ಸನ್ಮಾರ್ಗ ವಾರ್ತೆ
ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ರಾಜ್ಯದ ಜನತೆ ತತ್ತರಿಸುತ್ತಿದ್ದರೆ, ಇತ್ತ ರಾಜ್ಯವನ್ನಾಳುವ ಜನ ನಾಯಕರು ಮಾತ್ರ ನಾಯಕತ್ವ ಬದಲಾವಣೆಯಲ್ಲಿ ತೊಡಗಿರುವುದು ದುರಂತ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬಿಬುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಆಗಮಿಸಿದ್ದು, ಸತತವಾಗಿ ಬಿಜೆಪಿ ರಾಜ್ಯ ನಾಯಕರು ಕಳೆದ ಎರಡು ದಿನಗಳಿಂದ ನಾಯಕ ಬದಲಾವಣೆ ಕುರಿತು ಸಭೆ ನಡೆಸುತ್ತಲೇ ಇದ್ದಾರೆ. ಇತ್ತ ರಾಜ್ಯದಲ್ಲಿ ಕೋವಿಡ್ ನಿಂದ ಸಾವು ಅನುಭವಿಸಿದ ಕುಟುಂಬಗಳ ಬಗ್ಗೆ ಮತ್ತು ಲಾಕ್ ಡೌನ್ ನಿಂದ ಬಡಜನರು ಒಪ್ಪತ್ತಿನ ಊಟಕ್ಕೂ ಪರದಾಡುತ್ತ ಜೀವನ ಸಾಗಿಸುತ್ತಿರುವ ಬಗ್ಗೆ ಯೊಚಿಸದೆ ಕೇವಲ ತಮ್ಮ ಸಭೆಯತ್ತ ಮಗ್ನರಾಗಿದ್ದು ಖಂಡನೀಯ. ರಾಜ್ಯ ಬಿಜೆಪಿ ನಾಯಕರಲ್ಲೆ ಹೊಂದಾಣಿಕೆ ಇಲ್ಲದೆ ಜಗ್ಗಾಟ ನಡೆಸುತ್ತಿರುವದು ನೊಡಿದರೆ ಇವರೇನು ರಾಜ್ಯ ಆಳುವ ನಾಯಕರೇ? ಎನ್ನುವುದು ಅನುಮಾನ ಮೂಡಿಸುವಂತಿದೆ. ಮೊದಲು ಜನರ ಕಷ್ಟಗಳನ್ನು ಪರಿಹರಿಸಿ ತದನಂತರ ತಮ್ಮ ನಾಯಕನ ಬದಲಾವಣೆ ಕುರಿತು ಚರ್ಚಿಸಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಾವಿರಾರು ಜನ ಕೋವಿಡ್ ಹಾಗೂ ಹಸಿವಿನಿಂದ ಸಾಯುತ್ತಿದ್ದರು ತಿರುಗಿ ನೋಡದವರು ಜನರು ಕೊರೋನ ಮರೆಯುವ ಹಾಗೆ ಭರ್ಜರಿ ಸಭೆ ನಡೆಸುತ್ತಿದ್ದಾರೆ.ಕೋವಿಡ್ನ ಸಂಕಷ್ಟಕ್ಕೆ ಸಿಲುಕಿ ರಾಜ್ಯದ ಜನರು ನಲುಗಿದ್ದಾರೆ. ಆದರೆ ಆಡಳಿತ ಪಕ್ಷದಲ್ಲಿ ಎರಡು ಬಣಗಳ ನಡುವಿನ ಕಚ್ಚಾಟ ತಾರಕಕ್ಕೇರಿದೆ. ಇಲ್ಲಿನ ಜನಪ್ರತಿನಿಧಿಗಳು ಮಾನ ಮರ್ಯಾದೆಯಿಲ್ಲದಂತೆ ವರ್ತಿಸುತ್ತಿದ್ದಾರೆಂದು ಲೇವಡಿ ಮಾಡಿದರು.
ಬಿಜೆಪಿ ಹೈಕಮಾಂಡಿಗೆ ರಾಜ್ಯದ ಜನರ ಬಗ್ಗೆ ಪರಿವೇ ಇಲ್ಲ. ಜನರ ಸಮಸ್ಯೆಗಳತ್ತ ಗಮನ ಹರಿಸುವುದು ಬಿಟ್ಟು, ನಾಯಕತ್ವ ಬದಲಾವಣೆಯ ಬಗ್ಗೆ ಹಗಲಿರುಳು ಚಿಂತನೆ ನಡೆಸುತ್ತಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.












