ಅಲಕ್ಷಿಸಲಾಗದ ಲಕ್ಷದ್ವೀಪ: ಒಂದು ನೆನಪು

0
713

ಲೇಖನ: ರಹಮತ್ ತರೀಕೆರೆ

(ಇಪ್ಪತ್ತು ವರ್ಷದ ಹಿಂದೆ ಲಕ್ಷದ್ವೀಪಕ್ಕೆ ಹೋದಾಗ ಬರೆದ ಪ್ರವಾಸ ಕಥನದ ಆಯ್ದ ಭಾಗವಿದು. ಈಗ ಈ ದ್ವೀಪ ಸಮೂಹ ಸುದ್ದಿಯಲ್ಲಿದೆ. ಹಾಗಾಗಿ ನೆನಪಾಯಿತು)

ಇಲ್ಲಿ ಒಂದು ಬೆಟ್ಟವಿಲ್ಲ, ಕಣಿವೆಯಿಲ್ಲ, ನದಿಯಿಲ್ಲ, ಧಾನ್ಯ ಬೆಳೆಯವುದಿಲ್ಲ, ಒಂದು ಕಾಡು ಮೃಗವಿಲ್ಲ. ಹಣೆಗೆ ಹಚ್ಚಿಕೊಳ್ಳುತ್ತೇನೆಂದರೆ ಚಿಟಿಕೆ ಧೂಳು ಸಿಗುವುದಿಲ್ಲ. ತೇದು ಕುಡಿಯುತ್ತೇನೆ ಎಂದರೆ ಒಂದು ಕಲ್ಲಹರಳು ಸಿಗುವುದಿಲ್ಲ. ನೇಣು ಹಾಕಿಕೊಳ್ಳುವೆ ಎಂದರೆ ಸರಿಯಾದ ಮರದ ಕೊಂಬೆ ದೊರಕುವುದಿಲ್ಲ. ಇವೆಯೆಂದರೆ ಎರಡೇ ವಸ್ತು. ಒಂದು- ನೀಲ ಕಡಲು. ಎರಡು-ಹುಚ್ಚುಚ್ಚಾಗಿ ಬೆಳೆದಿರುವ ತೆಂಗಿನಕಾಡು. ಇಷ್ಟೊಂದು ಇಲ್ಲಗಳ ನಾಡಿನಲ್ಲಿ ಜನ ಹ್ಯಾಗಾದರೂ ಬದುಕಿದ್ದಾರೋ ಎಂಬ ಸೋಜಿಗ ಈ ದ್ವೀಪಗಳಿಗೆ ಕಾಲಿಟ್ಟೊಡನೆ ಬರುತ್ತದೆ.

ಅಂಡಮಾನ್ ನಿಕೋಬಾರುಗಳಂತೆ ಇವು ಸಹಜ ದ್ವೀಪಗಳೇ ಅಲ್ಲ; ಅಂಡಮಾನು ನಮ್ಮ ಪಶ್ಚಿಮಘಟ್ಟಗಳಂತೆ ಕಲ್ಲು ಮಣ್ಣು ಬೆಟ್ಟ ಸಸ್ಯ ಪ್ರಾಣಿ ಪಕ್ಷಿಗಳನ್ನುಳ್ಳ ದ್ವೀಪ. ಲಕ್ಷದ್ವೀಪಗಳೋ ಹವಳದ ದಿಬ್ಬಗಳು. `ವಿನಾಶಕಾರಿ’ ಎಂದು ಎಲ್ಲರೂ ತಿಳಿದಿರುವ ಜ್ವಾಲಾಮುಖಿ ಇವನ್ನು ಹಡೆದ ತಾಯಿ. ಸಾಗರದೊಳಗಿನ ಜ್ವಾಲಾಮುಖಿಗಳೆದ್ದು, ಲಾವಾರಸ ಮೇಲಕ್ಕೆ ಚಿಮ್ಮಿ, ಅದು ತಂಪಾಗಿ ಬಂಡೆಯ ರೂಪಪಡೆದು, ಅದರ ಮೇಲೆ ಹವಳಜೀವಿಗಳು ನೆಲೆಸತೊಡಗಿ, ಅವೆಲ್ಲ ಸತ್ತಮೇಲೆ ಅಸ್ಥಿಗಳು ಕಾಂಕ್ರೀಟಿನಂತೆ ಗಟ್ಟಿಯಾಗಿ ಬಂಡೆಯ ಸುತ್ತ ದಂಡೆ ನಿರ್ಮಾಣವಾಯಿತಂತೆ. ಆ ದಂಡೆಯ ಮೇಲೆ ಒಂದು ವಿಶಾಲವಾದ ಕಡಲ ಸರೋವರ ಉಂಟಾಗಿ, ಅದರ ಮೇಲೆ ಅಲೆಯ ಹೊಡೆತಕ್ಕೆ ಹವಳದ ಅಸ್ಥಿಗಳು ನುಚ್ಚಾಗಿ, ಅವುಗಳ ಪುಡಿ ಉಸುಕಿನಂತೆ ದಿಬ್ಬದ ಮೇಲೆ ಹಾಸಾಗಿ ಹರಡಿತು. ಈ ನಡುಗಡ್ಡೆಗಳು ರೂಪುಗೊಂಡವು. ಈ ರೂಪಾಂತರಕ್ಕೆ ಮಿಲಿಯಾಂತರ ವರುಷ ಹಿಡಿದಿವೆ. ಇದು ಹವಳ ಜೀವಿಗಳ ಮಸಣದ ಮೇಲೆ ಮೂಡಿದ ನಾಡು. ನೆಲದಾಳದ ಶುರುವಾದ ಚರಿತ್ರೆ, ಈಗ ಸಸ್ಯಶ್ಯಾಮಲೆಯಾಗಿ ತೆಂಗಿನಸೀಮೆಯ ವರ್ತಮಾನವಾಗಿದೆ . ಹವಳದ ಎಲುಬು ಮತ್ತು ಕಪ್ಪೆಚಿಪ್ಪುಗಳಿಂದ ಕೂಡಿ ಗಚ್ಚುಗೊಂಡಂತೆ ಎರಕಹೊಯ್ದ ನೆಲದಲ್ಲಿ ಮೊಳಕಾಲು ಮಟ್ಟ ತೋಡಿದರೆ ಸಾಕು, ಎಳೆನೀರಿನಂತಹ ಜಲ.

 

ಇಲ್ಲಿನ ಯಾವ ದ್ವೀಪಕ್ಕೂ ಬಂದರಿಲ್ಲ. ದ್ವೀಪಗಳ ದಡಕ್ಕೆ ತೆರೆದ ಕಡಲಿನ ಅಲೆಗಳು ಬಂದು ಅಪ್ಪಳಿಸುವುದಿಲ್ಲ. ದ್ವೀಪಕ್ಕೂ ತೆರೆದ ಕಡಲಿಗೂ ಕಡಲಿನ ನೀರು ತುಳುಕಿ ಬಂದು ನಿಂತು, ಕೆಲವು ದೊಡ್ಡ ಸರೋವರಗಳು ನಿರ್ಮಾಣವಾಗಿವೆ. ಈ ಸರೋವರಗಳಿಗೂ ಕಡಲಿಗೂ ನಡುವೆ ಸುಣ್ಣದಂಶವುಳ್ಳ ಹವಳದ ಅಸ್ಥಿಗಳು ಸಾವಿರಾರು ವರುಷಗಳಿಂದ ಒಂದಕ್ಕೊಂದು ಬೆಸೆದುಕೊಂಡು, ಕಬ್ಬಿಣ ರಸದಿಂದ ಎರಕ ಹೊಯ್ದಂತಹ ದಂಡೆ ನಿರ್ಮಾಣವಾಗಿದೆ. ಅದು ಮುಳುಗಿದ ಆನೆಯ ಬೆನ್ನಿನೇಣಿನಂತೆ ಸರೋವರದ ಸುತ್ತಲೂ ಎದ್ದು ಕಾಣುತ್ತದೆ. ಅದರ ಮೇಲೆ ನಡೆದರೆ ಕಾಲು ಕೊಯ್ದಂತಾಗುತ್ತದೆ. ಈ ದಂಡೆಯ ಪರಿಧಿ ಮೈಲಿಗಟ್ಟಲೆ ಉದ್ದ. ಆದರೆ ಈ ಕಡಲ ಸರೋವರಗಳಲ್ಲಿ ನೀರು ಮಾತ್ರ ಸೊಂಟದುದ್ದ. ಅಲೆಗಳ ಹೊಯ್ದಾಟವಿಲ್ಲದ ಈ ಸರೋವರಗಳು. ಭಟ್ಟಿಯಿಳಿಸಿದಂತೆ ಸ್ಫಟಿಕಶುದ್ಧವಾಗಿರುವ ಇದರ ಜಲದ ತುಂಬ ಹವಳಗಳು ಹಾಗೂ ಹವಳಮೀನುಗಳು. ಲಕ್ಷದ್ವೀಪಗಳ ಚೆಲುವು ಇರುವುದೇ ನೀಲಿರಸ ಮಡುಗಟ್ಟಿದಂತಹ ಈ ಸರೋವರಗಳಲ್ಲಿ; ಈ ನೀಲಿಗೆ ಅಂಚುಕಟ್ಟಿದಂತೆ ಚೆಲ್ಲಿದ ಹಿಟ್ಟಿನಂತಹ ಕೋರಲ್ ಹುಡಿಯ ಬೀಚು; ಬೀಚಿಗೆ ಹತ್ತಿಕೊಂಡು ಹಸಿರು ಸುರಿವ ತೆಂಗಿನ ಸೆರಗು.

ಹಡಗಿನಿಂದ ದೋಣಿಗಿಳಿವಾಗ ಆಳವಾದ ಕಪ್ಪು ಕಡಲು. ಅದನ್ನು ದಾಟಿ ದ್ವೀಪಗಳಿಗೆ ಹೋಗುವ ದಾರಿಯಲ್ಲಿ, ಆಳವಿಲ್ಲದ ನೀಲ ಸರೋವರ ಬಂದೊಡನೆ, ನೀರು ನಾಟಕೀಯವಾಗಿ ಬದಲಾಗುತ್ತದೆ. ಇದು ನೀರತಳದಲ್ಲಿರುವ ಬಿಳಿಯ ಕೋರಲ್ ಹುಡಿಯೂ ಮೇಲೆ ಸುರಿವ ಸೂರ್ಯನ ಬೆಳಕೂ ನಿರ್ಮಿಸಿದ ಮಾಯಜಾಲ. ನೀಲಿ ಹಸುರಿನ ಈ ದೃಶ್ಯ ಎಷ್ಟು ನೋಡಿದರೂ ಜೀವ ತಣಿಯದು. ಆಳಕ್ಕೆ ತಕ್ಕಂತೆ ನೀರು ವಿಭಿನ್ನ ಬಣ್ಣಗಳಲ್ಲಿ ಕಾಣುತ್ತದೆ. ಸರೋವರವನ್ನು ದಡದ ಮೇಲಿಂದ ಎತ್ತರದಲ್ಲಿ ನಿಂತು ನೋಡಿದರೆ ನೀರು, ಬಗೆಬಗೆಯ ಬಣ್ಣಗಳಲ್ಲಿ ಬರೆದ ವರ್ಣಚಿತ್ರದಂತೆ ಕಾಣುತ್ತದೆ. ಭಾರತದ ಅತ್ಯಂತ ಹಳೆಯ ಲೈಟ್ ಹೌಸ್‌ಗಳಲ್ಲಿ ಒಂದಾದ ಲೈಟ್‌ಹೌಸಿನ ಮೇಲಿಂದ ಮಿನಿಕಾಯ್ ದ್ವೀಪವನ್ನು ನೋಡಿದೆವು. ಅದೊಂದು ಮೋಹಕ ದೃಶ್ಯ. ಕೆಲವು ಕಡೆ ಈ ಸೆರಗು ಕಾಮನಬಿಲ್ಲಿನಂತೆ ಐದಾರು ಕಿಮಿಯುದ್ದಕ್ಕೆ ಬಾಗಿ, ಸಮುದ್ರದ ಕೊರಳಿಗೆ ತೊಡಿಸಿದ ಪಚ್ಚೇ ಸರದಂತಿದೆ. ತಲೆಯೆತ್ತಿ ನೋಡಿದರೆ ನೀಲಾಕಾಶ. ಕಣ್ಣಮುಂದೆ ಆಕಾಶವೇ ನೆಲಕ್ಕಿಳಿದು ಮಲಗಿದಂತೆ ಕಡಲು. ಹಸಿರುಕೊಡೆಗಳ ತೆಂಗುತೋಟ. ಬಲೆಹಾಕಿದರೆ ಊಟಕ್ಕೆ ಬಗೆಬಗೆಯ ಮೀನು. ಶುದ್ಧಗಾಳಿ. ಲಕ್ಷದ್ವೀಪದ ಜನ ಅದೃಷ್ಟವಂತರುು. ಆದರೆ ಆ ನಡುಗಡ್ಡೆಯ ಬಾಳಲ್ಲಿ ಕಷ್ಟಗಳೂ ಇವೆ ಎಂದು ದ್ವೀಪದೊಳಗೆ ಹೋದಾಗ ತಿಳಿಯುತ್ತ ಹೋಯಿತು.

ಲಕ್ಷದ್ವೀಪದ ಕಿನಾರೆಗೂ ಕಡಲಿಗೂ ನಡುವೆ ಕೋರಲ್ ದಿಬ್ಬವಿರುವುದರಿಂದ ಹಡಗು ಮೂರು ಕಿ.ಮೀ ದೂರದಲ್ಲೇ ಕಡಲಿನಲ್ಲಿ ನಿಂತುಬಿಡುತ್ತಿತ್ತು. ಹಡಗಿನಿಂದ ಸಣ್ಣ ದೋಣಿಗಳಿಗೆ ಇಳಿದೇ ಜೆಟ್ಟಿಗಳಿಗೆ ಹೋಗಬೇಕು. ಹಡಗು ಬಂದೊಡನೆ, ರೈಲು ಬಂದಾಗ ಹಮಾಲಿಗಳು ಮುತ್ತಿಕೊಳ್ಳ್ಳುವಂತೆ, ಜನರನ್ನೂ ಸಾಮಾನನ್ನೂ ಇಳಿಸಿಕೊಳ್ಳಲು ದೋಣಿಗಳು ಧಾವಿಸುತ್ತವೆ. ಹಡಗಿನಿಂದ ದೋಣಿಗೆ ಇಳಿದು ಹತ್ತುವುದೇ ಒಂದು ರೋಮಾಂಚಕ ಅನುಭವ. ಹಡಗನ್ನು ಲಂಗರು ಹಾಕಿ ನಿಲ್ಲಿಸಿ, ನೀರಿನ ಮಟ್ಟಕ್ಕೆ ಇರುವ ಬಾಗಿಲನ್ನು ತೆರೆದು ಅಲ್ಲಿಂದ ಜನರನ್ನು ದೋಣಿಗೆ ಇಳಿಸಲಾಗುತ್ತದೆ. ಕೈಹಿಡಿದು ಇಳಿಸುವುದಕ್ಕೆ ಕೆಳಗೆ ದೋಣಿಯಲ್ಲಿ ಇಬ್ಬರು; ಮೇಲೆ ಹಡಗಿನಲ್ಲಿ ಇಬ್ಬರು. ಕೊಂಚ ಹೆಚ್ಚು ಕಡಿಮೆಯಾದರೂ ಹಡಗು-ದೋಣಿಗಳ ನಡುವಣ ನೀರಿಗೆ ಬೀಳುವುದು ಖಂಡಿತ. ಈ ಸರ್ಕಸ್ಸು ನೆಗೆತ ಇಲ್ಲಿನ ಬದುಕಿನ ಸಹಜ ಲಯವಾಗಿದೆ. ಬಾಳಿನ ಪರಿಸ್ಥಿತಿ ಮತ್ತು ನಿಸರ್ಗದ ಒತ್ತಡಗಳು ಎಂತಹ ಧಾರ್ಮಿಕ ಸಾಮಾಜಿಕ ನಂಬಿಕೆಗಳನ್ನೂ ಬದಲಾಯಿಸಬಲ್ಲವು. ಮಹಿಳಾ ಪಯಣಿರ‍್ಯಾರೂ ಪರಪುರುಷರ ಕೈಮುಟ್ಟಿಸಿಕೊಳ್ಳಬೇಕಲ್ಲಾ ಎಂದು ಹಿಂಜರಿಯಲಿಲ್ಲ. ನಖರಾ ಮಾಡಿದರೆ ಪ್ರಾಣ ಹೋಗುತ್ತದೆ. ಇದಕ್ಕೆ ನಿದರ್ಶನ ತೋರಿಸುವಂತೆ, ಹಡಗಿನಿಂದ ದೋಣಿಗೆ ಲಗ್ಗೇಜು ಇಳಿಸುವಾಗ ಒಂದು ಗಂಟು ಕಡಲಿಗೆ ಬಿದ್ದು ಹೋಯಿತು. ನೀರು ಪಾರದರ್ಶಕವಾಗಿದ್ದ ಕಾರಣ, ಗಂಟು ಸಮುದ್ರದ ಆಳದವರೆಗೆ ಹೋಗುವ ತನಕ ಕಾಣುತ್ತಿತ್ತು. ಯಾರೂ ಅದನ್ನು ಉಳಿಸಲು ಯತ್ನಿಸಲಿಲ್ಲ. ಅದು ಆಗದ ಕೆಲಸ ಕೂಡ. ಅದು ಹಲಸಿನಹಣ್ಣಂತೆ. ಕೊಚ್ಚಿಯ ಹಡಗುಕಟ್ಟೆಯಲ್ಲಿ ನೂರಾರು ಹಲಸಿನಕಾಯಿಗಳು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಾಣಂತಿಯರು ತಲೆಗೆ ಬಟ್ಟೆಕಟ್ಟಿಕೊಂಡು ಕುಳಿತಂತೆ, ಕೆಳಗೂ ಮೇಲೂ ಅಡಕೆ ಹಾಳೆಗಳಲ್ಲಿ ಪ್ಯಾಕಾಗಿ ಕುಳಿತಿದ್ದನ್ನು ಗಮನಿಸಿದ್ದೆವು. ತೆಂಗು ಬಿಟ್ಟರೆ ಬೇರೆ ಮರಗಳೇ ಇಲ್ಲದ (ಬಾಳೆ ಪಪ್ಪಾಯಿಗಳಿದ್ದರೂ ಅವು ಲೆಕ್ಕಕ್ಕಿಲ್ಲ) ನಾಡಿಗೆ ಹಲಸು, ಗಣ್ಯಅತಿಥಿಯಂತೆ ಗತ್ತಿನಿಂದ ಬಂದಿತ್ತು. ಪಾಪ, ಈ ಯಾರ ಹೊಟ್ಟೆ ಸೇರಬೇಕಿತ್ತೊ ಅದು, ತನ್ನ ಪ್ರಯಾಣದ ಕೊನೆ ಮುಟ್ಟಲೇ ಇಲ್ಲ.

ಕಡಲು ಬಿರುಸಾದಾಗ ದೋಣಿಯ ಅಂಚು ಕೆಳಬಾಗಿಲ ಸಮೀಪಕ್ಕೆ ಬರಗೊಡದಷ್ಟು ಅಲೆಗಳ ಕುದಿತವಿರುತ್ತದೆ. ಆಗ ಕಡಲ ಮರ್ಜಿಗೆ ಕಾಯಲೇಬೇಕು. ಕವರಟ್ಟಿ ದ್ವೀಪದಲ್ಲಿ ಹಡಗು ಹತ್ತುವಾಗ ಇಂತಹ ಅಲೆಗಳ ಅಬ್ಬರ ಎಲ್ಲರನ್ನು ಆತಂಕದಲ್ಲಿ ಕೆಡವಿತು. ಹಡಗಿನ ಮೈಬಳಿಗೆ ಯಾವ ದೋಣಿಯನ್ನೂ ಅದು ಸುಳಿಯಗೊಡಲಿಲ್ಲ. ದುಡುಕಿ ಹತ್ತಿರ ಹೋದರೆ, ಹಡಗಿನ ಗೋಡೆಗೆ ಬಡಿದು ಮರದ ದೋಣಿ ನುಚ್ಚು ನೂರಾಗುವ ಸಾಧ್ಯತೆಯಿತ್ತು. ಹಡಗಿನ ಮೇಲಿಂದ ನಾವಿಕರ ಕೂಗುಗಳು ಮತ್ತು ದೋಣಿ ಮುಳುಗದಂತೆ ಹರಸಾಹಸ ಮಾಡುತ್ತಿದ್ದ ದೋಣಿಕಾರರ ಆತಂಕ ಕಂಡು, ದೋಣಿಯೊಳಗಿನ ಜೀವಗಳು ಉಸಿರು ಬಿಗಿಹಿಡಿದು ಕೂತುಬಿಟ್ಟವು. ನಿಸರ್ಗದ ರೌದ್ರತೆಯ ಮುಂದೆ ಅಸಹಾಯಕರಾಗುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯ? ನಮ್ಮ ಗುಂಪಿನಲ್ಲಿದ್ದ ಅಜ್ಜಿ ಮಾತ್ರ ಯಾವ ಆತಂಕವನ್ನೂ ಪಡದೆ, ಆತಂಕ ಪಡುತ್ತಿದ್ದವರನ್ನೆಲ್ಲ ನೋಡಿ ನಗುತ್ತ, ನಿರಾಳವಾಗಿ ಕೂತು ಹಡಗಿಗೆ ದಾಟಿಬಂತು. ಸುದೀರ್ಘ ಕಾಲ ಬದುಕಿದ ಜನ, ಸಾವನ್ನೂ ಹಿಮ್ಮೆಟ್ಟಿಸಬಲ್ಲರು: `ಡೆತ್ ಬಿ ನಾಟ್ ಪ್ರೌಡ್’!

ಲಕ್ಷದ್ವೀಪದ ಹವಳದಿಬ್ಬಗಳ ಮೇಲೆ ತೆಂಗು ಮಾತ್ರ ಮನಸ್ಸೋ ಇಚ್ಛೆಯಾಗಿ ಕಳೆಯಂತೆ ಬೆಳೆದಿದೆ. ಅದರ ಸರ್ವಾಧಿಕಾರವನ್ನು ಎಲ್ಲೆಡೆ ನೋಡಬಹುದಿತ್ತು. ಹಡಗಿನಿಂದ ದ್ವೀಪಗಳನ್ನು ನೋಡುವಾಗ ಊರು ಮನೆ ಜನ ಏನೂ ಕಾಣುವುದಿಲ್ಲ. ಕಾಣುವುದು ಬರೀ ತೆಂಗುಹಸಿರಿನ ಕುಪ್ಪೆ ಮತ್ತು ಅದರೊಳಗೆ ನೆಟ್ಟ ರಾಕೆಟ್ಟಿನಂತಹ ಲೈಟ್‌ಹೌಸ್. ದ್ವೀಪದೊಳಗೆ ಕಾಲಿಟ್ಟರೆ ಸೂರ್ಯರಶ್ಮಿ ನೆಲಕ್ಕೆ ತಾಗದ ನೆರಳು. ಆ ನೆರಳಿನೊಳಗೆ ಹೊಕ್ಕರೆ ರಸ್ತೆ ಮನೆ ಜನ ಎಲ್ಲಾ ನಿಧಾನವಾಗಿ ಪ್ರತ್ಯಕ್ಷವಾಗುತ್ತದೆ. ದ್ವೀಪಗಳಲ್ಲಿ ಅಡ್ಡಾಡುವಾಗ ಮೊದಲಿಗೆ ಎರಡು ದೃಶ್ಯಗಳು ಕಣ್ಸೆಳೆಯುತ್ತವೆ. ಮೊದಲನೆಯದು- ತೆಂಗಿನಕಾಯಿಗಳ ಅಧಃಪತನ. ಇಲ್ಲಿ ತೆಂಗಿನಕಾಯಿಗಳು ಕಸಕ್ಕಿಂತ ಕಡೆಯಾಗಿ ಎಲ್ಲಿಬೇಕಲ್ಲಿ ಬಿದ್ದಿದ್ದವು. ಮರದೊಡೆಯರು ಬೇಕಾದಾಗ ಅವನ್ನು ಆರಿಸಿ ಕುಪ್ಪೆಹಾಕಿ ಸುಲಿಸಿ ಕೊಬ್ಬರಿ ಮಾಡುತ್ತಾರಂತೆ. ಯಾರೂ ತಮ್ಮ ತೋಟಕ್ಕೆ ಬೇಲಿ ಕಟ್ಟಿರಲಿಲ್ಲ. ಕಾಗೆಗಳಿಂದ ಕೊಬ್ಬರಿ ಉಳಿಸಲು ಕೊಬ್ಬರಿ ಮನೆಗಳಿಗೆ ಬಲೆಯನ್ನು ಕಟ್ಟಲಾಗಿತ್ತು. ಎಲ್ಲ ಮನೆಗಳೆದುರು ದೀಪಾವಳಿ ದೀಪಗಳಿಟ್ಟಂತೆ ಸಾಲುಸಾಲು ಕೊಬ್ಬರಿ ಬಟ್ಟಲುಗಳು. ಎರಡನೆಯದು- ತೆಂಗಿನ ಮರಗಳಿಗೆ ಕಟ್ಟಿ ಹಾಕಿರುವ ಆಡುಗಳದ್ದು. ಈ ದ್ವೀಪದಲ್ಲಿ ಕಂಡ ಏಕೈಕ ಕಾಲ್ನಡೆ ಇದೇ. ಇವು ನಮ್ಮ ಆಡುಗಳಂತೆ ಎತ್ತರವಿಲ್ಲ. ಜಗ್ಗುವ ಕೆಚ್ಚಲಿನ ಗಿಡ್ಡತಳಿಯವು. ನನಗೆ ವೈಕಂ ಬಶೀರರ `ಪಾತುಮ್ಮಳ ಆಡು’ ಕತೆ ನೆನಪಿಗೆ ಬಂತು. ಅಲ್ಲಿ ಆಡು ಮನೆ ತುಂಬಾ ಸುತ್ತಾಡುತ್ತಾ ಅದು ಇದು ಮುರಿದು ಇಡೀ ಕುಟುಂಬದಲ್ಲಿ ಜಗಳ ಹಚ್ಚುತ್ತದೆ, ಆದರೆ ಇಲ್ಲಿ ಅದನ್ನು ಕಡ್ಡಾಯವಾಗಿ ಕಟ್ಟಿ ಮುಂದೆ ತೆಂಗಿನ ಗರಿ ಕಡಿದುಹಾಕಿದ್ದರು. ಆಡು ಒಂದು ಕಡೆ ಒಂದರಗಳಿಗೆ ನಿಲ್ಲುವಂತಹ ಜಾನು ವಾರಲ್ಲ. ದಿನವೊಂದಕ್ಕೆ ಸಾವಿರ ಜಾತಿಯ ಗಿಡಗಳಿಗೆ ಬಾಯಿಹಾಕಿ ಎಲೆ ತಿನ್ನುವ ಪ್ರಾಣಿ. ಆದರಿಲ್ಲಿ ಅದು ಸಿಗುವ ಏಕೈಕ ಹಸಿರಾದ ತೆಂಗಿನಗರಿಯನ್ನು ನಿರ್ವಾಹವಿಲ್ಲದೆ ಕಡಿಯುತ್ತ, ಕೈದಿಗಳಂತೆ ತೆಂಗಿನಮರಕ್ಕೆ ಕಟ್ಟಿಸಿಕೊಂಡಿತ್ತು. ಗರಿಯ ಹಸುರನ್ನು ಬಿಡಿಬಿಡಿಸಿ ತಿಂದು, ದಿಂಡಿಗಂಟಿದ ಉಳಿದ ತೆಂಗಿನಕಡ್ಡಿಗಳು ಮೀನಿನ ಅಸ್ಥಿಪಂಜರದಂತೆ ಬಿದ್ದದ್ದವು. ಹುಲ್ಲು ಬೆಳೆಯದ ಇಲ್ಲಿ ಹಸು ಎಮ್ಮೆಗಳನ್ನು ಸಾಕುವುದು ಕಷ್ಟ. ಹೀಗಾಗಿ ಹಾಲಿಗೂ ಮಾಂಸಕ್ಕೂ ಮೇಕೆಯೇ ಗತಿ.

ದ್ವೀಪಗಳು ಜನರನ್ನು ಬಂಧಿಸುತ್ತವೆ ಎಂದು ಅನಿಸುತ್ತದೆ. ಇಲ್ಲಿನ ಹೆಂಗಸರಿಗೆ ಕಾಯುವುದು ಒಂದು ಕಾಯಕ. ಕಡಲ ಮೇಲೆ ಅಥವಾ ಕಡಲಾಚೆ ದುಡಿಕೆಗೆ ಹೋಗಿರುವ ಹೋಗಿರುವ ಮಕ್ಕಳಿಗಾಗಿ ಗಂಡ ನಿಗಾಗಿ ಕಾಯಬೇಕು. ನಿಜ, ಇಲ್ಲಿನ ತರುಣರಲ್ಲಿ ಬಹಳಷ್ಟು ಜನ ಕೊಲ್ಲಿ ದೇಶಗಳಿಗೆ ಹೋಗಿದ್ದಾರೆ. ಹೀಗಾಗಿ ಹೆಂಗಸರು ಮುದುಕರು ಮಕ್ಕಳೇ ದ್ವೀಪಗಳಲ್ಲಿರುವುದು. ಈ ಕಾರಣಕ್ಕೆ ಹೆಣ್ಣಿಗೆ ಇಲ್ಲಿ ಸಾಮಾಜಿಕ ಬದುಕು ತೆರೆದಿದೆ. ಆದರೆ ಈ ದ್ವೀಪಗಳಲ್ಲಿ ಎಲ್ಲಿ ಹೋಗಬೇಕು? ಮಾಪ್ಳಾಗಳು ಹಾಡುವ ಪಾಟ್ಟುಗಳಲ್ಲಿ ಹೆಣ್ಣಿನ ಇಂತಹ ಏಕಾಂತದ ಕ್ಷಣಗಳ ವರ್ಣನೆ ಇದೆಯೆಂದು ಕೇಳಿದ್ದೇನೆ. ಪರಿಜಕ್ಕಳಿ ಎಂಬ ನೃತ್ಯದಲ್ಲಿ ಕುತೂಹಲ ಮೂಡಿಸಿದ್ದು ಕತ್ತಿಗುರಾಣಿ ಹಿಡಿದು ಮಾಡುವ ಯುದ್ಧಾನುಕರಣೆ.

ಅರಬ್ಬಿಸಮುದ್ರದ ನಡುವೆ ಅಕ್ಕಿನುಚ್ಚಿನಂತೆ ಇರುವ ಈ ದ್ವೀಪಗಳು ತಮ್ಮ ಚರಿತ್ರೆಯಲ್ಲಿ ಎಷ್ಟೊಂದು ಮಚ್ವೆಗಳನ್ನು ಕಂಡಿವೆಯೋ? ಅವುಗಳಿಂದ ಇಳಿದುಬಂದ ಎಂತೆಂತಹ ಸ್ನೇಹ-ಜಗಳ ಮಾಡಿವೆಯೋ? ಇವೆಲ್ಲಾ ಅವರ ಜನಪದ ಸಾಹಿತ್ಯದಲ್ಲಿ ನೃತ್ಯದಲ್ಲಿ ಹೇಗೆ ಸುಪ್ತವಾಗಿ ಮೂಡಿವೆಯೊ? ಈ ನೃತ್ಯಕಾರರ ಗುಂಪಿನಲ್ಲಿ ಹಾಡುವ ಗಾಯಕ ಕಪ್ಪನೆಯ ಹುಡುಗನಲ್ಲಿದ್ದ ನೀಗ್ರೊ ಲಕ್ಷಣಗಳು, ಈ ದ್ವೀಪಗಳ ಮೇಲೆ ಹಾದುಹೋದ ಚರಿತ್ರೆಯ ಒಂದು ಛಾಯೆಯಂತಿತ್ತು. ಅವನೊಬ್ಬ ಅದ್ಭುತ ಹಾಡುಗಾರ.

ಕೊನೆಯ ದಿನವನ್ನು ನಾವು ಕಲ್ಪನಿಯಲ್ಲಿ ಕಳೆದೆವು. ನಮ್ಮ ಹಡಗು ಬೇರೆ ದ್ವೀಪಗಳಿಗೆ ಜನರನ್ನು ಇಳಿಸಿ ಬರುವವರನ್ನು ಹತ್ತಿಸಿಕೊಂಡು ಬರಲು ಹೋಗಿದ್ದು ಇನ್ನೂ ಬಂದಿರಲಿಲ್ಲ. ನಾನು ಬಾನು ಮಕ್ಕಳನ್ನು ಎಳೆದುಕೊಂಡು ದ್ವೀಪದೊಳಗೆ ತಿರುಗಾಡಿಕೊಂಡು ಹೊರಟೆವು. ಸುಂದರವಾದ ಚೊಕ್ಕಾದ ರಸ್ತೆಗಳು. ಸೈಕಲ್ಲುಗಳಲ್ಲಿ ತಿರುಗಾಡುವ ಹುಡುಗರು. ಒಂದು ಕಡೆ. ಮಕ್ಕಳು ಹೆಡೆಮೊಟ್ಟೆಯನ್ನು ಬ್ಯಾಟು ಮಾಡಿಕೊಂಡು ಕ್ರಿಕೆಟ್ ಆಡುತ್ತಿದ್ದವು. ನಾವು ಹೋದೊಡನೆ ಮನೆಯೊಳಗೆ ಓಡಿಹೋಗಿ ತಾವು ಆರಿಸಿ ಡಬ್ಬದಲ್ಲಿಟ್ಟುಕೊಂಡಿದ್ದ ಕವಡೆ ತಂದುಕೊಟ್ಟವು. ಕಪ್ಪುಬಣ್ಣದ ಮಿರಿಮಿರಿ ಮಿಂಚುವ ಕವಡೆಗಳವು. ಒಂದು ಕಡೆ ಕೊಬ್ಬರಿ ಮಂಡಿಗಳಿದ್ದವು. ಅದರ ಸುತ್ತ ಕೊಬ್ಬರಿ ಎಣ್ಣೆಯ ಗಮಲು ತುಂಬಿಕೊಂಡಿತ್ತು. ಇಲ್ಲಿನ ಮುಖ್ಯ ವ್ಯಾಪಾರವೆಂದರೆ ಕೊಬ್ಬರಿ ಮತ್ತು ತೆಂಗಿನ ನಾರಿನದು. ಹಡಗು ಕಟ್ಟಿಸಿ ಸಮುದ್ರ ವ್ಯಾಪಾರ ಮಾಡುತ್ತಿದ್ದ ಟಿಪ್ಪುವಿಗೆ ಇಲ್ಲಿನ ತೆಂಗಿನನಾರು ಬಹಳ ಮುಖ್ಯವಾಗಿತ್ತು. ಸಿಕ್ಕ ಜನರೊಡನೆ ಮಾತಾಡುತ್ತಾ ಹೋದೆವು. ಹೆಚ್ಚಿನವರಿಗೆ ಮಾಪ್ಳಾ ಬಿಟ್ಟು ಬೇರೆ ಭಾಷೆ ಬಾರದು. ಕೊಲ್ಲಿ ದೇಶಗಳಿಗೆ ಹೋಗಿಬರುವ ಕಾರಣದಿಂದಲೊ ಟೀವಿಗಳಿಂದಲೊ ಹಿಂದಿ ಕೆಲವರಿಗೆ ಬರುತ್ತದೆ.

ದ್ವೀಪಜೀವನ ನೋಡುತ್ತಾ ಹೋದರೆ ಏಕತಾನತೆ ಬರುತ್ತದೆ. ಒಂದು ದ್ವೀಪ ಮತ್ತೊಂದರ ಹಾಗೇ ಕಾಣುತ್ತದೆ. ಅದೇ ತೆಂಗು, ಅದೇ ಕಡಲು, ಅದೇ ಬೆಸ್ತರು, ಅವವೇ ಲಗೂನುಗಳು, ಅವೇ ಮರಕ್ಕೆ ಕಟ್ಟಿದ ಮೇಕೆಗಳು. ಸಂಜೆಯಾಗುತ್ತಿತ್ತು. ಸೂರ್ಯನ ಹೊಂಗಿರಣ ತೆಂಗುಕಾಂಡಗಳ ಮೂಲಕ ನುಸುಳಿ ದ್ವೀಪಗಳ ಒಳಗೆ ನೆಳಲಿನ ನಕ್ಷೆ ಬಿಡಿಸಿದ್ದವು. ನಾವು ಹೋಗಿದ್ದು ಬೇಸಗೆಯಲ್ಲಿ. ಸುಡುಬಿಸಿಲಿಗೆ ಬಳಲಿದ್ದ ನಾವು ಸಂಜೆಗೆ ತೀಡುತ್ತಿದ್ದ ತಂಗಾಳಿ ಮೂಸುತ್ತಾ ನಡೆಯುತ್ತಾ ಹೋದೆವು. ಅಷ್ಟು ಹೊತ್ತಿಗೆ ಯಾರೋ ಒಬ್ಬ ಸೈಕಲ್ಲಿನ ಮೇಲೆ ಬರುತ್ತಿದ್ದವನು, ದ್ವೀಪಕ್ಕೆ ಹೊಸಬರಂತಿದ್ದ ನಮ್ಮನ್ನು ನೋಡಿ, `ಟೂರಿಸ್ಟಾ?’ ಎಂದು ಕೇಳಿದನು. `ಎಸ್’ ಎಂದೆವು. `ಟಿಪ್ಪುಸುಲ್ತಾನ್ ಹೋಯಿತು’ ಎಂಬಂತೆ ಸನ್ನೆ ಮಾಡಿದನು. ಅವನು ನೆಂಟರನ್ನು ದೋಣಿಯಲ್ಲಿ ಹತ್ತಿಸಿ ಮರಳಿಬರುತ್ತಿದ್ದ; ಎದೆ ಧಸಕ್ಕೆಂದಿತು. ನಮ್ಮ ಬಣ್ಣಗೆಟ್ಟ ಮುಖಗಳನ್ನು ಕಂಡು `ಸಿಕ್ಕರೂ ಸಿಗಬಹುದು ಓಡಿ’ ಎಂದ. `ಜೆಟ್ಟಿ ಎಷ್ಟು ದೂರ?’ ಎನ್ನಲು `ಮೂರು ಕಿಮಿ!’ `ಯಾವುದಾದರೂ ಆಟೋಗೀಟೋ…?’ `ನೋನೋ’.

ದ್ವೀಪಗಳಲ್ಲಿ ತಿರುಗುವಾಗ ಎಲ್ಲಿ ಹೋಗುತ್ತೇವೆ ಎನ್ನುವುದು ಗೊತ್ತಾಗುವುದಿಲ್ಲ. ಅವು ದುಂಡಗಿರುತ್ತವೆ. ಒಳಗಿನ ರಸ್ತೆಗಳು ತಿರುಗು ಮುರುವಾಗಿ, ನುಲಿದುಕೊಂಡ ತೆಂಗಿನಮರಗಳಂತಿ ರುತ್ತವೆ. ಎತ್ತಹೋದರೂ ಒಂದೇ ದೃಶ್ಯವಾದ್ದರಿಂದ ಬಂದ ದೂರ ಗೊತ್ತಾಗುವುದಿಲ್ಲ. ನಾವು ಜೆಟ್ಟಿ ಹತ್ತಿರವೇ ಇರಬಹುದೆಂದುಕೊಂಡಿದ್ದೆವು. ಬಹಳ ದೂರ ಅದೂ ವಿರುದ್ಧ ದಿಕ್ಕಿನಲ್ಲಿ ಬಂದಿದ್ದೇವೆಂದು ನಂಬಲಾಗಲಿಲ್ಲ. ತಪ್ಪಿನ ಅರಿವಾಗಿ ಓಡತೊಡಗಿದೆವು. ಎಷ್ಟು ಓಡಿದರೂ ಅಲ್ಲೆ ಇರುವಂತೆ ಅನಿಸಿತು. ಎದೆ ಢವಢವ ಎನ್ನುತ್ತಿತ್ತು. ಒಳಗೊಳಗೆ ಹಡಗು ತಪ್ಪಿದ್ದು ಒಳ್ಳೇದೇ ಆಯಿತು ಎಂಬ ವಿಚಿತ್ರವಾದ ಸಂತೋ಼ಷವೂ ಆಗುತ್ತಿತ್ತು. ನೋಡಬೇಕಾದ ದ್ವೀಪಗಳು ಇನ್ನೂ ಅನೇಕ ಇದ್ದವು. ಕಡಮತ್ ಅಪೂರ್ವ ಹವಳಗಳಿರುವ ದ್ವೀಪ. ಅಂದ್ರೋತ್ ಮಾಟಮಂತ್ರಗಳಿಗೆ ಖ್ಯಾತವಂತೆ. ಹಕ್ಕಿಗಳೇ ನೆಲೆಸಿರುವ ಪಕ್ಕಿಪಿಟ್ಟು ಎಂಬ ನಡುಗಡ್ಡೆಯಿದೆ. ಅಲ್ಲೆಲ್ಲಾ ಬಾಳಿನ ಎಂತೆಂತಹ ಹೋರಾಟ ಇದೆಯೊ? ಇಡೀ ಪ್ರವಾಸವೇ ನನಗೆ ಅರಗುಕ್ಕಾಗಿತ್ತು. ಹಡಗು ತಪ್ಪಲಿ ಎಂದು ಮನಸ್ಸು ಮಿಡಿಯುತ್ತಿತ್ತು. ಆದರೆ ನಮ್ಮ ಲಗೇಜೆಲ್ಲ ಹಡಗಿನಲ್ಲಿತ್ತು.

ಜೆಟ್ಟಿಗೆ ಬಂದರೆ ಎಲ್ಲಾ ಖಾಲಿ. ನಮ್ಮ ಜತೆಗಾರ ಪ್ರವಾಸಿಗರೆಲ್ಲಾ ಹೋಗಿಯಾಗಿತ್ತು. ದೋಣಿಗಳೆಲ್ಲಾ ಹೋಗಿದ್ದವು. ಜೆಟ್ಟಿಯ ಸಮೀಪದಲ್ಲಿದ್ದ ಠಾಣೆಯ ಪೋಲಿಸರು ವಾಕಿಟಾಕಿಯಲ್ಲಿ ಮಾತಾಡುತ್ತಿದ್ದರು. ನಾಲ್ಕು ಜನ ತಪ್ಪಿಸಿಕೊಂಡ ಪ್ರವಾಸಿಗರು ದಡದಲ್ಲಿದ್ದಾರೆ ಎಂದು ಅವರು ಹಡಗಿನವರಿಗೆ ಹೇಳಿದರು. ಎಲ್ಲಿಂದಲೋ ಬಂದ ದೋಣಿಯೊಂದು ನಮ್ಮನ್ನು ಹತ್ತಿಸಿಕೊಂಡು ವೇಗವಾಗಿ ಹಡಗಿಗೆ ಕರೆದೊಯ್ಯಿತು. ದೂರದಲ್ಲಿ ಕಡಲೊಳಗೆ ಸಣ್ಣ ಬಿಳಿಯ ಚುಕ್ಕಿಯಂತೆ ಟಿಪ್ಪುಸುಲ್ತಾನ ಸಹನೆಯಿಂದ ಕಾಯುತ್ತಿತ್ತು.

ಜ್ವಾಲಾಮುಖಿಯಿಂದ ಹುಟ್ಟಿದ ಈ ದ್ವೀಪಗಳ ಚರಿತ್ರೆ ಕಾಣೆಯಾಗಿಲ್ಲ. ಅವುಗಳ ಕಾಲಡಿಯೇ ಸುಪ್ತವಾಗಿ ಸಾವಿನಬೀಜ ಇಟ್ಟುಕೊಂಡು ಕೂತಿವೆ. ಸುಮಾರು ನೂರು ವರ್ಷಗಳಲ್ಲಿ ಈ ದ್ವೀಪಗಳೆಲ್ಲಾ ಮುಳುಗುತ್ತವಂತೆ- ಕುಸಿಯುತ್ತಿರುವ ಕೆಳಗಿನ ಬಂಡೆಗಳಿಂದ ಹಾಗೂ ಏರುತ್ತಿರುವ ಸಮುದ್ರಮಟ್ಟದಿಂದ. ಕೆಲವು ವರ್ಷಗಳ ನಂತರ ಇಲ್ಲಿ ಕೇವಲ ನೀರು ತಾಂಡವವಾಡುತ್ತದಂತೆ . ಆದರೆ ಬರಲಿರುವ ಕರಾಳ ಭವಿಷ್ಯವನ್ನು ನೆನೆದು ಯಾರೂ ಅಳುತ್ತ ಕೂತಿಲ್ಲ. ಮೀನು ಹಿಡಿಯುತ್ತ, ತೆಂಗಿನಕಾಯಿ ಆರಿಸುತ್ತಾ, ಹೊಸ ಮನೆ ಕಟ್ಟುತ್ತ ಬದುಕುತ್ತಿದ್ದಾರೆ. ಇರುವಷ್ಟು ದಿನ ಚೆನ್ನಾಗಿ ಬದುಕಬೇಕು ಎಂಬ ಆಸೆಯೆ ಲಕ್ಷದ್ವೀಪಗಳನ್ನು ಜೀವಂತಿಕೆಯಲ್ಲಿ ಇಟ್ಟಂತಿದೆ. ಈ ಚೈತನ್ಯಶೀಲತೆಯೇ ಹಲವು `ಇಲ್ಲ’ಗಳ ನಾಡನ್ನು ಹಲವು ಇದೆಗಳ ನಾಡಾಗಿಸಿದೆ! ಹಡಗು ಪಯಣ ಆರಂಭಿಸಿತು. ಆಗ ಕತ್ತಲಾವರಿಸುತ್ತಿತ್ತು. ಕಲ್ಪನಿಯ ದ್ವೀಪಗಳು ದೂರವಾಗುತ್ತ, ಮುಸುಕಾಗುತ್ತ ಮರೆಯಾದವು. ಲೈಟ್ ಹೌಸಿನ ಗರಗರ ತಿರುಗುವ ಬೆಳಕು ಮಾತ್ರ, ದೂರದವರೆಗೆ ಗಳಿಗೊಮ್ಮೆ ಫಕ್ಕನೆ ಕಾಣಿಸುತ್ತ ಕಣ್ಣು ಮಿಟುಕಿಸುತ್ತಿತ್ತು.

ರಹಮತ್ ತರೀಕೆರೆ (ಕದಳಿಹೊಕ್ಕು ಬಂದೆ ಕೃತಿಯಿಂದ )