ತೀರ್ಥಹಳ್ಳಿ ಚುನಾವಣಾ ಅಭ್ಯರ್ಥಿಯ 2 ಸಾವಿರ ಅಡಿಕೆ ಗಿಡ ನಾಶ: ಗಿಡದೊಂದಿಗೆ ಕಿಮ್ಮನೆಯಿಂದ ಪ್ರತಿಭಟನೆ

0
527

ಸನ್ಮಾರ್ಗ ವಾರ್ತೆ

ಶಿವಮೊಗ್ಗ: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ‌ ಮಧ್ಯೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿ ಮಹಿಳೆಯೋರ್ವರ ಎರಡು ಸಾವಿರ ಅಡಿಕೆ ಗಿಡಗಳನ್ನು ನಾಶ ಮಾಡಲಾಗಿದ್ದು, ಈ ಸಂಬಂಧ ಮಾಜಿ‌ ಶಾಸಕ ಕಿಮ್ಮನೆ ರತ್ನಾಕರ್ ರವರು ನ್ಯಾಯಕ್ಕಾಗಿ ಆಹೋರಾತ್ರಿ ಅಡಿಕೆ ಗಿಡದೊಂದಿಗೆ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ದ್ವೇಷಕ್ಕಾಗಿ 2 ಸಾವಿರ ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆಯವರು ನಾಶ ಮಾಡಿದ್ದಾರೆ. ಇದಕ್ಕೆ ಬಿಜೆಪಿಯವರ ಒತ್ತಡವೇ ಕಾರಣ ಎಂದು ಕಿಮ್ಮನೆ ಆರೋಪಿಸಿದ್ದಾರೆ. ನೂರಾರು ಜನರು ಕಿಮ್ಮನೆ ರತ್ನಾಕರ ಅವರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಘಟನೆಯ ಹಿನ್ನೆಲೆ: ಆರಗ ಸಮೀಪದ ಸುಪ್ರೀತಾ ರಂಜನ್ ಮಹಿಳಾ ಮೀಸಲಾತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಅರಣ್ಯ ಅಧಿಕಾರಿಗಳ ಮೂಲಕ ಬಿಜೆಪಿಯವರು ಒತ್ತಡ ತಂದಿದ್ದು, ಇದಕ್ಕೆ ಅವರು ಒಪ್ಪದೇ ಇದ್ದಾಗ ಬೀಸು ಗ್ರಾಮದ ಸರ್ವೇ ನಂಬರ್ 26ರಲ್ಲಿರುವ ಜಮೀನಿನಲ್ಲಿದ್ದ 2 ಸಾವಿರ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ಹೀಗೆ ನಾಶ ಮಾಡಿದ ಅಡಿಕೆ ಗಿಡಗಳನ್ನು ಹಿಡಿದುಕೊಂಡೇ ಕಿಮ್ಮನೆ ಅಹೋರಾತ್ರಿ ಧರಣಿಯನ್ನು ಮಾಡಿದರು.

ಕಿಮ್ಮನೆ ರತ್ನಾಕರ್ ಅವರು ಧರಣಿ ನಡೆಸಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ ಸಸಿಗಳನ್ನು ನಾಶ ಮಾಡಿದ ಕೃತ್ಯದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ. ತಕ್ಷಣ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.