ಉಚಿತ ರೇಶನ್ ವಿತರಣಾ ಕೇಂದ್ರದಲ್ಲಿ ಮೋದಿ ಹಾಗೂ ಕಮಲದ ಫೋಟೊ‌ ಹಾಕಬೇಕು: ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ಸೂಚನೆ…!

0
930

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ರೇಶನ್ ವಿತರಿಸುವ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಳು ಹಾಗೂ ಕಮಲದ ಫೋಟೋ ಅಂಟಿಸಿದ ಬ್ಯಾನರ್ ಗಳನ್ನು ಪ್ರದರ್ಶಿಸಲು ಬಿಜೆಪಿಯಿಂದ ಸೂಚನೆ ನೀಡಲಾಗಿದೆ.

ಪ್ರಧಾನಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಉಚಿತ ಪಡಿತರ ವಿತರಣೆ ಮಾಡುತ್ತಿರುವ ಅಂಗಡಿಗಳಲ್ಲಿ ಬ್ಯಾನರ್ ಇರಿಸಬೇಕು. ಜೊತೆಗೆ ರೇಶನ್ ಬ್ಯಾಗ್‍ಗಳಲ್ಲಿ ಬಿಜೆಪಿಯ ಚಿಹ್ನೆಯಾದ ತಾವರೆ ಮುದ್ರಿಸಬೇಕೆಂದು ಪಾರ್ಟಿ ಸೂಚನೆ ನೀಡಿದೆ.

ಕೊರೊನ ಎರಡನೇ ತರಂಗದಲ್ಲಿ ಬಡವರು ಕಷ್ಟ ಅನುಭವಿಸುತ್ತಿರುವ ಪರಿಸ್ಥಿತಿಯಲ್ಲಿ ಪ್ರಧಾನಿಯ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗಿತ್ತು. ರಾಷ್ಟ್ರೀಯ ಆಹಾರ ಸುರಕ್ಷತಾ ಕಾನೂನಿನ ವ್ಯಾಪ್ತಿಯಲ್ಲಿ ಬರುವ 80 ಕೋಟಿಗೂ ಹೆಚ್ಚಿನ ಫಲಾನುಭವಿಗಳಿಗೆ ಐದು ಕಿಲೋ ಆಹಾರ ಧಾನ್ಯ ನೀಡಲಾಗುತ್ತಿದೆ. ನವೆಂಬರ್ ರವರೆಗೆ ಯೋಜನೆ ಜಾರಿಯಲ್ಲಿರುತ್ತದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಕೇಂದ್ರ ಸರಕಾರದ ಹೆಸರಿನಲ್ಲಿ ಬ್ಯಾನರ್ ಗಳನ್ನು ಪ್ರದರ್ಶಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೂಚನೆ ನೀಡಿದ್ದು, ಕೇಂದ್ರ ಯೋಜನೆಯ ಹೆಸರನ್ನು ಆದ್ಯತೆ ನೀಡಿ ಬ್ಯಾನರಿನಲ್ಲಿ ಪ್ರದರ್ಶಿಸಬೇಕೆಂದು ಅವರು ಹೇಳಿದ್ದಾರೆ.

ರೇಶನ್ ಅಂಗಡಿಗಳಲ್ಲಿ ಸಿಗುವ ಬ್ಯಾಗಿನಲ್ಲಿ ತಾವರೆ ಚಿಹ್ನೆ ಇದೆಯೇ ಎಂದು ಖಚಿತಪಡಿಸಲು ಸಂಸದರು, ಶಾಸಕರಿಗೆ ಮತ್ತು ಇತರ ಬಿಜೆಪಿ ನಾಯಕರಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಆಳ್ವಿಕೆಯ ಮತ್ತು ಅಲ್ಲದ ರಾಜ್ಯಗಳಲ್ಲಿ ವಿತರಿಸುವ ಅಹಾರ ವಸ್ತು ಚೀಲದಲ್ಲಿ ಬಿಜೆಪಿ ಚಿಹ್ನೆ ಅಂಟಿಸಲು ಕರೆ ನೀಡಿಲಾಗಿದೆ.

ಈಗ ಕೊರೊನ ವ್ಯಾಕ್ಸಿನ್ ಸರ್ಟಿಫಿಕೆಟ್‍ನಲ್ಲಿ ಪ್ರಧಾನಿ ಫೋಟೊ ಇದೆ. ಹಲವಾರು ಪ್ರತಿಪಕ್ಷ ನಾಯಕರು ಇದನ್ನು ಟೀಕಿಸಿದ್ದಾರೆ. ಛತ್ತೀಸ್‍ಗಡ, ಪಶ್ಚಿಮ ಬಂಗಾಳ ದಲ್ಲಿ ಪ್ರಧಾನಿ ಫೋಟೊದ ಬದಲಾಗಿ ಮುಖ್ಯಮಂತ್ರಿಗಳ ಫೋಟೊ ಅಳವಡಿಸಲಾಗಿದೆ.