ವೆಲ್ಫೇರ್ ಪಾರ್ಟಿ ದಶಮಾನೋತ್ಸವ ಸಂಭ್ರಮ: ಪ್ರಕ್ಷುಬ್ಧ ವಾತಾವರಣವನ್ನು ನಿವಾರಿಸಲು ದೇಶ ಮತ್ತು ರಾಜ್ಯದಲ್ಲಿ ಪರ್ಯಾಯ ಪಕ್ಷದ ಅವಶ್ಯಕತೆ ಇದೆ- ತಾಹಿರ್ ಹುಸೇನ್

0
610

ಸನ್ಮಾರ್ಗ ವಾರ್ತೆ

ಭದ್ರಾವತಿ: ರಾಜ್ಯದಲ್ಲಿ ಕರ್ನಾಟಕ ವೆಲ್ಫೇರ್ ಪಾರ್ಟಿ ಹುಟ್ಟಿಕೊಂಡು ಹತ್ತು ವರ್ಷಗಳಾದ ಪ್ರಯುಕ್ತ ದಶಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧ ವಾತಾವರಣವನ್ನು ನಿವಾರಿಸಲು ಪರ್ಯಾಯ ಪಕ್ಷದ ಅವಶ್ಯಕತೆ ಇದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ತಿಳಿಸಿದರು.

ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪನ ದಿನಾಚರಣೆಗಳು ಆಚರಿಸಲಾಯಿತು. ಭದ್ರಾವತಿ ಪಕ್ಷದ ಕಚೇರಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಮೌಲ್ಯಾಧಾರಿತ ರಾಜಕೀಯ:
ಅಪರಾಧ, ಭ್ರಷ್ಟಾಚಾರ, ಸ್ವಾರ್ಥ ಹಿತಾಸಕ್ತಿಯಂತಹ ಸಂಕುಚಿತ ಪಕ್ಷಪಾತಗಳಿಂದ ಮುಕ್ತ, ಉನ್ನತ ನೈತಿಕ ಮೌಲ್ಯಾಧಾರಿತ ರಾಜಕೀಯವನ್ನು ಪಕ್ಷವು ದೇಶದಲ್ಲಿ ಪ್ರೋತ್ಸಾಹಿಸಲು ಬಯಸುವುದು. ಅದಕ್ಕಾಗಿ ವಿಚಾರಣೆ ಮತ್ತು ಜವಾಬ್ದಾರಿಕೆಯ ವ್ಯವಸ್ಥೆಯನ್ನು ಚುರುಕುಗೊಳಿಸಬೇಕಾಗಿದೆ. ಅಧಿಕಾರವು ದೊಡ್ಡದಾದಂತೆ ಜವಾಬ್ದಾರಿಕೆ, ಉತ್ತರದಾಯಿತ್ವವೂ ಹೆಚ್ಚಾಗಬೇಕು. ನಿಷ್ಕಳಂಕ ಚಾರಿತ್ರ್ಯ ರಾಜಕೀಯ ಪ್ರಾತಿನಿಧ್ಯಕ್ಕೆ ಮೂಲಶರ್ತವಾಗಬೇಕು.

ಕಲ್ಯಾಣ ರಾಷ್ಟ್ರದ ಕಲ್ಪನೆ:
ಪಕ್ಷವು ಒಂದು ಕಲ್ಯಾಣ ರಾಷ್ಟ್ರಕ್ಕಾಗಿ ಶ್ರಮಿಸುತ್ತಿರುವುದು. ಪಕ್ಷದ ದೃಷ್ಟಿಯಲ್ಲಿ ಆಹಾರ, ಉಡುಪು, ಮನೆ, ಆರೋಗ್ಯ ಹಾಗೂ ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬ ನಾಗರಿಕನ ಮೂಲಭೂತ ಮಾನವೀಯ ಹಕ್ಕುಗಳಲ್ಲಿ ಸೇರಿವೆ. ನಾಗರಿಕರ ಈ ಮೂಲಭೂತ ಅವಶ್ಯಕತೆಗಳ ಈಡೇರಿಕೆ ಒಂದು ಕಲ್ಯಾಣ ರಾಷ್ಟ್ರದ ಹೊಣೆಗಾರಿಕೆಗಳಲ್ಲಿ ಸೇರಿದೆ.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಮತ್ತು ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.