ಸನ್ಮಾರ್ಗ ವಾರ್ತೆ
ಮುಂಬೈ: ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಮಾವೊವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಎನ್ಐಎಯಿಂದ ಬಂಧನಕ್ಕೊಳಗಾಗಿ ಜೈಲುಪಾಲಾಗಿದ್ದ ಮಾನವ ಹಕ್ಕುಗಳ ಹೋರಾಟಗಾರ , ಕ್ರೈಸ್ತ ಪಾದ್ರಿ, ಫಾ. ಸ್ಟಾನ್ ಸ್ವಾಮಿಯವರ ಕೊನೆಯುಸಿರೆಳೆದಿದ್ದಾರೆ ಎಂದು NDTV ಸುದ್ದಿಸಂಸ್ಥೆ ವರದಿ ಮಾಡಿದೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾನ್ಹ ನಿಧನರಾದರೆಂದು ತಿಳಿದು ಬಂದಿದೆ. ಮುಂಬೈಯ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ತನಗೆ ಜಾಮೀನು ಕೊಡುವುದಿಲ್ಲದಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿಲ್ಲ. ಜೈಲಿನಲ್ಲಿಯೇ ಸಾಯುವೆ ಎಂಧು ಜೈಲಿನಲ್ಲಿ ಅವರು ವೀಡಿಯೊ ಕಾನ್ಫೆರೆನ್ಸ್ ಮೂಲಕ ಹೈಕೋರ್ಟು ಜಡ್ಜ್ ಗೆ ತಿಳಿಸಿದ್ದರು. ಹೈಕೋರ್ಟ್ ಆದೇಶದ ನಂತರ ಮೇ 30ಕ್ಕೆ ಚಿಕಿತ್ಸೆಗಾಗಿ ಸ್ಟಾನ್ ಸ್ವಾಮಿಯವರನ್ನು ಅವರದೇ ಖರ್ಚಿನಲ್ಲಿ ತಲೋಜ ಜೈಲಿನಿಂದ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕರೆತರಲಾಗಿದೆ. ವಕೀಲರ ಮಧ್ಯಪ್ರವೇಶದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೋರ್ಟು ಒಪ್ಪಿಕೊಂಡಿತು. ಈ ನಡುವೆ ಅವರಿಗೆ ಕಳೆದ ತಿಂಗಳು ಕೊರೊನ ಬಾಧಿಸಿತ್ತು. ಕಳೆದ ವರ್ಷ ಅಕ್ಟೋಬರ್ 8ಕ್ಕೆ ಅವರನ್ನು ಎನ್ಐಎ ಬಂಧಿಸಿತ್ತು.












