ಸನ್ಮಾರ್ಗ ವಾರ್ತೆ
ರಾಂಚಿ: ಕೊರೋನ ಎರಡನೇ ಅಲೆಯ ಆಗಮನದಲ್ಲಿ ವಲಸೆ ಕಾರ್ಮಿಕರು ಭಯಬೀತರಾಗಿದ್ದು, ಮತ್ತೆ ವಲಸೆ ಹೋಗಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ರಾತ್ರಿಯ ಕರ್ಫ್ಯೂ, ಗುಂಪು ಸೇರುವುದು ನಿಷೇಧ ಇತ್ಯಾದಿ ನಿಯಂತ್ರಣಗಳನ್ನು ಹೇರಿದ ರಾಜ್ಯಗಳಿಂದ ಈ ವಲಸೆ ಶುರುವಾಗಿದೆ. ಹೆಚ್ಚಿನ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದ್ದು ಲಾಕ್ಡೌನ್ ಜಾರಿಗೊಳಿಸಿದ ಪ್ರದೇಶಗಳೂ ಇವೆ. ಒಂದು ವರ್ಷದ ಹಿಂದಿನ ಅನುಭವ ಮಾಸುವ ಮುನ್ನವೇ ತುತ್ತು ಅನ್ನಕ್ಕಾಗಿ ಕೆಲಸ ಹುಡುಕಿಕೊಂಡು ಬಂದ ವಲಸೆ ಕಾರ್ಮಿಕರು ಹೆದರಿಕೊಂಡು ಪುನಃ ತಮ್ಮೂರಿಗೆ ಹೊರಟು ಹೋಗುತ್ತಿದ್ದಾರೆ.
ಮಹಾರಾಷ್ಟ್ರ, ಪಂಜಾಬ್, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊರೊನ ಅತೀ ಹೆಚ್ಚು ವ್ಯಾಪಿಸುತ್ತಿದೆ. ಇಲ್ಲಿಂದ ವಲಸೆ ಕಾರ್ಮಿಕರು ಪಲಾಯನಕ್ಕೆ ಮುಂದಾಗುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಕೆಲಸ ಹುಡುಕಿಕೊಂಡು ಹೆಚ್ಚು ಜನರು ಝಾರ್ಕಂಡಿನಿಂದ ಬರುವುದು. ಗುಜರಾತ್, ಕೇರಳಗಳಿಂದಲೂ ವಲಸೆ ಕಾರ್ಮಿಕರು ಊರಿಗೆ ಹೋಗುವುದು ಆರಂಭವಾಗಿದೆ ಎಂದು ವರದಿಯಾಗಿದೆ.
ಸೂರತ್, ಮುಂಬೈಯಿಂದ ರೈಲಲ್ಲಿ ಈಗ ಇಂತಹ ಊರಿಗೆ ಮರಳುವವರಿಂದ ತುಂಬಿ ತುಳುಕುತ್ತಿದೆ ಎಂದು ಸೂಚನೆಗಳು ಲಭ್ಯವಾಗಿದೆ. ಕೇರಳ, ಪ.ಬಂಗಾಳ, ಅಸ್ಸಾಂ, ತಮಿಳ್ನಾಡು, ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆಯು ಕೊರೋನ ಹರಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತೆಂದು ಲೆಕ್ಕಚಾರವಾಗಿದ್ದು ದೇಶದಲ್ಲಿ ಕೊರೋನ ಪೀಡಿತರ ಸಂಖ್ಯೆ ಪ್ರತಿದಿನ ಒಂದು ಲಕ್ಷದಷ್ಟಾಗುತ್ತಿದೆ . ಮುಂದಿನ ನಾಲ್ಕು ವಾರಗಳು ನಿರ್ಣಾಯಕ ಎಂದು ಕೇಂದ್ರ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಪ್ರಧಾನಿ ಕರೆದಿದ್ದ ಸಭೆಯಲ್ಲಿ ಪ್ರಾದೇಶಿಕ ಕಂಟೊನ್ಮೆಂಟ್ ಏರಿಯಾಗಳನ್ನು ಮಾಡಬೇಕೆಂದು ಹೇಳಿದ್ದರು.












