ಜಾರ್ಖಂಡ್ ವಿಧಾನಸಭಾ ಕಟ್ಟಡದಲ್ಲಿ ‘ನಮಾಝ್ ಹಾಲ್’ ಗೆ ಅನುಮತಿ ನಿರ್ಧಾರ: ಗದ್ದಲ ಎಬ್ಬಿಸಿ ಬಿಜೆಪಿಯಿಂದ ಕಲಾಪಕ್ಕೆ ಅಡ್ಡಿ

0
632

ಸನ್ಮಾರ್ಗ ವಾರ್ತೆ

ಜಾರ್ಖಂಡ್: ಜಾರ್ಖಂಡ್ ವಿಧಾನಸಭೆಯ ಕಟ್ಟಡದಲ್ಲಿ ‘ನಮಾಝ್ ಹಾಲ್’ ಗೆ ಅನುಮತಿ ನೀಡುವ ಸರಕಾರದ ನಿರ್ಧಾರವನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮತ್ತು ಸ್ಪೀಕರ್ ರವೀಂದ್ರ ನಾಥ್ ಮಹತೋ ಅವರ ಪ್ರತಿಕೃತಿಗಳನ್ನು ದಹಿಸಿದರು.

ಜಾರ್ಖಂಡ್ ಅಸೆಂಬ್ಲಿಯಲ್ಲಿ ನಮಾಝ್ ಮಾಡಲು ಕೊಠಡಿಯನ್ನು ಹಂಚಿಕೆ ಮಾಡುವ ಬಗ್ಗೆ ವಿರೋಧ ಪಕ್ಷ ಬಿಜೆಪಿಯಿಂದ ಗದ್ದಲ ಉಂಟಾಗಿದ್ದು, ಸೋಮವಾರದ ಕಲಾಪಕ್ಕೆ ಅಡ್ಡಿ ಉಂಟಾಯಿತು. ಅಧಿವೇಶನ ಆರಂಭವಾಗುವ ಮುನ್ನ, ಬಿಜೆಪಿ ಶಾಸಕರು ವಿಧಾನಸೌಧದ ಪ್ರವೇಶದ್ವಾರದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಹನುಮಾನ್ ಚಾಲೀಸಾ ಮತ್ತು ‘ಹರೇ ರಾಮ್ ‘ ಘೋಷಣೆಗಳನ್ನು ಕೂಗಿದರು. ದಿನದ ಕಲಾಪ ಆರಂಭವಾದ ತಕ್ಷಣ, ಬಿಜೆಪಿ ಸದಸ್ಯರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ವಿಧಾನ ಸಭೆಯ ಬಾವಿಗೆ ಸೇರಿಕೊಂಡರು. ನಮಾಝ್ ಕೊಠಡಿಯ ಹಂಚಿಕೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ನಮಾಝ್ ನಿರ್ವಹಿಸಲು ವಿಧಾನ ಸಭೆಯ ರೂಮ್ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಹಂಚಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಆವರಣದಲ್ಲಿ ಹನುಮಾನ್ ದೇವಸ್ಥಾನ ಮತ್ತು ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಿಜೆಪಿ ಒತ್ತಾಯಿಸಿದೆ.

“ರಾಜ್ಯ ಸರ್ಕಾರವು ಈ ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವವಲ್ಲದ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು, ಇಲ್ಲದಿದ್ದರೆ ಜನರು ಬೀದಿಗಿಳಿಯುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಎಚ್ಚರಿಸಿದ್ದಾರೆ.

ಸ್ಪೀಕರ್ ಆದೇಶದ ಮೇರೆಗೆ ಕಳೆದ ಸೆಪ್ಟೆಂಬರ್ 2 ರಂದು ಜಾರ್ಖಂಡ್ ವಿಧಾನಸಭೆಯ ಉಪ ಕಾರ್ಯದರ್ಶಿ ನವೀನ್ ಕುಮಾರ್ ಸಹಿ ಮಾಡಿದ ಅಧಿಸೂಚನೆಯೊಂದರಲ್ಲಿ “ಹೊಸ ವಿಧಾನಸಭಾ ಕಟ್ಟಡದಲ್ಲಿ ನಮಾಝ್ ನಿರ್ವಹಿಸಲು ಕೊಠಡಿ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಹಂಚಿಕೆ ಮಾಡುವಂತೆ ತಿಳಿಸಲಾಗಿತ್ತು. ಅಧಿಸೂಚನೆ ಬಂದ ಬಳಿಕ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಅದನ್ನು ಸ್ವಾಗತಿಸಿತ್ತು.