ಅಪರಾಧಿ ಎಂದು ಸಾಬೀತುಪಡಿಸಿದರೆ ಬಹಿರಂಗವಾಗಿ ಗಲ್ಲಿಗೇರುವೆ: ಇಡಿಗೆ ಸವಾಲು ಹಾಕಿದ ಅಭಿಶೇಕ್ ಬ್ಯಾನರ್ಜಿ

0
568

ಸನ್ಮಾರ್ಗ ವಾರ್ತೆ

ಕೊಲ್ಕತ್ತ: ಕಪ್ಪುಹಣ, ಕಲ್ಲಿದ್ದಲು ಹಗರಣ ಪ್ರಕರಣಗಳಲ್ಲಿ ಎಂಪೋರ್ಸ್‍ಮೆಂಟ್ ಡೈರಕ್ಟರೇಟಿಗೆ ತೃಣಮೂಲ ಕಾಂಗ್ರೆಸ್ ಸಂಸದ, ಮಮತಾ ಬ್ಯಾನರ್ಜಿ ಅಳಿಯ ಅಭಿಶೇಕ್ ಬ್ಯಾನರ್ಜಿ ಸವಾಲು ಎಸೆದಿದ್ದು, ಕಾನೂನು ಬಾಹಿರವಾಗಿ ಏನಾದರೂ ಮಾಡಿರುವುದನ್ನು ಕೇಂದ್ರ ತನಿಖಾ ಸಂಸ್ಥೆಗಳು ಸಾಬೀತು ಪಡಿಸಿದರೆ ಬಹಿರಂಗವಾಗಿ ಗಲ್ಲಿಗೇರುವೆ ಎಂದು ಹೇಳಿಕೆ ನೀಡಿದ್ದಾರೆ.

ಎನ್‍ಫೋರ್ಸ್ ಮೆಂಟ್ ಡೈರಕ್ಟರೇಟ್ ಮುಂಭಾಗದಲ್ಲಿ ಹಾಜರಾಗಲು ದಿಲ್ಲಿಗೆ ಅವರು ಬಂದಿದ್ದರು . ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಬ್ಯಾನರ್ಜಿಯವರನ್ನು ಇಡಿ ದಿಲ್ಲಿಗೆ ಕರೆಯಿಸಿಕೊಂಡಿತ್ತು. ತನಿಖೆ ಯಾವುದೇ ಇರಲಿ, ನಾನು ಸಿದ್ಧ . ತೃಣಮೂಲ ಕಾಂಗ್ರೆಸ್ ಅನ್ನು ರಾಜಕೀಯವಾಗಿ ಎದುರಿಸಲು ಬಿಜೆಪಿ ವಿಫಲವಾಗಿದ್ದು, ರಾಜಕೀಯ ಲಾಭಕ್ಕೆ ತನಿಖಾ ಏಜೆನ್ಸಿಗಳನ್ನು ಛೂ ಬಿಡುತ್ತಿದೆ ಎಂದು ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದರು.

ಪ್ರಕರಣದಲ್ಲಿ ಬ್ಯಾನರ್ಜಿ ಪತ್ನಿ ರುಜಿರ ಬ್ಯಾನರ್ಜಿಗೂ ಇಡಿ ನೋಟಿಸ್ ಕಳುಹಿಸಿತ್ತು. ಆದರೆ ದಿಲ್ಲಿಯಲ್ಲಿ ಹಾಜರಾಗಲು ಸಾಧ್ಯವಿಲ್ಲ. ಕೊಲ್ಕತಾದ ಮನೆಗೆ ಬಂದು ವಿಚಾರಣೆ ನಡೆಸಿ ಎಂದು ರುಜಿರಾ ಹೇಳಿದ್ದರು. ವಿಧಾನಸಭಾ ಚುನಾವಣೆ ಮುಂಚಿತವಾಗಿ ರುಜಿರರನ್ನು ಸಿಬಿಐ ಅವರ ಮನೆಗೆ ಹೋಗಿ ವಿಚಾರಣೆ ನಡೆಸಿತ್ತು.