ಸಾರ್ವಜನಿಕರಿಗೆ ತೊಂದರೆಯಾಗದಂತೆ ಗೂಡ್ಸ್ ರೈಲುಗಳಿಗೆ ಮಂಗಳೂರು ನಗರದಲ್ಲಿ ಸಮಯ ನಿಗದಿಪಡಿಸಿ: ಸಂಸದರಿಗೆ ವೆಲ್ಫೇರ್ ಪಾರ್ಟಿ ಒತ್ತಾಯ

0
565

ಸನ್ಮಾರ್ಗ ವಾರ್ತೆ

ಮಂಗಳೂರು : ನಗರದಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿರುವ ಪಾಂಡೇಶ್ವರ ರೈಲ್ವೆ ಗೇಟ್ ಗೆ ಪರಿಹಾರ ನೀಡುವಂತೆ ದ.ಕ.‌ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಆಗ್ರಹಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ನಗರದಲ್ಲಿ ಗೂಡ್ಸ್ ರೈಲಿಗೆ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಸಮಯ ನಿಗದಿಪಡಿಸುವಂತೆ ಒತ್ತಾಯಿಸಿದೆ.

ರಾ. ಹೆದ್ದಾರಿಯ 66 ರಲ್ಲಿ ಕೇರಳದ ಕಡೆಯಿಂದ ಮಂಗಳೂರು ನಗರದ ಪ್ರಮುಖ ಸ್ಥಳಗಳಿಗೆ ಸರಕು ಸಾಗಣೆಯನ್ನು ಹೊಂದಿರುವ ಎಲ್ಲಾ ಘನ ವಾಹನಗಳಾದ, ಲಾರಿ, ಟ್ರಕ್ ಇತ್ಯಾದಿಗಳು ಜೆಪ್ಪಿನಮುಗೇರು ಪಾಂಡೇಶ್ವರ ಒಳರಸ್ತೆಯಲ್ಲಿನ ಮೂಲಕ ನಗರ ಪ್ರವೇಶಿಸುವುದಾಗಿದ್ದು, ಹೀಗೆ ಬರುವ ವಾಹನಗಳಿಗೆ, ಪಾಂಡೇಶ್ವರ ಮತ್ತು ಹೊಯ್ಗೆ ಬಝಾರ್ ಸೇರಿ ಎರಡೆರಡು ರೈಲ್ವೇ ಗೇಟು ದಾಟಿ ಹೋಗುವ ಅನಿವಾರ್ಯತೆ ಇದ್ದು, ಇಲ್ಲಿ ಮುಖ್ಯವಾಗಿ ಸರಕು ಸಾಗಾಟದ ಗೂಡ್ಸ್ ರೈಲುಗಳು ಮಾತ್ರ ಸದಾ ಸಂಚರಿಸುತ್ತಿರುವ ಕಾರಣ , ಪದೇ ಪದೇ ನಿರಂತರವಾಗಿ ರೈಲ್ವೇ ಗೇಟು ಬಳಿ ವಾಹನಗಳನ್ನು ತಡೆದಿರಿಸಬೇಕಾಗುತ್ತದೆ. ಆದ್ದರಿಂದ ಈ ಹಳಿ ದಾಟಿ ಸಾಗಬೇಕಾಗಿರುವ ಇಷ್ಟೊಂದು ಎಲ್ಲಾ ಘನ ವಾಹನಗಳ ಸಹಿತವಾಗಿ ಇದೇ ರಸ್ತೆಯನ್ನು ಅವಲಂಬಿಸಿರುವ ಅಲ್ಲಿನ ಹತ್ತಿರ ಪರಿಸರದ ಬೋಳಾರ, ಜೆಪ್ಪು, ಮಾರ್ನಮಿಕಟ್ಟೆ, ಮಂಗಳಾದೇವಿ, ಮೋರ್ಗನ್ಸ್ ಗೇಟ್ ಪ್ರದೇಶಗಳ ಜನರುಗಳಿಗೆ ತಮ್ಮ ದೈನಂದಿನ ಓಡಾಟಕ್ಕಿರುವ ಖಾಸಗಿ ವಾಹನಗಳು, ಸ್ಟೇಟ್ ಬ್ಯಾಂಕ್ ಮತ್ತು ಡಿ.ಸಿ.‌ ಆಫೀಸ್ ಕಡೆ ಬರುವ ಜನಗಳೂ ಅಂತೆಯೇ ಆಸ್ಪತ್ರೆಗಳ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವ ವಾಹನಗಳು ಸೇರಿ ಇಲ್ಲಿ ಯಾವಾಗಲೂ ವಾಹನ ದಟ್ಟಣೆಯ ಸಮಸ್ಯೆ ಎದುರಾಗಿದ್ದು, ಸಾಕಷ್ಟು ಸಮಯ ಪೋಲಾಗುವುದಲ್ಲದೆ, ಮಂಗಳೂರು ನಗರಕ್ಕೆ ತಲುಪುವಲ್ಲಿ ಸುಮಾರು 5- 6 ಕಿ.ಮೀ. ದೂರ ಕಡಿತಗೊಳಿಸುವ ಇಲ್ಲಿನ ರಸ್ತೆಯಾಗಿ ಬರುವವರ ವಾಹನಗಳ ದಟ್ಟಣೆಯು ಮಂಗಳಾದೇವಿ ದೇವಸ್ಥಾನದವರೆಗೆ ಹಾಗೂ ನಗರದಿಂದ ತೆರಳುವ ವಾಹನಗಳ ಸಾಲುಗಳು ನಗರದ ಫಿಝಾ ಮಾಲ್ ವರೆಗೂ ತಲುಪಿರುತ್ತವೆಯೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ತಿಳಿಸಿದರು.

ಈಗಾಗಲೇ ಲೋಕಸಭಾ ಚುನಾವಣೆಗಿಂತ ಮೊದಲು ಮತ್ತು ನಂತರ ಹೀಗೆ ಎರಡೆರಡು ಬಾರಿ ಈ ಬಗ್ಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಮನವಿಯನ್ನು ನೀಡುವುದರ ಮುಖಾಂತರ ಇವೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೇವೆ. ಮತ್ತು ಈ ವಿಚಾರದಲ್ಲಿ ಪಾಲ್ಗಾಟ್ ರೈಲ್ವೇ ವಿಭಾಗದ ಸಮಾಲೋಚನೆಯಲ್ಲಿ (ಪಾಲ್ಗಾಟ್ ರೈಲ್ವೇ ಡಿವಿಜನಲ್ ಮೀಟಿಂಗ್ ನಲ್ಲಿ) ತಮ್ಮ ಅಹವಾಲು ಮಂಡಿಸಲು ಅವಕಾಶ ಮಾಡಿಕೊಡುವುದಾಗಿ ಸಂಸದರ ಕಚೇರಿಯವರು ನಮಗೆ ಭರವಸೆ ನೀಡಿದ್ದರು. ಆದರೆ ಈವರೆಗೂ ಸಭೆಗೆ ಕರೆದಿಲ್ಲ‌. ಅಲ್ಲದೆ ಇಲ್ಲಿಯ ರೈಲ್ವೇ ಮಾರ್ಗವಾಗಿ ಯಾವುದೇ ಪ್ರಯಾಣಿಕ ರೈಲುಗಳು (ಪ್ಯಾಸೆಂಜರ್ ರೈಲು) ಹೋಗುವುದಿಲ್ಲವಾದುದರಿಂದಈ ಬಗ್ಗೆ ಸಂಬಂಧಿತ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ನಿರಂತರ ಸಂಚರಿಸುವ ಇಷ್ಟೊಂದು ಗೂಡ್ಸ್ ರೈಲುಗಳಿಗೆ ರಾತ್ರಿ 10 ರ ನಂತರದ ಸಮಯ ನೀಡಿ ಬೆಳಿಗ್ಗೆ 6 ರವರೆಗೂ ಮುಂದುವರಿಸಲಿ ಎಂಬ ಸಲಹೆಯನ್ನು ನೀಡಿದ್ದೆವು ಮತ್ತು ಈ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ, ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್, ದಿನಗೂಲಿ ನೌಕರರು, ಕಚೇರಿಯ ಕೆಲಸಕ್ಕೆ ಹೋಗುವವರು, ರೊಸಾರಿಯೋ ವಿದ್ಯಾಸಂಸ್ಥೆ ಸೇರಿದಂತೆ ಶಾಲಾ ಕಾಲೇಜುಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಹೀಗೆ ಎಲ್ಲಾ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಭಿನ್ನವಿಸಿಕೊಂಡಿದ್ದೇವೆ. ಆದರೆ ಇದುವರೆಗೆ ಅವರಿಂದ ರೈಲ್ವೇ ಇಲಾಖೆಯ ಯಾವುದೇ ಸಭೆಗೆ ಕರೆದಿರುವುದಾಗಲಿ ಅಥವಾ ಇನ್ನಿತರ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆಯು ದೊರೆಯದೆ ಇದ್ದುದರಿಂದ ಇನ್ನಾದರೂ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಿರಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ರವರು ಈ ಬಗ್ಗೆ ಗಮನ ಹರಿಸಬೇಕು ‌ ಹಾಗೂ ಸಾರ್ವಜನಿಕರಿಗಾಗುತ್ತಿರುವ ದಿನನಿತ್ಯ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸೂಕ್ತವಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಮಂಗಳೂರು ನಗರದಲ್ಲಿ ಗೂಡ್ಸ್ ರೈಲುಗಳಿಗೆ ಸಮಯ ನಿಗದಿ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ದ‌.ಕ‌. ಜಿಲ್ಲೆ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಮುತ್ತಲಿಬ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.