ಪ. ಬಂಗಾಳ: ತೃಣಮೂಲ ಕಾಂಗ್ರೆಸ್‌ಗೆ ಮತ್ತೊಬ್ಬ ಶಾಸಕನಿಂದ ರಾಜೀನಾಮೆ; ಸಚಿವರು, ಶಾಸಕರ ಸಹಿತ ಇದುವರೆಗೆ 18 ಮಂದಿ ಬಿಜೆಪಿಗೆ ಸೇರ್ಪಡೆ

0
554

ಸನ್ಮಾರ್ಗ ವಾರ್ತೆ

ಕೊಲ್ಕತಾ,ಫೆ.2: ಚುನಾವಣೆಯ ಮೊದಲು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‍ನಿಂದ ಇನ್ನೊಬ್ಬ ಶಾಸಕ ದೀಪಕ್ ಹಲ್ದಾರ್ ರಾಜೀನಾಮೆ ನೀಡಿದ್ದಾರೆ. ಡೈಮಂಡ್ ಹಾರ್‍ಬರ್ ಕ್ಷೇತ್ರದ ಶಾಸಕ ಇವರು. ಕೆಲಸ ಮಾಡಲು ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ ಅವರು ರಾಜೀನಾಮೆ ನೀಡಿದ್ದು ಇದರೊಂದಿಗೆ ಅವರು ಬಿಜೆಪಿಗೆ ಸೇರ್ಪಡೆಯಾಗುವರೆಂಬ ವದಂತಿ ಹರಡಿದೆ. ಪರಗಣಾಸ್ ಜಿಲ್ಲೆಯ ಬಾರುಯುಪುರಿಯಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಇವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯ ಮೊದಲು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನಿಂದ ಹಲವಾರು ನಾಯಕರು ಬಿಜೆಪಿ ಪಾಳಯ ಸೇರಿದ್ದಾರೆ. ಶಾಸಕರಾಗಿ ಸರಿಯಾಗಿ ಕೆಲಸ ಮಾಡದ ದೀಪಕ್‍ರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿತ್ತು ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿತು.

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಾರದೆಂದು ಗೊತ್ತಿರುವವರು ಪಾರ್ಟಿ ತೊರೆದು ಹೋಗುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ನಿನ್ನೆ ಹೇಳಿದ್ದರು. ಕಳೆದ ಎರಡು ತಿಂಗಳಿನಲ್ಲಿ ಹಲವಾರು ತೃಣಮೂಲ ಕಾಂಗ್ರೆಸ್ ನಾಯಕರು ಪಕ್ಷದ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಸಚಿವರು ಶಾಸಕರ ಸಹಿತ 18 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಶನಿವಾರ ಐವರು ತೃಣಮೂಲ ನಾಯಕರು ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದರು. ಎಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.