ಸನ್ಮಾರ್ಗ ವಾರ್ತೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಬಗ್ಗೆ ಮೃದು ಧೋರಣೆ ಹೊಂದುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರ ಜೆಡಿಎಸ್ ಪಕ್ಷವು ಸಣ್ಣ ಮಕ್ಕಳ ಹಾಗೆ, ಮಿಠಾಯಿ ತೋರಿಸಿದವರ ಕಡೆಗೆ ಹೋಗುತ್ತದೆ ಎಂದು ವ್ಯಂಗ್ಯವಾಡುವ ಮೂಲಕ ವಿಧಾನ ಪರಿಷತ್ ಸದಸ್ಯ, ಹಳ್ಳಿ ಹಕ್ಕಿ ಎಂದು ಗುರುತಿಸಲ್ಪಡುವ ಹೆಚ್. ವಿಶ್ವನಾಥ್ ಜೆಡಿ ಎಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಜೆಡಿ ಎಸ್ ನ ನಡೆಗಳನ್ನು ಗಮನಿಸಿ ತಮ್ಮದೇ ಶೈಲಿಯಲ್ಲಿ ಕುಟುಕಿರುವ ವಿಶ್ವನಾಥ್, ನಮ್ಮ ರಾಜ್ಯದಲ್ಲಿ ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಬಿಜೆಪಿ ನಡುವಿನ ಒಂದು ಮಗುವಿದ್ದಂತೆ. ಯಾರು ತನಗೆ ಮಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಮಗು ಹೋಗುತ್ತದೆ. ಹಾಗೆಯೇ ಜೆಡಿಎಸ್ ಕೂಡ ಹೋಗುತ್ತದೆ ಎಂದು ವ್ಯಂಗ್ಯವಾಡಿದ್ದಲ್ಲದೇ, ಅವರ ಬಗ್ಗೆ ಹೆಚ್ಚು ಮಾತನಾಡುವ ಆಸಕ್ತಿ ತನಗಿಲ್ಲ ಎಂದಿದ್ದಾರೆ. ಅಧಿಕಾರ ಯಾರ ಬಳಿಯಲ್ಲಿರುತ್ತದೋ ಅವರನ್ನು ಜೆಡಿಎಸ್ ಬೆಂಬಲಿಸುತ್ತದೆ ಅಷ್ಟೇ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ತಿಗಿದ್ದ ಗೌರವ ಕಳೆದಿದ್ದೀವಿ
ಹಿರಿಯರ ಸದನ ಎಂದು ಕರೆಯಲ್ಪಡುವ ಮೇಲ್ಮನೆಯ ರಣಾಂಗಣಕ್ಕೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ಸಾರ್ವಭೌಮ ಸದನದ ಬಾಗಿಲನ್ನು ಹಲವರು ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಏನು ಗೌರವವಿದೆ. ಸದನದ ಗದ್ದಲವನ್ನು ವೇದನೆಯಿಂದ ನೋಡಿದೆ. ಭಾರತದ ಎಲ್ಲ ಸದನಗಳನ್ನು ನಮ್ಮ ವಿಧಾನ ಪರಿಷತ್ ಮೀರಿ ನಿಂತಿದೆ. ತನ್ನದೆ ಸಂಸ್ಕೃತಿಯನ್ನು ಇಡೀ ದೇಶದಲ್ಲಿ ಬಿಂಬಿಸಿದೆ. ಅಂತಹ ವಿಧಾನ ಪರಿಷತ್ನ ವಿಶಿಷ್ಟವಾದ ಸ್ಥಾನವನ್ನ ನಾವೆಲ್ಲಾ ಸೇರಿ ಗೌರವ ಕಳೆದಿದ್ದೀವಿ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.












