ಸನ್ಮಾರ್ಗ ವಾರ್ತೆ
ಬಸವಕಲ್ಯಾಣ: ಕರ್ನಾಟಕ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಜಾನುವಾರು ಹತ್ಯಾ ನಿಷೇಧ ಕಾನೂನಿಗೆ ದಲಿತರು, ರೈತರು, ಕೂಲಿಕಾರರು ಹಾಗೂ ಮುಸ್ಲಿಮರನ್ನೂ ಒಳಗೊಂಡಂತೆ ವಿವಿಧ ಸಮುದಾಯಗಳ ನಾಯಕರು ಬಲವಾದ ವಿರೋಧ ವ್ಯಕ್ತಪಡಿಸಿದರು. ಅಲ್-ಜಮೈತುಲ್ ಖುರೇಷ್ ಸಂಘಟನೆಯು ಮಂಗಳವಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಂಘಟಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿವಿಧ ಸಮುದಾಯಗಳ ನಾಯಕರು ಯಾವುದೇ ಕಾರಣಕ್ಕೂ ಸರ್ಕಾರ ಇಂತಹ ಜನವಿರೋಧಿ ಕಾನೂನನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ವಿವಿಧ ಸ್ಥಳಗಳಿಂದ ದಲಿತರು, ರೈತರು, ಕೃಷಿ ಕಾರ್ಮಿಕರು, ಬಂಜಾರರು ಮುಂತಾದ ಸಮುದಾಯಗಳ ಸಾವಿರಾರು ಜನರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಖಾಸಿಂ ಅಲಿಯವರು ಈ ಪ್ರಸ್ತಾಪಿತ ಕಾನೂನಿನಿಂದ ಕೇವಲ ಮುಸ್ಲಿಮರು ಮಾತ್ರವಲ್ಲದೇ ಎಲ್ಲಾ ಸಮುದಾಯಗಳ ಬಡವರು ಬಾಧಿತರಾಗಲಿದ್ದಾರೆ ಎಂದು ಹೇಳಿದರು.
“ಮೇಲ್ನೋಟಕ್ಕೆ ಇದು ಮುಸ್ಲಿಮ್ ವಿರೋಧಿ ಕಾನೂನು ಎಂಬಂತೆ ಕಾಣುತ್ತದೆ. ಆದರೆ, ವಾಸ್ತವದಲ್ಲಿ ಇದು ಎಲ್ಲಾ ಸಮುದಾಯಗಳ ಬಡವರಿಗೆ ವಿರುದ್ಧವಾಗಿರುವ ಕಾನೂನಾಗಿದೆ. ಈ ಕಾನೂನು ಕೇವಲ ಗೋವಿನ ಹತ್ಯೆಯನ್ನು ಮಾತ್ರವಲ್ಲ, ಎತ್ತು, ಎಮ್ಮೆ, ಕೋಣಗಳಂತಹ ಇತರ ಜಾನುವಾರುಗಳ ಹತ್ಯೆಯನ್ನೂ ನಿಷೇಧಿಸುತ್ತದೆ. ಪ್ರವಾಹ, ಬರಗಾಲಗಳಂತಹ ಪ್ರಾಕೃತಿಕ ವಿಕೋಪಗಳ ಕಾರಣಕ್ಕಾಗಿ ನಮ್ಮ ರೈತರಿಗೆ ಕೃಷಿಯಿಂದ ಬರುವ ಆದಾಯ ಯಾವಾಗಲೂ ಅನಿಶ್ಚಿತವಾಗಿರುತ್ತದೆ. ಆದ್ದರಿಂದಲೇ ಅವರು ಆಕಳು, ಎಮ್ಮೆಗಳಂತಹ ಪ್ರಾಣಿಗಳನ್ನೂ ಸಾಕುತ್ತಾರೆ ಹಾಗೂ ಕಷ್ಟ ಕಾಲದಲ್ಲಿ ಅವುಗಳನ್ನು ಮಾರಿ ಬದುಕುತ್ತಾರೆ. ಈ ಕಾನೂನು ಪ್ರಮುಖ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಿದರೆ ಅವುಗಳನ್ನು ಕೊಂಡುಕೊಳ್ಳುವುದಕ್ಕೆ ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ, ರೈತರಿಗೆ ಅದರಿಂದ ಬರುವ ಆದಾಯವೂ ತಪ್ಪುತ್ತದೆ” ಎಂದು ನುಡಿದರು.
ದೇಶದ ಜನಸಂಖ್ಯೆಯಲ್ಲಿ ಮಾಂಸಾಹಾರಿಗಳೇ ಬಹುಸಂಖ್ಯಾತರು ಎಂದು ಅಧಿಕೃತ ಅಂಕಿಅಂಶಗಳ ಮೂಲಕ ಪ್ರತಿಪಾದಿಸಿದ ಖಾಸಿಂ ಅಲಿ ಅವರು ಈ ಜಾನುವಾರು ಹತ್ಯೆಯ ನಿಷೇಧದಿಂದ ಒಕ್ಕಲಿಗರು ಮತ್ತು ಮರಾಠರನ್ನೂ ಒಳಗೊಂಡಂತೆ ಎಲ್ಲಾ ಮಾಂಸಹಾರಿ ಸಮುದಾಯಗಳ ಜನರೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
“ಜಾನುವಾರು ಹತ್ಯೆಯ ನಿಷೇಧದ ಮೂಲಕ ಸರ್ಕಾರ ಬಹಳಷ್ಟು ಮಾಂಸಾಹಾರವನ್ನೇ ನಿಷೇಧಿಸಲು ಹೊರಟಿದೆ. ದನ, ಎಮ್ಮೆ, ಕೋಣಗಳ ಮಾಂಸಾಹಾರ ನಿಷೇಧವಾದರೆ ಪ್ರೋಟೀನ್ ಆಹಾರಕ್ಕೆ ಕೊರತೆ ಉಂಟಾಗುತ್ತದೆ. ಹಣವಂತ ಮಾಂಸಾಹಾರಿಗಳು ಸಸ್ಯಾಹಾರದ ಕಡೆ ವಾಲಿದರೆ ಬೇಳೆಕಾಳು, ತರಕಾರಿಗಳ ಬೆಲೆ ಗಗನಕ್ಕೇರುತ್ತದೆ. ಅದರಿಂದ ಬಡ ಸಸ್ಯಾಹಾರಿಗಳಿಗೆ ಅವು ಕೈಗೆಟುಕದಂತಾಗುತ್ತವೆ. ಹಾಗಾಗಿ ಈ ಕಾನೂನು ಕೇವಲ ಮಾಂಸಾಹಾರಿಗಳಿಗೆ ಮಾತ್ರವಲ್ಲದೇ ಸಸ್ಯಾಹಾರಿಗಳಿಗೂ ನಷ್ಟ ಮಾಡುತ್ತದೆ,” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೇಪರ್ ಬಗ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕ ಮುಜಾಹಿದ್ ಪಾಶಾ ಖುರೇಷಿ, ಭಾರತವು ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳನ್ನು ಪರಿಪಾಲಿಸುವ ಹಲವು ಜಾತಿ, ಧರ್ಮ, ಪಂಗಡಗಳ ನೆಲೆವೀಡಾಗಿದ್ದು ಯಾವುದೇ ಒಂದು ಜನಸಮುದಾಯವು ತನ್ನ ಆಚಾರ ವಿಚಾರಗಳೇ ಶ್ರೇಷ್ಠವೆಂದು ಪ್ರತಿಪಾದಿಸುತ್ತಾ ಅವುಗಳನ್ನು ಇತರ ಸಮುದಾಯಗಳ ಮೇಲೆ ಹೇರುವುದು ಬಹುತ್ವ ಪರಂಪರೆ ಭಾರತದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಹೇಳಿದರಲ್ಲದೇ ಶಾಂತಿಯುತವಾಗಿ ಕೂಡಿಬಾಳುವ ಜನಸಮುದಾಯಗಳ ನಡುವೆ ಒಡಕು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಶಕ್ತಿಗಳನ್ನು ಚುನಾವಣೆಯ ಮೂಲಕ ಸೋಲಿಸಬೇಕೆಂದು ಕರೆನೀಡಿದರು.
“ಕರ್ನಾಟಕ ಸರ್ಕಾರ ಈಗ ತರಲು ಹೊರಟಿರುವ ಗೋಹತ್ಯಾ ಕಾನೂನು ಕೇವಲ ಗೋವುಗಳಿಗೆ ಸಂಬಂಧಿಸಿದ್ದಲ್ಲ. ಗೋವಿನ ಜೊತೆಗೆ ಎತ್ತು, ಎಮ್ಮೆಗಳಂತಹ ಇತರ ಪ್ರಾಣಿಗಳ ಹತ್ಯೆಯನ್ನೂ ನಿಷೇಧಿಸುತ್ತದೆ. ಸಮಾಜವಿರೋಧಿ ಪುಂಡರು, ಗೂಂಡಾಗಳು ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕ ಬಡವರ ಮೇಲೆ ದಾಳಿ ಮಾಡುವುದಕ್ಕೆ, ಅವರ ಜಾನುವಾರುಗಳನ್ನು ವಶಪಡಿಸಿಕೊಳ್ಳುವುದಕ್ಕೆ, ಅವರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡುವುದಕ್ಕೆ ಹಾಗೂ ಅವರಿಗೆ ನಿರಂತರವಾಗಿ ಕಿರುಕುಳ ನೀಡುವುದಕ್ಕೆ ಪ್ರಚೋದನೆ ನೀಡುತ್ತದೆ. ಅಮಾಯಕರನ್ನು ಶೋಷಿಸಲು, ದಮನಿಸಲು ನೆರವಾಗುವಂತೆ ಈ ಕಾನೂನಿನಲ್ಲಿ ಅಪರಾಧಿಗಳಿಗೆ ಐದು ವರ್ಷಗಳ ಕಾರಾಗ್ರಹ ಶಿಕ್ಷೆ, ಒಂದು ಲಕ್ಷ ರೂಪಾಯಿತನಕ ದಂಡ ಹಾಗೂ ಪ್ರಾಣಿಗಳನ್ನು ಸಾಗಿಸುವ ವಾಹನದ ಜಪ್ತಿ ಮುಂತಾದ ಕಠಿಣ ಕ್ರಮಗಳನ್ನು ಸೇರಿಸಲಾಗಿದೆ. ಈ ಕಾನೂನು ಕೇವಲ ಬಡವರನ್ನಷ್ಟೇ ಗುರಿಯಾಗಿಸಿಕೊಂಡಿದೆಯೇ ಹೊರತು ಗುಲಾಬಿ ಕ್ರಾಂತಿಯ ಹೆಸರಿನಲ್ಲಿ ಗೋಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡುತ್ತಿರುವ ದೊಡ್ಡ ದೊಡ್ಡ ಕಂಪನಿಗಳಿಗೆ ನಿರ್ಬಂಧ ಹೇರುವುದಿಲ್ಲ. ವಾಸ್ತವದಲ್ಲಿ, ಗೋರಕ್ಷಣೆ ಅವರ ಉದ್ದೇಶವಲ್ಲ, ಬದಲಿಗೆ ಗೋವಿನ ಹೆಸರಿನಲ್ಲಿ ತಮ್ಮ ರಾಜಕೀಯ ಅಜೆಂಡಾವನ್ನು ಜಾರಿ ಮಾಡುವುದು, ಇಂತಹ ಭಾವನಾತ್ಮಕ ವಿಷಯಗಳನ್ನು ಮುಂದೆ ತಂದು ಜನರಲ್ಲಿ ಒಡಕು ಮೂಡಿಸಿ ತಮ್ಮ ಹಿಂದೂ ಮತಬ್ಯಾಂಕನ್ನು ಗಟ್ಟಿಗೊಳಸಿಕೊಂಡು ಅಧಿಕಾರಕ್ಕೇರುವುದು ಅವರ ಉದ್ದೇಶವಾಗಿದೆ. ಇಂತಹ ಕರಾಳ ಕಾನೂನಿನ ಮೂಲಕ ಬಡ ಸಮುದಾಯಗಳನ್ನು ದಮನಿಸಲು ಹೊರಟಿರುವ ಪ್ರಭುತ್ವಕ್ಕೆ ನಾವು ಚುನಾವಣೆಗಳ ಮೂಲಕ ಪ್ರತ್ಯುತ್ತರ ನೀಡಬೇಕಿದೆ. ಈಗ ಗ್ರಾಮ ಪಂಚಾಯತಿ ಚುನಾವಣೆಗಳು ಘೋಷಣೆಯಾಗಿದ್ದು ಸರ್ಕಾರದ ವೈಫಲ್ಯಗಳನ್ನು ಹಾಗೂ ಅದು ತರಲು ಹೊರಟಿರುವ ಜನವಿರೋಧಿ ಕಾನೂನುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ ಮಾಡಬೇಕಿದೆ. ಹಾಗೂ ಭವಿಷ್ಯದಲ್ಲಿ ಭಾರತದ ಬಹುತ್ವ ಪರಂಪರೆಯನ್ನು ಎತ್ತಿ ಹಿಡಿಯುವ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಬೆಳೆಸಬೇಕಿದೆ” ಎಂದು ಖುರೇಷಿಯವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಅಸ್ಲಾಂ ಅವರು ಮಾತನಾಡಿ, ಭಾರತದಲ್ಲಿ ಗೋವು ಹಾಲು ನೀಡಿದ್ದಕ್ಕಿಂತ ಮತಗಳನ್ನು ನೀಡಿದ್ದೇ ಹೆಚ್ಚು ಎಂದು ಪರೋಕ್ಷವಾಗಿ ಬಿಜೆಪಿಯ ಗೋರಕ್ಷಣಾ ಅಜೆಂಡಾವನ್ನು ಕುಟುಕಿದರು. “ಗೋವನ್ನು ಹಾಲಿಗಿಂತಲೂ ಹೆಚ್ಚಾಗಿ ಚುನಾವಣೆಯ ಮತಗಳಿಗೆ ಹೆಚ್ಚು ಬಳಸಿಕೊಳ್ಳಲಾಗಿದೆ. ಜಾನುವಾರು ಹತ್ಯೆಯನ್ನು ನಿಷೇಧಿಸಿದರೆ ಜಾನುವಾರು ಸಾಕಾಣೆ, ಸಾಗಾಣೆ, ಮಾರಾಟಗಳಂತಹ ವ್ಯವಹಾರದಲ್ಲಿ ತೊಡಗಿರುವ ದೊಡ್ಡ ಪ್ರಮಾಣದ ಜನರು ನಿರುದ್ಯೋಗಿಗಳಾಗಲಿದ್ದಾರೆ,” ಎಂದು ಅವರು ಎಚ್ಚರಿಸಿದರು.
ಕ್ರಿಶ್ಚಿಯನ್ ಸಮುದಾಯದ ನಾಯಕ ಅರ್ಜುನ್ ಕನಕ್ ಅವರು ಮಾತನಾಡುತ್ತಾ, ಆಹಾರದ ಆಯ್ಕೆಯು ಒಂದು ಮೂಲಭೂತ ಹಕ್ಕಾಗಿದ್ದು ಅದನ್ನು ಯಾವುದೇ ರೂಪದಲ್ಲಿ ಕಿತ್ತುಕೊಳ್ಳುವುದು ಸಂವಿಧಾನ ವಿರೋಧಿಯಾಗಿದೆ ಎಂದರು. “ನಾವು ಏನನ್ನು ಉಣ್ಣಬೇಕು, ಏನನ್ನು ಉಡಬೇಕು ಎಂಬುದೆಲ್ಲಾ ನಮ್ಮ ಮೂಲಭೂತ ಹಕ್ಕುಗಳು. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಈ ಹಕ್ಕುಗಳನ್ನು ಬಿಜೆಪಿ ಕಸಿದುಕೊಳ್ಳುತ್ತಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು” ಎಂದು ಅವರು ಜನರಿಗೆ ಕರೆ ನೀಡಿದರು.
ಅಲ್-ಜಮೈತುಲ್ ಖುರೇಷ್ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಸತ್ತಾರ್ ಅವರು ಮಾತನಾಡುತ್ತಾ, ಹೋರಾಟವಿಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರಲ್ಲದೇ ಜಾನುವಾರು ಹತ್ಯೆಯಂತಹ ಕರಾಳ ಕಾನೂನನ್ನು ಹಿಂಪಡೆಯುವಂತೆ ಮಾಡುವುದಕ್ಕೆ ಹೋರಾಟವೊಂದೇ ಮಾರ್ಗ ಎಂದರು.
ಸಮಾವೇಶದಲ್ಲಿ ರೈತ ನಾಯಕರಾದ ಚಂದ್ರಕಾಂತ್ ಮತ್ತು ಸುಭಾಷ್ ರಕ್ಟೆ, ದಲಿತ ನಾಯಕ ಮನೋಹರ್ ಮೈಸೆ, ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ಕಾರ್ಯದರ್ಶಿ ಮೆರಾಜುದ್ದೀನ್, ಬಹುಜನ ಮುಕ್ತಿ ಮೋರ್ಛಾದ ಮಿಲಿಂದ್ ಹುಬಾರೆ, ಅಲ್-ಜಮೈತುಲ್ ಖುರೇಷ್ ಸಂಘಟನೆಯ ಬಸವಕಲ್ಯಾಣದ ನಾಯಕ ಅಬ್ದುಲ್ ಹಮೀದ್ ಖುರೇಷಿ, ಬೀದರಿನ ಜೆಡಿಎಸ್ ನಾಯಕ ನಭಿ ಖುರೇಷಿ,, ಗುಲ್ಬುರ್ಗಾದ ರಶೀದ್ ಖುರೇಷಿ, ಅಬ್ದುಲ್ ಗಫಾರ್ ಖುರೇಷಿ, ಮಾದಿಗ ಸಮುದಾಯದ ನಾಯಕ ಯುವರಾಜ್ ಭೆಂಡೆ ಮುಂತಾದ ನಾಯಕರು ಮಾತಾಡಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.













