ಬೆದರಿಸಿ ಹಣ ವಸೂಲಿ; ಛೋಟಾ ರಾಜನ್‍ಗೆ 2 ವರ್ಷ ಜೈಲು

0
620

ಸನ್ಮಾರ್ಗ ವಾರ್ತೆ

ಮುಂಬಯಿ,ಜ.4: ಬಿಲ್ಡರ್ ಒಬ್ಬರಿಗೆ ಬೆದರಿಕೆಯೊಡ್ಡಿ 26 ಕೋಟಿ ರೂಪಾಯಿ ಕಿತ್ತುಕೊಳ್ಳಲು ಯತ್ನಿಸಿದ ಪ್ರಕರಣದಲ್ಲಿ ಭೂಗತ ಲೋಕದ ಡಾನ್ ಛೋಟಾ ರಾಜನ್‍ಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ಶುಕ್ರವಾರ ನಗರದ ವಿಶೇಷ ಸಿಬಿಐ ಕೋರ್ಟು, ರಾಜನ್ ಸಹಿತ ನಾಲ್ಕು ಮಂದಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2015ರಲ್ಲಿ ಪುಣೆಯ ಭೂವಿವಾದಕ್ಕೆ ಸಂಬಂಧಿಸಿ ಬಿಲ್ಡರ್ ನಂದು ವಾಜೆಕ್ಕರ್ ಮತ್ತು ಏಜೆಂಟ್ ಪರಮಾನಂದ್ ಠಾಕ್ರೆ ನಡುವೆ ಹಣಕಾಸಿನ ವಿವಾದ ಉಂಟಾಗಿತ್ತು. ಹೆಚ್ಚು ಹಣ ಕೇಳಿದ ಠಾಕ್ರೆ ರಾಜನ್‍ನ ನೆರವು ಕೇಳಿದ್ದರು. ರಾಜನ್ ತನ್ನ ಜನರನ್ನು ಕಳುಹಿಸಿ ವಾಜೆಕ್ಕರ್‌ಗೆ ಬೆದರಿಕೆಹಾಕಿ 26 ಕೋಟಿ ರೂಪಾಯಿ ಕೊಡಬೇಕೆಂದು ಬೇಡಿಕೆಯಿರಿಸಿದ್ದನು. ಈ ಪ್ರಕರಣದಲ್ಲಿ ಸುರೇಶ್ ಪಾಂಡೆ, ಲಕ್ಷ್ಮಣ್ ನಿಗಂ, ಸುಮಿತ್ ಮಾತ್ರೆಗೂ ರಾಜನ್ ಜೊತೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

2015ರಲ್ಲಿ ರೆಡ್ ಕಾರ್ನರ್ ನೋಟಿಸಿನಲ್ಲಿ ಬಾಲಿಯ ಅಧಿಕಾರಿಗಳು ಛೋಟಾ ರಾಜನ್‍‌ನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ರಾಜನ್‍ನನ್ನು ತಿಹಾರ್ ಜೈಲಿನಲ್ಲಿರಿಸಲಾಗಿತ್ತು. ರಾಜನ್ ವಿರುದ್ಧ 71 ಪ್ರಕರಣಗಳು ಭಾರತದಲ್ಲಿವೆ. ಎಲ್ಲ ಪ್ರಕರಣಗಳನ್ನೂ ಸಿಬಿಐಗೆ ಹಸ್ತಾಂತರಿಸಲಾಗಿದೆ. ಈ ಕೇಸು ಸಹಿತ ನಾಲ್ಕು ಕೇಸುಗಳ ವಿಚಾರಣೆ ಮುಗಿದಿದೆ. ಪತ್ರಕರ್ತ ಜೋಡೆಯವರನ್ನು ಕೊಲೆ ಮಾಡಿದ ಕೇಸಿನಲ್ಲಿ ಜೀವಾವಧಿ ಶಿಕ್ಷೆ, ದಿಲ್ಲಿ ನಕಲಿ ಪಾಸ್‍ಪೋರ್ಟ್ ಕೇಸಿನಲ್ಲಿ 2 ವರ್ಷ ಶಿಕ್ಷೆ, ಬಿಆರ್ ಶೆಟ್ಟಿಯ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಹತ್ತು ವರ್ಷ ರಾಜನ್‍ಗೆ ಶಿಕ್ಷೆಯಾಗಿದೆ.