ಮನೆಗಳಲ್ಲೇ ಸರಳ ಈದ್ ಆಚರಿಸಿ: ಖಾಝಿ ಮಾಣಿ ಉಸ್ತಾದ್ ಕರೆ

0
525

ಸನ್ಮಾರ್ಗ ವಾರ್ತೆ

ಮಂಗಳೂರು: ಕೋವಿಡ್-ಲಾಕ್‌ಡೌನ್ ಮಧ್ಯೆ ಮುಸ್ಲಿಮ್ ಬಾಂಧವರು ಈ ಬಾರಿಯ ಈದುಲ್ ಫಿತ್ರ್ ಹಬ್ಬವನ್ನು ಕಳೆದ ವರ್ಷದಂತೆಯೇ ಮನೆಗಳಲ್ಲೇ ಸರಳವಾಗಿ ಆಚರಿಸಬೇಕೆಂದು ಉಡುಪಿ, ಚಿಕ್ಕಮಗಳೂರು,ಹಾಸನ, ಶಿವಮೊಗ್ಗ ಸಂಯುಕ್ತ ಜಮಾತ್ ಹಾಗೂ ದ.ಕ.ವಿವಿಧ ಮೊಹಲ್ಲಾಗಳ ಖಾಝಿ ಎಸ್‌ಜೆಯು ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ.

ಫಿತ್ರ್ ಝಕಾತ್(ಧಾನ್ಯ ದಾನ)ನ್ನು ಈದ್ ಮುಂಜಾನೆಯೆ ಅರ್ಹರಿಗೆ ಸಂದಾಯ ಮಾಡಿ, ಮನೆಗಳಲ್ಲೆ ಸರಳವಾಗಿ ಈದ್ ನಮಾಝ್ ನಿರ್ವಹಿಸಿ ಈದ್ ಹಬ್ಬ ಆಚರಿಸುವ ಮೂಲಕ ಕೋರೋನ ವಿರುದ್ಧದ ಜಾಗೃತಿಯಲ್ಲಿ ಎಲ್ಲರೂ ಕೈ ಜೋಡಿಸಬೇಕು‌.
ಈದ್ ನ ಭಾಗವಾಗಿ ಕುಟುಂಬಸ್ಥರ ಮನೆಗೆ ಪರಸ್ಪರ ಭೇಟಿಯಾಗದೇ ಈ ವರ್ಷ ಸಂಪರ್ಕ ಮಾಧ್ಯಮಗಳ ಮೂಲಕ ಕುಟುಂಬಿಕರನ್ನು ಸಂಪರ್ಕಿಸಲು ಖಾಝಿ ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ.

ದುಂದುವೆಚ್ಚ, ಅಪವ್ಯಯ ಮಾಡದೇ ಸಂಕಷ್ಟದಲ್ಲಿರುವ ಸರ್ವಧರ್ಮಿಯರಿಗೂ ನೆರವಾಗುವ ಮೂಲಕ ಈ ಬಾರಿಯ ಈದ್ ನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕು. ಕೋವಿಡ್ ವಿರುದ್ಧದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೇ. 24 ರ ನಂತರ ಲಾಕ್‌ಡೌನ್ ಮುಂದುವರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.