ಸನ್ಮಾರ್ಗ ವಾರ್ತೆ
ಹೈದರಾಬಾದ್: ಜನರ ಗುಂಪು ಹತ್ಯೆಗೆ ನೇತೃತ್ವ ನೀಡುವ ಹಿಂದುತ್ವವಾದಿಗಳೊಂದಿಗೆ ಸಂಬಂಧ ಇಲ್ಲ ಎಂದು ತೋರಿಸುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರ ಪ್ರಯತ್ನವನ್ನು ಎಐಎಂಐಎಂ ಮುಖ್ಯಸ್ಥ ಸಂಸದ ಅಸದುದ್ದೀನ್ ಉವೈಸಿ ಲೇವಡಿ ಮಾಡಿದ್ದಾರೆ. ದನ ಮತ್ತು ಎಮ್ಮೆಯನ್ನು ಗುರುತಿಸಲಾಗದ ಕ್ರಿಮಿನಲ್ಗಳಿಗೆ ಒಂದು ವಿಶೇಷ ಧರ್ಮದವರ ಹೆಸರು ನೋಡಿ ಗುರುತಿಸಿಕೊಳ್ಳಲು ಚೆನ್ನಾಗಿ ತಿಳಿದಿದೆ ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ. ಈ ಕ್ರಿಮಿನಲ್ಗಳನ್ನು ಪ್ರೋತ್ಸಾಹಿಸುತ್ತಿರುವುದು ಹಿಂದುತ್ವ ಸರಕಾರ ಎಂದು ಅವರು ಹೇಳಿದರು.
ದನ, ಎಮ್ಮೆಯನ್ನು ಗುರುತಿಸಲಾಗದಿದ್ದರೂ ಜುನೈದ್, ಅಖ್ಲಾಕ್, ಪೆಹ್ಲೂ, ರಕ್ಬರ್ ಅಲಿಮುದ್ದೀನ್ ಮುಂತಾದ ಹೆಸರುಗಳನ್ನು ಗುರುತಿಸಿ ಕೊಲ್ಲಲು ಅವರಿಗೆ ಚೆನ್ನಾಗಿ ಗುರುತಿಸಲು ಗೊತ್ತಿದೆ ಎಂದು ಗೋರಕ್ಷಕ್ ಗೂಂಡಾಗಳ ಹಲವಾರು ಕೊಲೆ ಕೃತ್ಯಗಳನ್ನು ಉಲ್ಲೇಖಿಸಿ ಉವೈಸಿ ಹೇಳಿದರು.
ಅಲೀಮುದ್ದೀನ್ ಕೊಲೆಗಡುಕರಿಗೆ ಕೇಂದ್ರ ಸಚಿವರು ತನ್ನ ಕೈಗಳಿಂದ ಪುಷ್ಪಾರ್ಚನೆ ನಡೆಸುತ್ತಾರೆ. ಅಖ್ಲಾಕ್ ಕೊಲೆಗಡುಕನ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಗುತ್ತದೆ. ಆಸಿಫ್ನ ಕೊಲೆ ಗಡುಕನಿಗೆ ಒಂದು ಪಂಚಾಯತ್ ಬೆಂಬಲ ನೀಡುತ್ತಿದೆ ಎಂದು ಉವೈಸಿ ಬೊಟ್ಟು ಮಾಡಿದರು. ಹೇಡಿತನ, ಅಕ್ರಮ, ಕೊಲೆ ಇವು ಗೋಡ್ಸೆಯ ಹಿಂದುತ್ವ ಚಿಂತನೆ ಅವಿಭಾಜ್ಯ ಘಟಕವಾಗಿದೆ . ಮುಸ್ಲಿಮರನ್ನು ಕೊಲೆ ಮಾಡುವುದು ಇದೇ ಚಿಂತನೆಯ ಫಲವೆಂದು ಉವೈಸಿ ಹೇಳಿದರು.
ಕಳೆದ ದಿವಸ ಆರೆಸ್ಸೆಸ್ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಜನರ ಗುಂಪು ದಾಳಿ ನಡೆಸುವವರಿಗೂ ಹಿಂದುತ್ವ ವಾದಿಗಳಿಗೂ ಪರಸ್ಪರ ಸಂಬಂಧ ಇಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದರು.
ಭಾರತ ಒಂದು ಪ್ರಜಾಪ್ರಭುತ್ವ ದೇಶವಾಗಿದೆ. ಅಲ್ಲಿ ಹಿಂದೂಗಳಿಗೋ ಅಥವಾ ಮುಸ್ಲಿಮರಿಗೋ ಪ್ರಾಬಲ್ಯ ಗಳಿಸಲಾಗದು. ಭಾರತೀಯನೇ ಪ್ರಮುಖನಾಗಿದ್ದಾನೆ. ಆರಾಧನೆಯ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸಲಾಗದು. ಭಾರತದ ಎಲ್ಲ ಜನರ ಡಿಎನ್ಎ ಒಂದೇ ಆಗಿದೆ. ಅವರ ಧರ್ಮ ಯಾವುದೇ ಇದ್ದರೂ ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಬಲೆಯಲ್ಲಿ ಯಾರೂ ಬೀಳಬಾರದೆಂದು ಮೋಹನ್ ಭಾಗವತ್ ನಿನ್ನೆ ಭಾಷಣ ಮಾಡಿದ್ದರು.












