ಸಮಾಜಕ್ಕೆ ಒಳಿತಿನ ಸಂದೇಶ ನೀಡಿದ ನಾಯಕರುಗಳ ಬಗ್ಗೆ ಪರಸ್ಪರ ತಿಳುವಳಿಕೆ ಹೆಚ್ಚಿಸುವ ಅಗತ್ಯವಿದೆ: ಪಕ್ಕಲಡ್ಕ ಸ್ನೇಹಕೂಟದಲ್ಲಿ ಇಸ್ಹಾಕ್ ಪುತ್ತೂರು

0
702

ಸನ್ಮಾರ್ಗ ವಾರ್ತೆ

ಮಂಗಳೂರು: ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಪ್ರವಾದಿ ಮುಹಮ್ಮದ್ (ಸ) ಸೇರಿದಂತೆ ಸಮಾಜಕ್ಕೆ ಒಳಿತಿನ ಸಂದೇಶವನ್ನು ನೀಡಿದ ಮಹಾನ್ ನಾಯಕರುಗಳ ಬಗ್ಗೆ ಪರಸ್ಪರ ತಿಳುವಳಿಕೆ ಹೆಚ್ಚಿಸುವ ಕೆಲಸ ಆಗಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಿ.ಎ. ಇಸ್ಹಾಕ್ ಪುತ್ತೂರು ಹೇಳಿದರು.

ಅವರು ನಗರದ ಪಕ್ಕಲಡ್ಕದ ಸ್ನೇಹ ಸದನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಪಕ್ಕಲಡ್ಕದ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ರವರ ಸೀರತ್ ಅಭಿಯಾನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸ್ನೇಹಕೂಟ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು.

ಪ್ರವಾದಿ ಮುಹಮ್ಮದ್ (ಸ) ರವರ ಚಿಂತನೆಗಳು ಸಾರ್ವಕಾಲಿಕ. ಸ್ವರ್ಗದ ಹಾದಿ ಕೇವಲ ಆರಾಧನೆಗಳಿಂದ ತುಂಬಿಲ್ಲ. ಮನುಷ್ಯ ಸಂಬಂಧದಿಂದ ಜೋಡಿಸಲ್ಪಟ್ಟಿದೆ. ದೇವನೊಂದಿಗಿನ ಸಂಬಂಧ ಮತ್ತು ಮನುಷ್ಯ ಸಂಬಂಧದ ಬಗ್ಗೆ ಪ್ರವಾದಿ ಮುಹಮ್ಮದರು ನೀಡಿರುವ ಮಾರ್ಗದರ್ಶನದಂತೆ ಬದುಕಿದರೆ ಜೀವನ ಸಾರ್ಥಕವಾಗಬಹುದು ಎಂದು C.A.ಇಸ್ಹಾಕ್ ಪುತ್ತೂರು ಹೇಳಿದರು

ಕಾರ್ಯಕ್ರಮದಲ್ಲಿ ಪಿಜಿ ನೀಟ್ ಪರೀಕ್ಷೆಯಲ್ಲಿ 103ನೇ ರ‌್ಯಾಂಕ್ ಗಳಿಸಿದ ಡಾಕ್ಟರ್ ಶ್ರೀರಕ್ಷಾ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತ್ತಕೋತ್ತರ ಪದವಿ ವಿಭಾಗದಲ್ಲಿ ಹಿಂದಿ ಭಾಷೆಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿದ ಕುಮಾರಿ ಆಶಿಕಾ, ಪ್ರಾಮಾಣಿಕತೆಗೆ ಪೋಲಿಸ್ ಕಮಿಶನರಿಂದ ಸನ್ಮಾನಿತರಾದ ಪಕ್ಕಲಡ್ಕ ನಿವಾಸಿ ರಿಕ್ಷಾ ಚಾಲಕ ಹನೀಫ್ ರಿಗೆ ಸನ್ಮಾನ ಮಾಡಲಾಯಿತು.

ಸಮೀಹ ಶಾದ್ ಕಿರಾತ್ ಪಠಿಸಿದರು. ಯೂಸುಫ್ ಪಕ್ಕಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಪರ್ವೇಝ್ ಧನ್ಯವಾದವಿತ್ತರು. ಸುಲೈಮಾನ್ ಕಾರ್ಯಕ್ರಮ ನಿರೂಪಿಸಿದರು. ಸಬೀಹಾ ಫಾತಿಮಾ, ಸಮೀರ್ ಪಕ್ಕಲಡ್ಕ ಸಹಕರಿಸಿದರು.