದಾಯದ ಮೇಲೆ ಗುಂಪು ನರಹತ್ಯೆಗೈಯ್ಯುವ ಹುನ್ನಾರ ಹೆಣೆಯುತ್ತಿರುವುದೇ ಅಲ್ಲಿ ಕ್ಷೋಭೆಯ ತೀವ್ರತೆ ತಾರಕಕ್ಕೇರುತ್ತಿರುವುದು. ನ್ಯೂಜಿಲ್ಯಾಂಡಿನ ಮಾದರಿ ಮಾತೆಯ ಆದರ್ಶವು ಅಂದು ಆ ದೇಶವನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದ ಪಾಠವು ಇನ್ನೂ ಇತರ ದೇಶದ ನಾಯಕರಿಗೆ ಪ್ರಜ್ಞೆ ಮೂಡಿಸದಿರುವುದು ದುರಾದೃಷ್ಟಕರ.
ಫ್ರಾನ್ಸಿನ ವಿರುದ್ಧದ ಪ್ರತಿಭಟನೆ , ಬಹಿಷ್ಕಾರದ ಕಾವು ಜಗದೆಲ್ಲೆಡೆ ಮುಗಿಲು ಮುಟ್ಟಿದೆ. ಎಂದಿನಂತೆ ಇಂದು ಸಹ ಕತಾರ್ ತನ್ನ ಪೌರುಷತ್ವದ ಪತಾಕೆ ಹಿಡಿದು ಫ್ರಾನ್ಸ್ನ ವಿರುದ್ಧ ಪ್ರತಿಭಟಿಸಲು ಮುಂಚೂಣಿಯಲ್ಲಿ ನಿಂತಿದೆ. ಮೊತ್ತಮೊದಲಿಗೆ ಅಲ್ಮೇರಿಯ ಫ್ರಾನ್ಸಿನ ವಿರುದ್ಧ ಧ್ವನಿಯೆತ್ತಿತು. ನಂತರ ಕತ್ತಾರ್ ಫುಟ್ಬಾಲ್ ಸ್ಟೇಡಿಯಂನಲ್ಲಿ ಪ್ರವಾದಿ ಸ್ತುತಿಗಾನ ಮೊಳಗಿಸುತ್ತಾ ಫ್ರಾನ್ಸ್ ಮಾರಾಟ ಸಾಮಾಗ್ರಿಗಳ ಬಹಿಷ್ಕಾರಕ್ಕೆ ಟೊಂಕ ಕಟ್ಟಿ ನಿಂತಿತು. “ಭಯೋತ್ಪಾದನೆ ಅಂಗೀಕರಿಸಲ್ಪಡುವಂತಹದಲ್ಲ. ಜಾತಿ ಮತ್ತು ಧರ್ಮದ ವಿರುದ್ಧ ಹೆಡೆಯೆತ್ತಿದ ಎಲ್ಲಾ ವಿದ್ವೇಷಗಳನ್ನು ಬುಡ ಸಹಿತ ಕಿತ್ತೆಸೆಯಬೇಕಾಗಿದೆ. ಪ್ರವಾದಿಯವರನ್ನು ಅವಮಾನಿಸಿದ ಈ ಕೃತ್ಯ ಇಡೀ ಮುಸ್ಲಿಮ್ ಸಮುದಾಯವನ್ನು ಅವಮಾನಗೊಳಿಸಿರುವುದಕ್ಕೆ ಸಮಾನ. ಅಕ್ರಮಣ ಮಾಡಿದವವರಾರೋ ಅವರು ಶಿಕ್ಷಿಸಲ್ಪಡಬೇಕು. ನರಹತ್ಯೆಗೊಳಿಸಿದ ಅಕ್ರಮಿಗಳಿಗೆ ಶಿಕ್ಷೆಯ ದಳ್ಳುರಿ ಜಾರಿಗೊಳಿಸುವಿಕೆಯ ಕಿಂಚಿತ್ತೂ ಚಿಂತಿಲ್ಲದ ನಾಯಕನು ಅಮಾಯಕ ಜನರ ಮೇಲೆ ದಾಳಿ ನಡೆಸುತ್ತಿರುವುದು ಖಂಡನಾರ್ಹ. ಕತ್ತಾರ್ ಎಲ್ಲಾ ಕಾಲದಲ್ಲೂ ಸಹಿಷ್ಣುತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಅಂತರಾಷ್ಟ್ರೀಯ ಶಾಂತಿ ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಲೇ ಬಂದಿದೆ.ಆದುದರಿಂದ ಧಾರ್ಮಿಕ ಅಸಹಿಷ್ಣುತೆ ಮತ್ತು ವಿದ್ವೇಷ ಹರಡುವಿಕೆಯ ವಿರುದ್ಧ ಇಡೀ ಜಗತ್ತು ಎಚ್ಚೆತ್ತುಕೊಳ್ಳಬೇಕಾಗಿದೆ.” ಎಂದು ಕತ್ತಾರ್ ಪ್ರಪ್ರಥಮವಾಗಿ ಸಮೂಹ ಮಾಧ್ಯಮಗಳಲ್ಲಿ ಹೇಳಿಕೆ ನೀಡಿತು. ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರವೇ ಜನತೆಯ ಪೊರೆಯದ ನಾಯಕನಿಗೆ ತಕ್ಕ ಪಾಠವೆಂದು ಕತ್ತಾರ್ ರಂಗಕ್ಕಿಳಿಯಿತು.
ಇಂದು ಮಾರುಕಟ್ಟೆಯಲ್ಲಿ ಫ್ರೆಂಚ್ ಉತ್ಪನ್ನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಲು ಉತ್ಪಾದನಾ ಸಾಮಾಗ್ರಿಗಳು ಮತ್ತು ಸುಗಂಧ ದ್ರವ್ಯಗಳ ಮಾರಾಟದಲ್ಲಿ ಫ್ರಾನ್ಸ್ ಹೆಸರುವಾಸಿ. ಮೊರಾಕ್ಕೋನಲ್ಲಿ ಫ್ರಾನ್ಸ್ ಹಾಲು ಉತ್ಪಾದನಾ ಸಾಮಾಗ್ರಿಗೆ ಬೇಡಿಕೆ ದುಪ್ಪಟ್ಟು. ಸೌದಿ ಅರೇಬಿಯಾದಲ್ಲಿ ಡ್ಯಾನೋನ್ ಎಂಬ ಹಾಲು ಉತ್ಪಾದನಾ ಸಾಮಾಗ್ರಿ ಜನಜನಿತ. ಅದೇ ರೀತಿ ಕೆಳಗೆ ಸೂಚಿಸಲಾದ ಫ್ರಾನ್ಸಿನ ಮಾರಾಟ ಸಾಮಾಗ್ರಿಗಳು ಎಲ್ಲಾ ದೇಶಗಳಲ್ಲೂ ಅತೀ ಹೆಚ್ಚು ಬೇಡಿಕೆಯುಳ್ಳ ವಸ್ತುಗಳು. ಇಂದು ಅವೆಲ್ಲವು ಫ್ರಾನ್ಸಿನ ವಿರುದ್ಧ ಬಹಿಷ್ಕರಿಸಲ್ಪಡುತ್ತಿದೆ. ಮತ್ತೊಂದು ವಿಶೇಷ ಸುದ್ಧಿಯೇನೆಂದರೆ ವಿಶ್ವದಲ್ಲಿ ಎಲ್ಲೇ ಗಲಭೆಯೆದ್ದರೂ ಯಾವಾಗಲು ಮೌನ ಪಾಲಿಸಿ ಉಪಾಯದಿಂದ ನುಣುಚಿಕೊಳ್ಳುತ್ತಿರುವ ಸೌದಿ ಅರೇಬಿಯಾ ಇಂದು ಫ್ರಾನ್ಸಿನ ವಿರುದ್ಧ ಧ್ವನಿಯೆತ್ತಿರುವುದು ಗಮನಾರ್ಹ. ಅದು ಫ್ರಾನ್ಸಿನ ಎಲ್ಲಾ ಸಾಮಾಗ್ರಿಗಳನ್ನು ಬಹಿಷ್ಕರಿಸುತ್ತಾ ಇತರ ರಾಷ್ಟ್ರಗಳೊಂದಿಗೆ ಕೈ ಜೋಡಿಸಿದೆ. ಅಲ್ಲದೆ ಅಪ್ರೋಡ್ ಮಾರ್ಕೆಟ್ ಎಕ್ಸಪೋರ್ಟ್ ಝೋನ್ , ಫುಲೂದ ಫಾರ್ಮಸಿ , ಲೇಟ್ರೇಲ್ ಬ್ರೂಕ್ ರೆಸ್ಟೋರೆಂಟ್ ಎಲ್ಲವು ಇಂದು ಫ್ರಾನ್ಸಿನ ವಿರುದ್ಧ ಬಹಿಷ್ಕಾರದ ಧ್ವನಿಯೆತ್ತಿದೆ. ಕತ್ತಾರ್ ಶೋಪಿಂಗ್ ಕಾಂಪ್ಲೆಕ್ಸ್ , ಹೈಪರ್ ಮಾರ್ಕೆಟ್ , ಸೂಕ್ ಅಲ್ ಬಲಾದಿ ಮೊದಲಾದ ಹೋಮ್ ಡೆಲಿವರಿ ಆ್ಯಪ್ ಗಳು ಬಹಿಷ್ಕರಿಸಲು ಸಿದ್ಧವಾಗಿವೆ. ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಹದಗೆಡಬಹುದೆಂದು ನಾಶ ವಿನಾಶದ ಬಿಸಿ ತಟ್ಟಿದ ಫ್ರಾನ್ಸಿನ ಸಂಸ್ಕೃತಿ ಸಚಿವ ರೋಸ್ಲಿನ್ ಬ್ಯಾಚ್ಲೋಟ್ ಶಾಂತಿ ಸಂಧಾನಕ್ಕೆ ಆಗ್ರಹಿಸುತ್ತಿರುವ ವಿಷಯ ಕೇಳಿ ಬರುತ್ತಿದೆ. ಇಲ್ಲದಿದ್ದರೆ ತಾನೇ ತೋಡಿದ ಗುಂಡಿಗೆ ತಾನೇ ಬಿದ್ದು ಎರಡನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಗಳ ಗುಂಪು ನರಹತ್ಯೆಯ ಇತಿಹಾಸವನ್ನು ಫ್ರಾನ್ಸ್ ಮತ್ತೊಮ್ಮೆ ಬರೆಯಬೇಕಾದೀತು.
ಆದರೆ ಇಲ್ಲೊಂದು ವಿಚಾರ ಪ್ರಶಂಸಾರ್ಹ. ಎರಡು ವಿಧದ ಜನರನ್ನು ಪ್ರತೀ ಧರ್ಮಗಳಲ್ಲೂ ಕಾಣಬಹುದು. ಎಲ್ಲಾ ಧರ್ಮಗಳಲ್ಲಿ ಅಮಾಯಕರನ್ನು ನರಿನಾಯಿಗಳ ಹಾಗೆ ತುರಿದು ತಿನ್ನುವವರಿರುವರೋ ಹಾಗೆಯೇ ಭಾತೃತ್ವ ಬೆಸೆಯುವ ಕೊಂಡಿಗಳಿರುವುದು ಆಶಾದಾಯಕ. ಅಧ್ಯಾಪಕನ ರುಂಡಚ್ಛೇಧ ಮಾಡಿದ ಕಿರಾತಕರ ಸಮುದಾಯದ ಧರ್ಮ ನೇತಾರರು, ಫ್ರಾನ್ಸ್ ಲ್ಯಾಂಡ್ ಮೋಸ್ಕೋ ಪ್ಯಾರಿಸಿನ ಇಮಾಮರು ಹಾಗೂ ಇನ್ನಿತರ ಶಾಂತಿವಾಹಕರು ಸ್ಯಾಮ್ಯೋಲ್ ಪಾಟಿಯವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ನೀಡಿ ಕಕ್ಕುಲಾತಿಯ ಕರಣ ಚಾಚಿರುವರು. ಫ್ರಾನ್ಸಿನ ಪುಟ್ಬಾಲ್ ಕಪ್ತಾನ್ ಇದೀಗಲೇ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಮನುಷ್ಯ ಸ್ನೇಹಕ್ಕೆ ಜೊತೆಯಾಗಿರುವುದು ಅಭಿನಂದನಾರ್ಹ. ಅಷ್ಟರಲ್ಲೇ ನಿನ್ನೆ ನಡೆದ ಘಟನೆಯ ಪರಿಸ್ಥಿತಿಯ ಗಂಭೀರತೆಯು ಮಗದೊಮ್ಮೆ ಫ್ರಾನ್ಸನ್ನು ವ್ಯಥೆಗೀಡಾಗಿಸಿದೆ.
ಪ್ರಜಾಪ್ರಭುತ್ವ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯಗಳ ಹರಣವೇ ಶಾಂತಿ ತರಂಗಗಳನ್ನು ಕದಡುವ ಕಲ್ಲುಗಳು. ಕ್ಷೋಭೆಗಳನ್ನು ಸೃಷ್ಟಿಸುವ ಅನ್ಯಾಯಗಳ ಹುತ್ತಗಳು ಹೊಡೆದುರುಳಿಸುವಂತಾಗಬೇಕು. ಪ್ರವಾದಿವರ್ಯರು (ಸ) ಅನ್ಯಾಯವನ್ನು ನಿಷಿದ್ಧವೆಂದು ಎಚ್ಚರಿಸಿರುವರು. ಅವರು ಈ ರೀತಿ ಹೇಳುತ್ತಾರೆ , “ಅಲ್ಲಾಹನು ಹೇಳುತ್ತಾನೆ ; ನನ್ನ ದಾಸರೇ , ನಾನು ಅನ್ಯಾಯವನ್ನು ನನ್ನ ಮೇಲೆ ನಿಷಿದ್ಧಗೊಳಿಸಿರುವೆನು ಮತ್ತು ನಿಮ್ಮ ನಡುವೆಯೂ ಅದನ್ನು ನಿಷಿದ್ಧಗೊಳಿಸಿರುವೆನು. ಆದ್ದರಿಂದ ನೀವು ಪರಸ್ಪರರ ಮೇಲೆ ಅನ್ಯಾಯವೆಸಗದಿರಿ.”
ಯಾರು ಇತರರನ್ನು ಅನ್ಯಾಯವಾಗಿ ಕೊಲ್ಲುತ್ತಾನೋ ಅವನೇ ಕೊಲೆಯ ಪ್ರತಿಕಾರವನ್ನು ಅನುಭವಿಸಲ್ಪಟ್ಟರೆ ಸಮಾಜದಲ್ಲಿ ಸ್ವಸ್ಥ ಗಾಳಿ ಸೇವನೆ ಮರುಜೀವ ಹುಟ್ಟಿಸುವಿಕೆಗೆ ದ್ಯೋತಕವಾಗಬಹುದು. ಅಮಾಯಕರ ಮಾರಣಹೋಮ ಮತ್ತೊಂದು ಸಮಸ್ಯೆಯ ಪುನರಾವರ್ತನೆ. ಕೊಲೆಯ ಮೊಕದ್ದಮೆಯ ಪ್ರತಿಕಾರಗಳು ನ್ಯಾಯಯುತವಾಗಿರಬೇಕು. ಕುರ್ ಆನ್ ಹೇಳುತ್ತದೆ ;
” ಓ ಸತ್ಯವಿಶ್ವಾಸಿಗಳೇ , ನಿಮಗೆ ಕೊಲೆಯ ಮೊಕದ್ದಮೆಗಳಲ್ಲಿ ಪ್ರತಿಕಾರವನ್ನು ಶಾಸನಗೊಳಿಸಲಾಗಿದೆ. ಸ್ವತಂತ್ರನು ವಧಿಸಿದರೆ ಆ ಸ್ವತಂತ್ರನೊಂದಿಗೇ ಸೇಡು ತೀರಿಸಬೇಕು. ಗುಲಾಮನು ಘಾತಕನಾದರೆ ಆ ಗುಲಾಮನೇ ವಧಿಸಲ್ಪಡಬೇಕು ಮತ್ತು ಸ್ತ್ರೀಯು ಅಪರಾಧವೆಸಗಿದರೆ ಆ ಸ್ತ್ರೀಯೊಂದಿಗೇ ಪ್ರತಿಕಾರವೆಸಗಬೇಕು.”
(ಪ.ಕು.- 2 : 178)
ಭೂಮಿಯಲ್ಲಿ ಬದುಕಿರುವವರೆಗೆ ಎಲ್ಲರು ಒಬ್ಬರಿಗೊಬ್ಬರು ಅವಲಂಬಿತರು. ಪರಸ್ಪರ ಧರ್ಮಗಳೊಳಗೆ ಕೊಡುಕೊಳ್ಳುವಿಕೆಯೊಂದಿಗೆ ವಿವಿಧ ಧರ್ಮಗಳ ಉನ್ನತ ಗುಣಗಳನ್ನರಿತು ಅವಾಹಿಸಿಕೊಂಡು ಅವಹೇಳನ ಮಾಡುವ , ಮಾನವ ಹತ್ಯೆಗೈಯ್ಯವ ದ್ವೇಷ ಕಾರುವ ಕ್ರಿಮಿಗಳನ್ನೆಲ್ಲ ಸೌಹಾರ್ದತೆಯ ಮದ್ದನ್ನೀಯಿಸಿ ನಾಶಗೊಳಿಸಬೇಕು. ಆ ಕೊಳಕು ಅನಾರೋಗ್ಯಕರ ಮೆದುಳುಗಳಲ್ಲಿ ಪ್ರಜ್ಞಾವಂತ ವಿಚಾರಗಳನ್ನು ತುಂಬಬೇಕು. ಇದುವೇ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆಗ್ರಹವಾಗಿರಬೇಕು. ಅನ್ಯಾಯಗಳೊಂದಿಗೆ ಅಕ್ರಮಿಗಳ ನಾಶವನ್ನು ಜಗತ್ತು ಕಾಣಬೇಕು. ಎಂದೆಂದಿಗೂ ಆ ವಿಷಸರ್ಪಗಳು ಮತ್ತೊಮ್ಮೆ ಹೆಡೆಯೆತ್ತಿ ನಿಲ್ಲದಂತಾಗಬೇಕು.












