ಐತಪ್ಪ ನಾಯ್ಕ್ ಮತ್ತು ಬೆಲೆ ಕಟ್ಟಲಾಗದ ಆ ಮೂರು ಸಾವಿರ..!

0
686

ಲೇಖನ: ರಶೀದ್ ವಿಟ್ಲ

“ಮಾನ್ಯ ರಶೀದ್ ರವರೇ…
ನನ್ನ ಕೈಯಲ್ಲಾಗುವ ಒಂದು ಕಿರು ಸಹಾಯ ರೂ. 3,000/- ವನ್ನು ನಿಮ್ಮ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಧಿಗೆ ವರ್ಗಾಯಿಸುತ್ತೇನೆ. ನೀವಿದನ್ನು ಕೋವಿಡ್ ಜಿಲ್ಲಾಸ್ಪತ್ರೆಯ ರೋಗಿಗಳ ಸಹವರ್ತಿಗಳ ಊಟಕ್ಕಾಗಿ ಬಳಸಬಹುದು. ಸಾಲ, ಮನೆ ಖರ್ಚು, ತಂದೆ ತಾಯಿಗಳ ಔಷಧಿ ವೆಚ್ಚ ಇವೆಲ್ಲವೂ ನನ್ನ ತಲೆ ಮೇಲಿರುವಾಗ ಮೊತ್ತ ಚಿಕ್ಕದಾಗಿರುವುದಕ್ಕೆ ಕ್ಷಮಿಸಿ.”

ಇದು ಮಾನವೀಯ ಗುಣವುಳ್ಳ ಕಾನತ್ತಡ್ಕ ಶ್ರೀ ಕೃಷ್ಣ ವಿದ್ಯೋದಯ ಹಿ.ಪ್ರಾ. ಶಾಲೆಯ ಸಹೃದಯಿ ಸಹಶಿಕ್ಷಕ ಐತಪ್ಪ ನಾಯ್ಕ್ (+91 7892182868) ಅವರ ಉದಾರತೆಯ ಮಾತು. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಳೆದ ಮೂರೂವರೆ ವರ್ಷಗಳಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳ ಸಹವರ್ತಿಗಳಿಗೆ ಪ್ರತಿದಿನ ರಾತ್ರಿಯ ಉಚಿತ ಭೋಜನ ವ್ಯವಸ್ಥೆ ಮಾಡುತ್ತಿದ್ದು, ಕೋವಿಡ್ 19ರ ನಂತರ ಕಳೆದೊಂದು ವರ್ಷದಿಂದ ಸರಕಾರಿ ಕೋವಿಡ್ ಜಿಲ್ಲಾಸ್ಪತ್ರೆಗೂ ಈ ವ್ಯವಸ್ಥೆಯನ್ನು ವಿಸ್ತರಿಸಿದೆ. ಕೋವಿಡ್ ಫುಡ್ ಗೆ ಪ್ರಸ್ತುತ ದಿನನಿತ್ಯ 1,600/- ರೂ. ಖರ್ಚು ಇದ್ದು, ಎಂ.ಫ್ರೆಂಡ್ಸ್ ನಿಧಿ ಬರಿದಾದಾಗ ಸಾರ್ವಜನಿಕರಿಗೆ ಕನಿಷ್ಟ 1,600/- ನೀಡಿ ಸಹಕರಿಸುವಂತೆ ವಿನಂತಿಸಲಾಗಿತ್ತು. ಇದಕ್ಕೆ ಹಲವಾರು ಸಹೃದಯರು ಸ್ಪಂದಿಸಿದ್ದರು. ತೀರಾ ಆರ್ಥಿಕ ಸಂಕಷ್ಟದಲ್ಲಿದ್ದವರು ಕೂಡಾ ಐನೂರು, ಸಾವಿರ ನೀಡಿ ಯೋಜನೆಯನ್ನು ಪ್ರೋತ್ಸಾಹಿಸಿದ್ದರು. ಈ ನಡುವೆ ಐತಪ್ಪ ನಾಯ್ಕ್ ಕಾನತ್ತಡ್ಕ ಅವರು ತಮ್ಮ ವೈಯಕ್ತಿಕ ಆರ್ಥಿಕ ಸಮಸ್ಯೆ, ಸಾಲ, ತಂದೆ-ತಾಯಿ ಅನಾರೋಗ್ಯದ ಶುಶ್ರೂಷೆ ನಡುವೆಯೂ ಎಂ.ಫ್ರೆಂಡ್ಸ್ ನಿಧಿಗೆ 3,000/- ನೀಡಿ “ಸಣ್ಣ ಮೊತ್ತ ನೀಡಿದ್ದಕ್ಕೆ ಕ್ಷಮಿಸಿ” ಅಂತ ಹೇಳಿ ತಮ್ಮ ದೊಡ್ಡ ಹೃದಯ ವೈಶಾಲ್ಯತೆಯನ್ನು ತೋರಿಸಿದ್ದಾರೆ. ಈ ಮಾತು ಕೇಳಿದಾಗ ಒಮ್ಮೆ ಕಣ್ತುಂಬಿ ಬಂತು. ಅವರ ಮೇಲಿರುವ ಅಭಿಮಾನ ಮೇಲೈಸಿತು. ಇಂತಹವರೂ ಸಮಾಜದಲ್ಲಿದ್ದಾರಲ್ಲಾ ಅಂತ ಹೆಮ್ಮೆಯಾಯಿತು.

ಇತ್ತೀಚೆಗೆ ಅವರು ಎಂ.ಫ್ರೆಂಡ್ಸ್ ಕೋವಿಡ್ ಫುಡ್ ಯೋಜನೆಯ ಫೇಸ್ಬುಕ್ ಪೋಸ್ಟಿಗೆ ಉತ್ತರಿಸಿ “ನೆರೆಮನೆಯವ ಸತ್ತರೂ ನನಗೆ ಚಿಂತೆಯಿಲ್ಲ, ತಾನು ಸುಖವಾಗಿರಬೇಕು ಎಂದು ಹೆಚ್ಚಿನವರು ಬಯಸುವ ಈ ಸಮಾಜದಲ್ಲಿ ಎಂ.ಫ್ರೆಂಡ್ಸ್ ನವರ ಈ ಸೇವೆಗೆ ಬೆಲೆ ಕಟ್ಟಲಾಗದು. ಕೊಡುವ ಕೈಗಳನ್ನು ದೇವರು ಬರಿದಾಗಲು ಬಿಡುವುದಿಲ್ಲ. ಇದ್ದೂ ಕೊಡದವನಿಗೆ ಎಂದಿಗೂ ಯಾವುದಾದರೊಂದು ರೀತಿಯಲ್ಲಿ ಮಾನಸಿಕ ಶಾಂತಿ ದೊರಕಲ್ಲ ಎಂದು ಹಿರಿಯರ ಮಾತಿದೆ.” ಎಂದು ಕಮೆಂಟ್ ಹಾಕಿದ್ದರು. ಐತಪ್ಪ ನಾಯ್ಕ್ ಕೆಲ ವರ್ಷಗಳ ಹಿಂದೆ ತಾನು ಸಹಶಿಕ್ಷಕನಾಗಿರುವ ಕಾನತ್ತಡ್ಕ ಶಾಲೆಯ ಬಾವಿಗೆ ಮೂಕಪ್ರಾಣಿ ಆಡು ಬಿದ್ದಾಗ ಅದರ ಆಕ್ರಂದನ ಕೇಳಿ ಯಾರೂ ಸ್ಪಂದಿಸದಿದ್ದಾಜ ಸ್ವತಃ ಐತಪ್ಪ ನಾಯ್ಕ್ ಅವರು ಜೀವದ ಹಂಗು ತೊರೆದು ತಕ್ಷಣ ಬಾವಿಗಿಳಿದು ಆ ಆಡಿಗೆ ಮರುಜೀವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಎಂ.ಫ್ರೆಂಡ್ಸ್ ನಿಧಿಗೆ ನಿಮಗೂ ಸಹಕರಿಸಲು ಆಸಕ್ತಿ ಇದ್ದರೆ ಈ ಖಾತೆ ಬಳಸಬಹುದು.
M Friends Charitable Trust
A/C No: 3058101003352
Bank: Canara Bank
Branch : Vittal
IFSC : CNRB0003058
Mob: +91 9741993313