ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.3: ಕೊಚ್ಚಿ ರಿಫೈನರಿ ಸಹಿತ ವಿಫುಲವಾದ ಇಂಧನ ಸಂಸ್ಕರಣೆ, ಮಾರಾಟ ವ್ಯವಸ್ಥೆಯಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನ ಶೇರುಗಳ ಮಾರಾಟದ ಪ್ರಕ್ರಿಯೆಯನ್ನು ಕೊರೋನ ಕಾಲದ ಮಾಂದ್ಯದ ನಡುವೆಯೂ ಮುಂದುವರಿಸಲು ಕೇಂದ್ರ ಸರಕಾರ ಮುಂದಾಗಿದೆ. ಮಾರಾಟಕ್ಕೆ ಸಿದ್ಧವಾದ ಶೇ.53 ಶೇರುಗಳ ಖರೀದಿಗೆ ಮೂರು ಕಂಪೆನಿಗಳು ಆಸಕ್ತಿ ವಹಿಸಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಚಿನ್ನದ ಮೊಟ್ಟೆಗಳಿಡುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯ ಶೇರುಗಳನ್ನು ಮಾರಿ 43,000 ಕೋಟಿ ರೂಪಾಯಿ ಸಂಗ್ರಹಿಸುವುದು ಸರಕಾರದ ಉದ್ದೇಶವಾಗಿದೆ. ಗಣಿಗಾರಿಕೆಯ ಅತಿಕಾಯರಾದ ವೇದಾಂತ ಕಂಪೆನಿ ಖರೀದಿಗೆ ಸಿದ್ಧವಾಗಿದೆ ಎಂದು ಹೇಳಿತ್ತು. ಅಪೊಲೊ ಗ್ಲೋಬಲ್ ಮ್ಯಾನೇಜ್ಮೆಂಟ್ ಸಹಿತ ಜಾಗತಿಕ ಪ್ರಮುಖ ಕಂಪೆನಿಗಳು ಶೇರು ಖರೀದಿಗೆ ಮುಂದಾಗಿದೆ ಎಂದು ಸಚಿವರು ಹೇಳಿದ್ದು ಹೆಸರನ್ನು ಬಹಿರಂಗಪಡಿಸಿಲ್ಲ.
ಕಳೆದ ನವೆಂಬರಿನಲ್ಲಿ ಶೇರು ಮಾರಾಟವನ್ನು ಸರಕಾರ ಘೋಷಿಸಿತ್ತು. ಖರೀದಿಗೆ ಅರ್ಜಿ ಸಲ್ಲಿಸುವ ಸಮಯ ನಿಗದಿಗೊಳಿಸಿದ್ದನ್ನು ಈಗಾಗಲೇ ನಾಲ್ಕು ಬಾರಿ ಮುಂದೂಡಲಾಗಿತ್ತು. ಒಂದು ವರ್ಷದಲ್ಲಿ ಬಿಪಿಸಿಎಲ್ನ ಶೇರು ಬೆಲೆ ನಾಲ್ಕರಲ್ಲಿ ಒಂದರಷ್ಟು ಕುಸಿತವಾಗಿದೆ. ಈಗ ಮಾರಿದರೆ ಖಜಾನೆಗೆ ಭಾರೀ ನಷ್ಟ ಸಂಭವಿಸಲಿದೆ.












