ದಲಿತ ಯುವಕನ ಮೇಲೆ ಹಲ್ಲೆಗೈದು ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿ ಗೋಣಿಬೀಡು ಪಿಎಸ್‍ಐಯಿಂದ ದೌರ್ಜನ್ಯ: ಹಿರಿಯ ಅಧಿಕಾರಿಗಳಿಗೆ ದೂರು

0
3744

ಸನ್ಮಾರ್ಗ ವಾರ್ತೆ

ಚಿಕ್ಕಮಗಳೂರು: ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೋರ್ವರ ಜೊತೆ ಅಕ್ರಮ ಸಂಬಂಧವಿದೆ. ಆಕೆಯನ್ನು ಬೇರೆಡೆ ಕರೆದೊಯ್ದಿಟ್ಟಿದ್ದೇನೆ ಎಂದು ಒಪ್ಪಿಕೊಳ್ಳಲು ಒತ್ತಾಯಿಸಿ ಗೋಣೀಬೀಡು ಠಾಣೆ ಪಿಎಸ್‍ಐ ತನ್ನ ಮೇಲೆ ವಿನಾಕಾರಣ ತೀವ್ರ ಹಲ್ಲೆ ನಡೆಸಿ ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾ.ಪಂ.ದಿನಗೂಲಿ ನೌಕರ ಕೆ.ಎಲ್. ಪುನೀತ್ (22) ಎಂಬವರು ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮೇ10ರಂದು ಬೆಳಗ್ಗೆ 10 ಗಂಟೆಗೆ ಕಿರುಗುಂದ ಗ್ರಾಮದಲ್ಲಿರುವ ತನ್ನ ಮನೆಗೆ ಅದೇ ಗ್ರಾಮದ ಕೆಲವರು ಬಂದು ಮಹಿಳೆಯ ಬಗ್ಗೆ ವಿಚಾರಿಸುತ್ತಾ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದಾಗ ತಾನು ಪೋಲೀಸ್ ಹೆಲ್ಪ್ ಲೈನ್ 112ಕ್ಕೆ ಕರೆ ಮಾಡಿದ್ದೆ. ಆಗ ಸ್ಥಳಕ್ಕೆ ಬಂದ ಗೋಣೀಬೀಡು ಪಿಎಸ್‍ಐ ಅರ್ಜುನ್‍ ಎಂಬವರು ತನ್ನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಲ್ಲದೇ, ಪೋಲೀಸ್ ವಾಹನಕ್ಕೆ ಹತ್ತಿಸಿಕೊಂಡು ಗೋಣೀಬೀಡು ಠಾಣೆಗೆ ಕರೆದೊಯ್ದರು. ಠಾಣೆಯ ಮಹಡಿಯ ಕೊಠಡಿಯೊಳಗೆ ಕರೆದೊಯ್ದು ತನ್ನ ಬಟ್ಟೆ ಬಿಚ್ಚಿಸಿ ಕೈಕಾಲು ಕಟ್ಟಿ ಮೇಲಕ್ಕೆ ತೂಗುಹಾಕಿ ಪಾದ ಹಾಗೂ ಮೈಕೈಗೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾನು ಸಾಯುವ ಮಟ್ಟಕ್ಕೆ ಹೋದಾಗ ಕುಡಿಯಲು ನೀರು ಕೇಳಿದೆ. ಆಗ ಅಲ್ಲೇ ಇದ್ದ ಇನ್ನೊಬ್ಬ ಆರೋಪಿಯ ಬಳಿ ತನ್ನ ಬಾಯಿಗೆ ಮೂತ್ರ ಮಾಡುವಂತೆ ಪಿಎಸ್‍ಐ ಅರ್ಜುನ್ ತಿಳಿಸಿದ್ದು, ಅದರಂತೆ ಆತ ತನ್ನ ಬಾಯಿಗೆ ಮೂತ್ರ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ನಾನು ಅಮಾಯಕ, ನನಗೂ ಆಕೆಗೆ ಸಂಬಂಧವಿಲ್ಲ. ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದಾಗ ನೆಲಕ್ಕೆ ಚೆಲ್ಲಿದ್ದ ಮೂತ್ರ ನಾಲಿಗೆಯಿಂದ ನೆಕ್ಕುವುದಾದರೆ ಬಿಡುತ್ತೇನೆ ಎಂದು ಪಿಎಸ್‍ಐ ತಿಳಿಸಿ ತೂಗು ಹಾಕಿದ ನನ್ನನ್ನು ಕೆಳಗಿಳಿಸಿ ನೆಲದಲ್ಲಿದ್ದ ಮೂತ್ರ ನೆಕ್ಕಿಸಿ ವಿಕೃತಿ ಮೆರೆದಿದ್ದಾರೆ. ತನ್ನ ಜಾತಿ ಯಾವುದೆಂದು ಕೇಳಿದಾಗ ದಲಿತನೆಂದಿದ್ದಕ್ಕೆ ನನ್ನ ಜಾತಿಗೂ ನಿಂದಿಸಿದರು ಎಂದು ಯುವಕ ಪುನೀತ್ ತಿಳಿಸಿದ್ದಾನೆ.

ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೇನೆ. ಆಕೆಯನ್ನು ಕರೆದೊಯ್ದು ಬೇರೆಡೆ ಕುಳ್ಳಿರಿಸಿದ್ದೇನೆ ಎಂದು ಒಪ್ಪಿಕೋ ಎನ್ನುತ್ತಾ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ರಾತ್ರಿ 10 ಗಂಟೆಗೆ ನನ್ನನ್ನು ಪಿಎಸ್‍ಐ ಅವರ ಕೊಠಡಿಗೆ ಕರೆದು ಹಲ್ಲೆ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ಹೇಳಿ ನನ್ನನ್ನು ಠಾಣೆಯಿಂದ ಮನೆಗೆ ಕಳುಹಿಸಿದರು ಎಂದು ಯುವಕ ಮೇಲಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾನೆ.

ಗೋಣೀಬೀಡು ಪಿಎಸ್‍ಐ ಅರ್ಜುನ್‍

ಗ್ರಾ.ಪಂ.ನಲ್ಲಿ ದಿನಗೂಲಿ ನೌಕರನಾಗಿ ದುಡಿದು ಜೀವನ ನಡೆಸುತ್ತಿದ್ದೇನೆ. ಯಾವುದೋ ಮಹಿಳೆಯ ವಿಚಾರಕ್ಕೆ ಸಂಬಂಧಿಸಿ ನನ್ನ ಮೇಲೆ ತೀವ್ರ ಹಲ್ಲೆ ನಡೆಸಿರುವ ಕಾರಣದಿಂದ ಮೈಕೆ ಮೂಳೆಗಳು ತೀವ್ರ ಹಾನಿಗೊಳಗಾಗಿದೆ. ಇನ್ನು ಮುಂದೆ ನನಗೆ ಕೆಲಸಮಾಡಲು ಸಾಧ್ಯವಾಗುತ್ತಿಲ್ಲ. ನನ್ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಬೆಳಗ್ಗಿನಿಂದ ರಾತ್ರಿವರೆಗೂ ಕ್ರೂರವಾಗಿ ದೌರ್ಜನ್ಯ ನಡೆಸಿ ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ ಪಿಎಸ್‍ ಐ ಅರ್ಜುನ್‍ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಪಶ್ಚಿಮ ವಲಯ ಐಜಿಪಿ ಹಾಗೂ ಎಸ್‍ಪಿ ಎಂ.ಹೆಚ್.ಅಕ್ಷಯ್‍ ಅವರಿಗೆ ದೂರು ನೀಡಿದ್ದೇನೆ ಎಂದು ಕೆ.ಎಲ್.ಪುನಿತ್ ತಿಳಿಸಿದ್ದಾರೆ.

ಕಿರುಗುಂದ ಗ್ರಾಮದ ಕೆ.ಎಲ್.ಪುನೀತ್ ಎಂಬ ಯುವಕನಿಗೆ ಗೋಣೀಬೀಡು ಪಿಎಸ್‍ಐ ಅರ್ಜುನ್‍ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಲು ಡಿವೈಎಸ್‍ಪಿ ಅವರಿಗೆ ಸೂಚಿಸಲಾಗಿದೆ. ಅವರ ವರದಿ ಬಂದ ನಂತರ ಕ್ರಮ ತಪ್ಪಿತಸ್ಥರ ವಿರುದ್ಧ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ತಿಳಿಸಿದ್ದಾರೆ.

 

ಹಲ್ಲೆಗೊಳಗಾದ ಯುವಕ ಪುನೀತ್