ED ದಾಳಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹೀನ ತಂತ್ರ: ಪಾಪ್ಯುಲರ್ ಫ್ರಂಟ್

0
523

ಸನ್ಮಾರ್ಗ ವಾರ್ತೆ

ಕೇರಳ,ಡಿ.3: ಸರಕಾರ ಸಮಸ್ಯೆಯಲ್ಲಿರುವಾಗ ಜನರ ಗಮನವನ್ನು ಬೇರೆಡೆಗೆ ಹರಿಸಲು ಕೈಗೊಳ್ಳುವ ಹೀನವಾದ ತಂತ್ರವೆಂದು ಪಾಪ್ಯುಲರ್ ಫ್ರಂಟ್ ನಾಯಕರ ಮನೆಗೆ ಎನ್‍ಫೋರ್ಸ್‍ಮೆಂಟ್ ನಡೆಸಿದ ದಾಳಿಗೆ ಪಾಪ್ಯುಲರ್ ಫ್ರಂಟ್ ನಾಯಕರಾದ ಒ.ಎಂ.ಎ ಸಲಾಮ್, ನಾಸರುದ್ದೀನ್ ಎಳಮರಂ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರೂ ಪಾರ್ಟಿಯ ಸಭೆಯಲ್ಲಿ ಭಾಗವಹಿಸುತ್ತಿದ್ದು ಬುಧವಾರ ಬೆಳಗ್ಗೆ ಎಂಟು ಗಂಟೆಗೆ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ಒ.ಎಂ.ಎ ಸಲಾಮ್ ಮತ್ತು ಮಂಜೇರಿಯ ನಾಸರುದ್ದೀನ್ ಎಳಮರಂರ ಮನೆಗೆ ಇಡಿ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದರು.

ಪೌರತ್ವ ಪ್ರತಿಭಟನೆಯ ನಂತರ ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭಟನೆ ದಿಲ್ಲಿಯಲ್ಲಿ ನಡೆಯುವ ರೈತ ಪ್ರತಿಭಟನೆಯಾಗಿದೆ. ಅದರಿಂದ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಹರಿಸುವಂತೆ ಮಾಡುವುದಕ್ಕಾಗಿ ತಮ್ಮ ಮನೆಗಳಿಗೆ ಇಡಿ ದಾಳಿ ನಡೆಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ನಾಯಕರು ಆರೋಪಿಸಿದರು.

ರೈತ ಪ್ರತಿಭಟನೆಗೆ ಜನಬೆಂಬಲ ಸಿಕ್ಕಿದ್ದರಿಂದ ಮೋದಿ ಸರಕಾರದ ಮುಖ ವಿಕೃತವಾಗಿದೆ. ಯಾವುದೇ ಆರ್ಥಿಕ ಅಪರಾಧದಲ್ಲಿ ಪಾಪ್ಯುಲರ್ ಫ್ರಂಟ್ ಇಲ್ಲ. ಸಂಘಟನೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಜನವರಿಯಲ್ಲಿ ಇಡಿ ನೋಟಿಸು ನೀಡಿ ನಮ್ಮನ್ನು ಕರೆಯಿಸಿಕೊಂಡಿತ್ತು. ಹೇಳುವುದನ್ನೆಲ್ಲ ಹೇಳಿಯಾಗಿದೆ. ಯಾವುದೇ ತನಿಖೆಗೂ ಸಹಕರಿಸುತ್ತೇವೆ ಎಂದು ಅವರು ಹೇಳಿದ್ದಾರೆ.