ಲೋನ್ ಆ್ಯಪ್ ವಂಚನೆ: ಚೀನಿಯರ ಸಹಿತ ನಾಲ್ವರ ಬಂಧನ

0
409

ಸನ್ಮಾರ್ಗ ವಾರ್ತೆ

ಚೆನ್ನೈ: ಲೋನ್ ಆ್ಯಪ್ ವಂಚನೆ ಪ್ರಕರಣದಲ್ಲಿ ಇಬ್ಬರು ಚೀನದವರ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಚೀನದ ಸಿಯಾಮೊ(38), ಯುವಾನ್ ಲುನ್(28) ಮತ್ತು ಕರ್ನಾಟಕದ ಮೊಬೈಲ್ ಆಪ್ ಕಂಪೆನಿಯ ನಿರ್ದೇಶಕರಾದ ಧೂಪನ ಹಳ್ಳಿ ಎಸ್.ಪ್ರಮೋದ್, ಚಿಕನಹಳ್ಳಿ ಸಿ.ಆರ್. ಪವನ್ ಬಂಧಿತರು.

ಹಾಂಗ್, ವಂಡಿಶ್ ಎಂಬ ಆರೋಪಿಗಳು ಸಿಂಗಪೂರಕ್ಕೆ ತಪ್ಪಿಸಿಕೊಂಡಿದ್ದಾರೆ. ಬೆಂಗಳೂರಿನ ಎರಡು ಬ್ಯಾಂಕ್‍ಗಳ ಖಾತೆಗಳ ಎರಡೂವರೆ ಕೋಟಿಯಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿರ್ದೇಶಕರಿಗೆ ಪ್ರತಿ ತಿಂಗಳು 20,000 ಸಂಬಳ ನೀಡಲಾಗುತ್ತಿತ್ತು. ಚೆಕ್‍ಗಳು, ಎಟಿಎಂ ಕಾರ್ಡುಗಳು, ಬ್ಯಾಂಕ್ ಪಾಸ್‍ಬುಕ್‍ಗಳೂ, ಇಂಟರ್‍ನೆಟ್ ಬ್ಯಾಂಕಿಂಗ್ ಪಾಸ್ವರ್ಡ್‍ಗಳನ್ನು ಪಡೆದು ಸಾಲ ಕೊಡಲಾಗುತ್ತದೆ.

ಇಡೀ ದೇಶದಲ್ಲಿಯೇ ಇದರ ಕೊಂಡಿಯಿದ್ದು ಇನ್ನೂ ಹಲವಾರು ಆರೋಪಿಗಳನ್ನು ಬಂಧಿಸಬೇಕಾಗಿದೆ ಎಂದು ತಮಿಳ್ನಾಡು ಪೊಲೀಸರು ತಿಳಿಸಿದ್ದಾರೆ. ಶೇ.36ರಷ್ಟು ಬಡ್ಡಿ ಹಾಕಿ ಇವರು ಲಾಭ ಕೊಳ್ಳೆ ಹೊಡೆಯುತ್ತಿದ್ದರು. ಈಗ ದೇಶದಲ್ಲಿ 12ಕ್ಕೂ ಹೆಚ್ಚು ಅನಧಿಕೃತ ಲೋನ್ ಆ್ಯಪ್‍ಗಳೂ(ಸಾಲ) ಇರುವುದು ಪತ್ತೆಯಾಗಿದೆ. 5000ದಿಂದ 50,000ರೂಪಾಯಿಯವರೆಗೆ ಲಕ್ಷಾಂತರ ಮಂದಿಗೆ ಸಾಲ ನೀಡಲಾಗಿದ್ದು ಒಟ್ಟು ಸಾಲ 300ಕೋಟಿಗೂ ಹೆಚ್ಚು ಇದೆ ಎನ್ನಲಾಗಿದೆ. ಸಾಲ ಮರಳಿಸಲಾಗದೆ ಬೆಂಗಳೂರಿನಲ್ಲಿ ಚೆನ್ನೈಗಳಲ್ಲಿ ಒಬ್ಬರು ಮತ್ತು ತೆಲಂಗಾಣದಲ್ಲಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಕಮಿಶನರ್ ಮಹೇಶ್ ಕುಮಾರ್ ಅಗರ್‍ವಾಲ್ ತಿಳಿಸಿದ್ದಾರೆ.