ಕೋಲಾರ ಐಫೋನ್ ಕಾರ್ಖಾನೆ ದಾಂಧಲೆ ಪ್ರಕರಣ: ಪ್ರಚೋದನೆ ಆರೋಪದಲ್ಲಿ ಎಸ್ ಎಫ್ ಐ ನಾಯಕನ ಬಂಧನ

0
464

ಸನ್ಮಾರ್ಗ ವಾರ್ತೆ

ರಾಜಕೀಯ ತಿರುವು ಪಡೆದ ಘಟನೆ

ಕೋಲಾರ: ಪ್ರತಿಷ್ಠಿತ ಐಫೋನ್‌ ಉತ್ಪಾದಕ ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ್ದಾರೆಂದು ಕೋಲಾರದ ಸಂಸದ ಎಸ್. ಮುನಿಸ್ವಾಮಿ ಗಂಭೀರ  ಆರೋಪ ಮಾಡಿದ ಬೆನ್ನಲ್ಲೇ ಕೋಲಾರ ಪೊಲೀಸರು ಎಸ್‌ಎಫ್‌ಐನ ತಾಲೂಕು ಅಧ್ಯಕ್ಷನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ನ ಬಿಡಿಭಾಗಗಳ ತಯಾರಿಕಾ ಘಟಕವಾದ ವಿಸ್ಟ್ರಾನ್‌ ಕಂಪೆನಿಯಲ್ಲಿ ಡಿ.12ರಂದು ನಡೆದ ದಾಂಧಲೆಗೆ ಸಿಪಿಎಂ ನ ವಿದ್ಯಾರ್ಥಿ ಸಂಘಟನೆ  ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ)  ತಾಲೂಕಾಧ್ಯಕ್ಷ ಶ್ರೀಕಾಂತ್‌ ಎಂಬಾತನನ್ನು ಪ್ರಚೋದನೆ ನೀಡಿದ್ದಾರೆಂದು ಹಾಗೂ ಕಂಪನಿಯನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆಂಬ ಆರೋಪದ ಮೇಲೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ಬಳಿಕ ಕೋಲಾರದ ಸಂಸದ ಮುನಿಸ್ವಾಮಿ ಈ ದಾಂಧಲೆಗೆ ವಿದ್ಯಾರ್ಥಿ ಸಂಘಟನೆ ಎಸ್ ಎಫ್ ಐ ನ ಕೈವಾಡ ಇದೆ.‌ ಕಾರ್ಮಿಕರಿಗೆ ಪ್ರಚೋದಿಸುವ ಮೂಲಕ ಈ‌ ಘಟನೆ ನಡೆಯಿತು ಎಂದು ಮಾಧ್ಯಮದ ಮೂಲಕ ಆರೋಪ ಮಾಡಿದ್ದರು. ಅವರ ಆರೋಪದ ಬೆನ್ನಿಗೇ ಪೊಲೀಸರು ವಿದ್ಯಾರ್ಥಿ ನಾಯಕನನ್ನು ಬಂಧಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಅಲ್ಲದೇ, ಸಂಸದನ ಆರೋಪದ ಬೆನ್ನಿಗೇ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದ ಎಬಿವಿಪಿ ಕರ್ನಾಟಕ ಘಟಕ, ಎಡಪಂಥೀಯ ವಿಚಾರವು ಯಾವಾಗಲೂ ಹಿಂಸೆಯನ್ನು ಆಧರಿಸಿದ್ದು ಎಂದು ಕೂಡಾ ಪೋಸ್ಟ್ ಮಾಡಿತ್ತು.

ರಾಜಕೀಯ ಪ್ರೇರಿತ ಹೇಳಿಕೆ ಎಂದಿದ್ದ ಎಸ್ ಎಫ್ ಐ

ವಿಸ್ಟ್ರಾನ್ ಘಟನೆಗೆ SFI ಸಂಘಟನೆಗೆ ಯಾವುದೇ ಸಂಬಂಧವಿಲ್ಲದಿದ್ದರೂ ಸಂಸದರು SFI ಬಗ್ಗೆ ಮಾಡಿರುವ ಆರೋಪ  ಅವರ ಅಜ್ಞಾನದ ಪರಮಾವಧಿ ಮತ್ತು ರಾಜಕೀಯ ಪ್ರೇರಿತ ಆಗಿದೆ.  ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಈ ರೀತಿ ಹೇಳಿಕೆ ನೀಡುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಸಂಸದ ಮುನಿಸ್ವಾಮಿ ತನಿಖೆಯ ಮುನ್ನವೇ ಈ ರೀತಿಯ ಪಕ್ಷಪಾತಿ ಆರೋಪಗಳನ್ನು ಹೊರಿಸುವುದರ ಹಿಂದೆ ರಾಜಕೀಯ ದುರುದ್ದೇಶದ ಅಜೆಂಡಾ ಅಡಗಿದೆ‌ ಎಂದು ಎಸ್ ಎಫ್ ಐ ನ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವ ರೆಡ್ಡಿ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದರು.

ಇನ್ನು ವಿಸ್ಟ್ರಾನ್ ಸಂಸ್ಥೆ ಪೊಲೀಸ್‌ ಕೇಸ್‌ ದಾಖಲಿಸಿದ್ದು ಮುನ್ನೂರು ಕೋಟಿಯಷ್ಟು ಸಲಕರಣೆಗಳಿಗೆ ಹಾನಿಯಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿತ್ತು. ಅಲ್ಲದೆ ಗುತ್ತಿಗೆ ನೌಕರರು, ಅಪರಿಚಿತರು ಸೇರಿ ಒಟ್ಟು 7000 ಮಂದಿ ವಿರುದ್ಧ ದೂರು ದಾಖಲಿಸಿತ್ತು.