ಸನ್ಮಾರ್ಗ ವಾರ್ತೆ
ಲಕ್ನೊ: ಎರಡಕ್ಕಿಂತ ಹೆಚ್ಚು ಮಕ್ಕಳಿರುವವರ ವಿರುದ್ಧ ಕಾನೂನು ರಚಿಸುವಲ್ಲಿ ತೊಡಗಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ 152 ಬಿಜೆಪಿ ಶಾಸಕರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಇವರಲ್ಲಿ ಒಬ್ಬರಿಗೆ ಎಂಟು ಮಕ್ಕಳು ಇನ್ನೊಬ್ಬರಿಗೆ ಏಳು ಮಕ್ಕಳು ಇದ್ದಾರೆ. ಎಂಟು ಮಂದಿಗೆ ತಲಾ ಆರು ಮಕ್ಕಳಿದ್ದಾರೆ. ಐದು ಮಕ್ಕಳಿರುವ 15 ಮಂದಿ ಇದ್ದಾರೆ. 44 ಶಾಸಕರಿಗೆ ತಲಾ ನಾಲ್ಕು ಮಕ್ಕಳಿದ್ದಾರೆ. 83 ಮಂದಿ ಮೂರು ಮಕ್ಕಳನ್ನು ಹೊಂದಿದ್ದಾರೆ. ಈ ಮಧ್ಯೆ ಬಿಜೆಪಿ ಸರಕಾರ ಮಕ್ಕಳ ಸಂಖ್ಯೆ ನೋಡಿ ಕಠಿಣ ಕ್ರಮ ಕೈಗೊಳ್ಳುವ ಜನಸಂಖ್ಯಾತ್ರಣ ಪಾಸು ಮಾಡುತ್ತಿರುವುದು ವಿಶೇಷ.
ಉಳಿದಂತೆ ಬಿಜೆಪಿ ಶಾಸಕರಲ್ಲಿ 103 ಮಂದಿಗೆ ಎರಡು ಮಕ್ಕಳಿದ್ದು ಒಂದೇ ಮಕ್ಕಳನ್ನು ಹೊಂದಿದವರು 34 ಶಾಸಕರಿದ್ದಾರೆ. ಮಕ್ಕಳಿಲ್ಲದ/ಮಕ್ಕಳ ಲೆಕ್ಕ ತೋರಿಸದ ಹದಿನೈದು ಮಂದಿ ಇದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಶಾಸಕ ಸುರೇಶ್ ಖನ್ನಾ ಮದುವೆಯಾಗಿಲ್ಲ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಸರಕಾರಿ ಸೌಲಭ್ಯ, ಸರಕಾರಿ ಕೆಲಸ ನಿರಾಕರಿಸುವ ಮಸೂದೆಯನ್ನು ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಂಡಿಸಲಿದೆ. ಇದು ಬಿಜೆಪಿಯನ್ನೇ ಬೆಚ್ಚಿ ಬೀಳಿಸುವ ಮಸೂದೆಯಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಎರಡು ಮಕ್ಕಳ ಮಸೂದೆ ಮಂಡಿಸಲು ಪಾರ್ಲಿಮೆಂಟಿನಲ್ಲಿ ಅನುಮತಿ ಕೇಳಿದ್ದು ನಾಲ್ಕು ಮಕ್ಕಳ ತಂದೆಯಾಗಿದ್ದ ಬಿಜೆಪಿ ಸಂಸದ ಎಂಬುದರ ಜೊತೆಗೆ ಉತ್ತರಪ್ರದೇಶದ ಲೆಕ್ಕ ಹೊರಗೆ ಬಂದಿದೆ. ಮೂರು ಹೆಣ್ಣು ಮತ್ತು ಒಂದು ಗಂಡು ಸಹಿತ ನಾಲ್ಕು ಮಕ್ಕಳಿರುವ ಗೊರಕ್ ಪುರದ ಸಂಸದ ರವಿಕಿಶನ್ ಜನಸಂಖ್ಯೆ ನಿಯಂತ್ರಣಕ್ಕೆ ಖಾಸಗಿ ಮಸೂದೆ ಮಂಡಿಸಲು ಪಾರ್ಲಿಮೆಂಟಿನಲ್ಲಿ ಅನುಮತಿ ಕೋರಿದ್ದರು. ಶನಿವಾರ ಉತ್ತರಪ್ರದೇಶದ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಹೊರ ತರಲಾಗಿತ್ತು. ವಿವಾದವಾದ ಹಲವು ನಿಬಂಧನೆ ನಿಯಮಗಳು ಇದರಲ್ಲಿವೆ.












