ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇಂದ್ರ ಸರಕಾರದ ರೈತ ವಿರೋಧಿ ಕಾನೂನಿನ ವಿರುದ್ಧದ ಹೋರಾಟವು 23ನೇ ದಿವಸಕ್ಕೆ ಕಾಲಿಟ್ಟಿದೆ. ಸರಕಾರವು ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದೆ ವಾಪಾಸು ಹೋಗುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದೆಹಲಿಯ ಕಠಿಣ ಚಳಿಯಲ್ಲಿಯೂ ಕೂಡ ಅವರ ಹೋರಾಟದ ಸ್ಫೂರ್ತಿ ಬತ್ತಿಲ್ಲ. ಆದರೆ ಮಧ್ಯಾಹ್ನದ ಸುಡು ಬಿಸಿಲು ಅವರಿಗೆ ಅನುಗ್ರಹವಾಗಿ ಪರಿವರ್ತನೆಯಾಗುತ್ತಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಲ್ಲಿ ದಿಲ್ಲಿ-ಗಾಝಿಯಾಪುರ ಗಡಿಗೆ ಬಂದ ರೈತರು ಸೋಲಾರ್ ಪ್ಯಾನಲ್ ಅನ್ನು ತರುತ್ತಿದ್ದಾರೆ.
ಊರಿನಲ್ಲಿ ಕೃಷಿ ಕಾರ್ಯ, ಮನೆಯವರೊಂದಿಗೆ ಸಂಪರ್ಕ ಇವು ಮೊಬೈಲ್ ಮೂಲಕ ಅಡ್ಡಿಯಿಲ್ಲದೆ ಮುಂದುವರಿಯುತ್ತಿದೆ. ಇದಕ್ಕೆ ಸೋಲಾರ್ ಸಹಾಯಕವಾಗಿದೆ ಎಂದು ಅಮೃತ್ ಸಿಂಗ್ ಎಂಬ ರೈತ ತಿಳಿಸಿದ್ದಾರೆ.
ಸಿಂಘು ತಿಕ್ರಿ ಗಡಿಯಲ್ಲಿ ಸ್ವಯಂಸೇವಕರ ತಂಡ ಟ್ರೊಲಿ ಟೈಮ್ಸ್ ಎಂಬ ಹೆಸರಿನಲ್ಲಿ ಒಂದು ದ್ವೈವಾರ ಸುದ್ದಿ ಪತ್ರಿಕೆಯನ್ನು ಆರಂಭಿಸಿದ್ದಾರೆ. ಅದರ ಮೂಲಕ ದಿನಂಪ್ರತಿ ನಡೆಯುವ ರೈತರ ಹೋರಾಟಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ವರದಿ ಮಾಡುವುದು ಉದ್ದೇಶವಾಗಿದೆ.
ಹೋರಾಟ ಆರಂಭವಾದ ಮೊದಲ ದಿನದಿಂದ ಹೆಚ್ಚು ವ್ಯತ್ಯಾಸವಿಲ್ಲದೆ ಇಂದು ಅದು ಹಾಗೆಯೇ ಇದೆ. ಹಲವು ಸ್ವಯಂ ಸೇವಾ ಸಂಘಟನೆಗಳು ಮತ್ತು ಇತರರ ಸಹಾಯದಲ್ಲಿ ಟೆಂಟ್ ನಿರ್ಮಿಸಲಾಗಿದೆ.
ಮೆಡಿಕಲ್ ಸ್ಟೋರ್ ,ಲೈಬ್ರರಿ, ಲಂಗರ್, ಸಣ್ಣ ಮಂದಿರವೂ ಇವೆ. ಬಟ್ಟೆ, ಮದ್ದು, ಆಹಾರ ಇತ್ಯಾದಿ ಅಗತ್ಯ ವಸ್ತುಗಳೊಂದಿಗೆ ಅಪಾರ ಜನರು ಇಲ್ಲಿಗೆ ಹರಿದು ಬರುತ್ತಿದ್ದಾರೆ.
ಸಿಂಘು ಗಡಿಯಲ್ಲಿ, ಲೂಧಿಯಾನ ದಿಂದ ಬಂದ ರೈತ ಪ್ರಿನ್ಸ್ ಸಂಧು ಹೋರಾಟಗಾರರಿಗಾಗಿ ಎರಡು ವಾಷಿಂಗ್ ಮೆಶಿನ್ಗಳನ್ನು ಖರೀದಿಸಿ ಕೊಟ್ಟಿದ್ದಾರೆ. ದಿನಲೂ 500 ಬಟ್ಟೆಗಳನ್ನು ಇದರಲ್ಲಿ ಒಗೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.ಟ್ರಾಲ್ ಮತ್ತು ಟ್ರಕ್ಗಳ ಬ್ಯಾಟರಿ, ಜನರೇಟರ್ ಅನ್ನು ಉಪಯೋಗಿಸಿ ಯಂತ್ರಗಳನ್ನು ಚಲಾಯಿಸಲಾಗುತ್ತದೆ ಎಂದು ಸಂಧು ತಿಳಿಸಿದ್ದಾರೆ.

ಬ್ಯಾಟರಿಯಲ್ಲಿ ನಡೆಯುವ ಯಂತ್ರದಲ್ಲಿ ಗಂಟೆಗೆ ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ಲಂಗರುಗಳು ತಯಾರಿಸುತ್ತಿವೆ.
ಹತ್ತಕ್ಕೂ ಹೆಚ್ಚು ಮೆಡಿಕಲ್ ಕ್ಯಾಂಪ್ಗಳು, ಮೆಡಿಕಲ್ ಸ್ಟೋರ್ ಗಳು ಇಲ್ಲಿವೆ. ಬಸ್ನೊಳಗೆ ಇರುವ ಮೆಡಿಕಲ್ ಕ್ಯಾಂಪ್ನಲ್ಲಿ ಎಕ್ಸ್ ರೇ ಮಿಶಿನ್ ಇತ್ಯಾದಿ ಉಪಕರಣಗಳಿವೆ.
ಮೊಹಾಲಿಯ ಡಾ. ಸನ್ನಿ ಅಹ್ಲುವಾಲಿಯಾ, ಇಬ್ಬರು ವಿದ್ಯಾರ್ಥಿಗಳು ಪ್ರತಿನಿತ್ಯ ವೈದ್ಯಕೀಯ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ.
ಧರ್ಮ, ಆಧ್ಯಾತ್ಮ, ಫಿಕ್ಷನ್, ಭಾರತದ ಕಾನೂನುಗಳು ಇತ್ಯಾದಿ ವಿಧವಿಧದ ಐನೂರಕ್ಕೂಹೆಚ್ಚು ಪುಸ್ತಕಗಳ ಒಂದು ಸಣ್ಣ ಲೈಬ್ರರಿಯನ್ನು ಜಸ್ವೀರ್ ಸಿಂಗ್ ಎಂಬವರು ತಂದಿದ್ದಾರೆ. ದಿನಾಲೂ 80ರಿಂದ 90 ಜನರು ಲೈಬ್ರರಿಯನ್ನು ಉಪಯೋಗಿಸುತ್ತಿದ್ದಾರೆ ಎಂದು ಅವರು ಹೇಳಿದರು.












