ಸನ್ಮಾರ್ಗ ವಾರ್ತೆ
ನವದೆಹಲಿ: ಆಧಾರ್ ಕಾರ್ಡ್ನೊಂದಿಗೆ ಸಂಪರ್ಕ ಮಾಡಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಕೇಂದ್ರ ಸರಕಾರವು ಸುಮಾರು ಮೂರು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದನ್ನು ‘ತುಂಬಾ ಗಂಭೀರ’ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಇದು ಗಂಭೀರವಾಗಿದೆ ಮತ್ತು ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯಗಳು ಈ ಬಗ್ಗೆ ಸೂಕ್ತವಾದ ಪ್ರತಿಕ್ರಿಯೆ ನೀಡಬೇಕೆಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಮೂರು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದನ್ನು ‘ತುಂಬಾ ಗಂಭೀರವಾದುದು. ಈ ವಿಷಯಕ್ಕೆ ನಮ್ಮನ್ನು ವಿರೋಧಿ ಎಂದು ಪರಿಗಣಿಸಬಾರದು ಎಂದೂ ಹೇಳಿದೆ. ಈ ವಿಚಾರವಾಗಿ ಅಂತಿಮ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಇದೇ ವೇಳೆ ಸುಪ್ರೀಂ ನ್ಯಾಯಪೀಠ ತಿಳಿಸಿದೆ.
ಅರ್ಜಿದಾರ ಕೊಯಿಲಿ ದೇವಿ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ಅರ್ಜಿಯು ದೊಡ್ಡ ವಿಷಯದ ಬಗ್ಗೆ ವ್ಯವಹರಿಸುತ್ತದೆ ಎಂದು ಹೇಳಿದರು.
“ಬಾಂಬೆ ಹೈಕೋರ್ಟ್ನಲ್ಲಿ ನಾನು ಈ ರೀತಿಯ ವಿಷಯವನ್ನು ನಿಭಾಯಿಸಿದ್ದೇನೆ ಮತ್ತು ಈ ವಿಷಯವನ್ನು ಸಂಬಂಧಪಟ್ಟ ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಸಿಜೆಐ ಹೇಳಿದರು.
ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರವು ರದ್ದುಗೊಳಿಸಿದ್ದರಿಂದ ಇದು ಒಂದು ಪ್ರಮುಖ ವಿಷಯವಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಮ್ಮ ವಾದಗಳನ್ನು ಮುಂದುವರಿಸಿದರು.
ಕೇಂದ್ರ ಸರ್ಕಾರವು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ಎಂದು ಗೊನ್ಸಾಲ್ವೆಸ್ ಪೀಠದ ಮನವೊಲಿಸಿದ್ದರಿಂದ ಈ ವಿಷಯವನ್ನು ಬೇರೆ ದಿನದಲ್ಲಿ ಸಂಪೂರ್ಣವಾಗಿ ಕೇಳಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ನ್ಯಾಯವಾದಿ ಗೊನ್ಸಾಲ್ವೆಸ್ ರವರ ಕೇಂದ್ರವು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ಎಂಬ ವಾದವು ತಪ್ಪು ಹೇಳಿಕೆಯಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೆಖಿ ಯವರು ಪೀಠಕ್ಕೆ ತಿಳಿಸಿದಾಗ, “ಆಧಾರ್ ಸಮಸ್ಯೆಯಿಂದಾಗಿ ಪ್ರತಿಕ್ರಿಯಿಸಲು ನಾವು ನಿಮ್ಮನ್ನು (ಕೇಂದ್ರ) ಕೇಳುತ್ತಿದ್ದೇವೆ. ಇದು ವಿರೋಧಿ ಮೊಕದ್ದಮೆ ಅಲ್ಲ. ನಾವು ಅದನ್ನು ಅಂತಿಮವಾಗಿ ಕೇಳುತ್ತೇವೆ. ನಾಲ್ಕು ವಾರಗಳಲ್ಲಿ ಹಿಂದಿರುಗಿಸಬಹುದಾದ ನೋಟಿಸ್ ನೀಡಿ” ಎಂದು ನ್ಯಾಯಪೀಠ ಹೇಳಿದೆ.
ಈ ವಿಷಯದಲ್ಲಿ ಈಗಾಗಲೇ ನೋಟಿಸ್ ನೀಡಲಾಗಿದೆ ಮತ್ತು ಕೇಂದ್ರದ ಪ್ರತಿಕ್ರಿಯೆ ದಾಖಲೆಯಲ್ಲಿದೆ ಎಂದು ಲೆಖಿ ಹೇಳಿದರು. ಮುಖ್ಯ ವಿಷಯದ ಕುರಿತು ನೋಟಿಸ್ ನೀಡಲಾಗಿಲ್ಲ ಎಂದು ಗೊನ್ಸಾಲ್ವೆಸ್ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಮೂರು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸುವುದು ಮತ್ತು ಹಸಿವಿನಿಂದ ಸಾವನ್ನಪ್ಪುವುದು ಮುಖ್ಯ ವಿಷಯವಾಗಿತ್ತು ಎಂದು ಗೊನ್ಸಾಲ್ವೆಸ್ ಪೀಠಕ್ಕೆ ಸ್ಪಷ್ಟ ಪಡಿಸಿದರು. ಅಲ್ಲದೇ ಪ್ರಕರಣ ಸಂಬಂಧ ಹಲವಾರು ರಾಜ್ಯದ ವಿವಿಧ ಬಡ ಕುಟುಂಬಗಳ ಘಟನೆಗಳನ್ನು ಉದಾಹರಣೆ ಸಹಿತ ಅರ್ಜಿದಾರರ ಪರ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ಮೂರು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದನ್ನು ತುಂಬಾ ಗಂಭೀರ ವಿಷಯ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಪೀಠ ಹೇಳಿದೆ.












