ಉತ್ತರ ಪ್ರದೇಶ: ಐದು ವರ್ಷದ ಮಗಳನ್ನು 500 ರೂಪಾಯಿಗೆ ಮಾರಲು ಯತ್ನಿಸಿದ ತಾಯಿಯ ಬಂಧನ

0
641

ಸನ್ಮಾರ್ಗ ವಾರ್ತೆ

ಆಗ್ರ: ಉತ್ತರ ಪ್ರದೇಶದ ಮಥುರಾದಲ್ಲಿ ಐದು ವರ್ಷದ ಮಗಳನ್ನು 500ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಶಂಕೆಯಿದ್ದರೆ ಈ ಹಿಂದೆಯೂ ಇವರು ಇದೇ ರೀತಿ ಮಾರಾಟ ನಡೆಸಿದ್ದಾರೆಂದು ಹೇಳಲಾಗುತ್ತದೆ. ಅಂದು ಹಿರಿಯ ಮಗ ಮಾತ್ರವಲ್ಲ ಸ್ವಯಂ ತನ್ನನ್ನೂ ಇವರು ಮಾರಾಟ ಮಾಡಿದ್ದರು. 40,000ರೂಪಾಯಿಗೆ ಖರೀದಿಸಿದವರು ನಂತರ ಇವರ ಪತಿಯಾಗಿದ್ದಾರೆ.

ಘಟನೆಯ ನಂತರ ಮಹಿಳೆಯ ಇನ್ನಿಬ್ಬರು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದು ಶಿಶು ಪರಿಚಾರಣಾ ಕೇಂದ್ರಕ್ಕೆ ಕಳುಹಿಸಿದರು. ಇವರನ್ನೂ ಮಾರಬಹುದೆಂಬ ಶಂಕೆಯಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಚೈಲ್ಡ್ ಲೈನ್ ಟ್ರೋಲ್‍ಫ್ರೀ ನಂಬ್ರ 1098ಕ್ಕೆ ಫೋನ್ ಬಂದ ನಂತರ ರಜ್‍ವೀರ್ ಕೌರ್ ಎಂಬ ಮಹಿಳೆ ತನ್ನ ಸಣ್ಣ ಮಗಳನ್ನು 500ರೂಪಾಯಿಗೆ ಮಾರಲು ಇಟ್ಟಿರುವ ಸಂದೇಶದ ಬಗ್ಗೆ ಗೊತ್ತಾಗಿದ್ದು ಕೂಡಲೇ ಅವರಲ್ಲಿಗೆ ಹೋದ ಚೈಲ್ಡ್ ಲೈನ್ ತಂಡ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಯಿತು. ಅವರ ಬ್ಯಾಗಿನಲ್ಲಿದ್ದ ಫೋನ್ ನಂಬರಿಗೆ ಕರೆ ಮಾಡಿದಾಗ ಪತಿ ಜಸ್ಸಾ ಸಿಂಗ್ ಫೋನ್ ಎತ್ತಿದ್ದರು.

ಮಹಿಳೆ ಮೂರು ನಾಲ್ಕು ತಿಂಗಳಿನಿಂದ ಕಾಣೆಯಾಗಿದ್ದು ಮಗಳೂ ಕಾಣೆಯಾಗಿದ್ದಾಳೆ ಎಂದು ಜಸ್ಸಾ ಸಿಂಗ್ ಹೇಳಿದ್ದಾರೆ. ಈ ಹಿಂದೆ ನಲ್ವತ್ತು ಸಾವಿರ ರೂಪಾಯಿ ಕೊಟ್ಟು ಮಹಿಳೆ ಮತ್ತು ಏಳು ವರ್ಷದ ಮಗಳನ್ನು ಖರೀದಿಸಿದ್ದೆ ಎಂದು ಜಸ್ಸಾ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.