ಸನ್ಮಾರ್ಗ ವಾರ್ತೆ
ಡೆಹ್ರಾಡೂನ್: ಹರಿದ್ವಾರದಲ್ಲಿ ಧರ್ಮ ಸಂಸತ್ ನ ಹೆಸರಿನಲ್ಲಿ ಕಾರ್ಯಕ್ರಮ ಮಾಡಿದ್ದ ಹಿಂದುತ್ವವಾದಿಗಳು ಮುಸ್ಲಿಮರ ವಿರುದ್ಧ ನಡೆಸಿದ ದ್ವೇಷ ಭಾಷಣದ ಘಟನೆಗೆ ಸಂಬಂಧಿಸಿ ಹತ್ತು ಮಂದಿ ವಿರುದ್ಧ ಎರಡನೇ ಬಾರಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
ಹರಿದ್ವಾರದ ನಿವಾಸಿ ನದೀಂ ಅಲಿ ಎಂಬವರು ದೂರು ನೀಡಿದ್ದು, ಜ್ವಾಲಾಪುರ ಪೊಲೀಸರು ಕೇಸು ದಾಖಲಿಸಿರುವುದಾಗಿ ಸೀನಿಯರ್ ಸಬ್ ಇನ್ಸ್ಪೆಕ್ಟರ್ ನಿತೇಶ್ ಶರ್ಮ ತಿಳಿಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಆಯೋಜಕ ಯತಿ ನರಸಿಂಹಾನಂದ ಗಿರಿ, ಜಿತೇಂದ್ರ ನಾರಾಯಣ ತ್ಯಾಗಿ ಅಲಿಯಾಸ್ ವಸೀಂ ರಿಝ್ವಿ, ಸಿಂಧು ಸಾಗರ್, ಧರ್ಮದಾಸ್, ಪರಮಾನಂದ ಸಾಧ್ವಿ ಅನ್ನಪೂರ್ಣ, ಅಶ್ವಿನಿ ಉಪಾಧ್ಯಾಯ, ಸುರೇಶ್ ಚೌಹಾನ್ , ಪ್ರಬುದ್ಧಾನಂದ ಗಿರಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ಜ್ವಾಲಾಪುರ ಕೇಸನ್ನೂ ಮೊದಲು ಕೇಸು ದಾಖಲಿಸಲಾದ ಸಿಟಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗಿದೆ.
ಡಿಸೆಂಬರ್ 16 ರಿಂದ 19ರವರೆಗೆ ಹರಿದ್ವಾರದಲ್ಲಿ ಧರ್ಮ ಸಂಸತ್ತು ನಡೆಸಿ ದ್ವೇಷ ಭಾಷಣ ಮಾಡಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇವರ ವಿರುದ್ಧ ಕ್ರಮ ಜರಗಿಸಲು ಬಿಜೆಪಿ ಸರಕಾರದ ಮೇಲೆ ಒತ್ತಡ ಬಿದ್ದಿತ್ತು. ದೇಶದ ವಿವಿಧ ಮುಸ್ಲಿಂ ಸಂಘಟನೆಗಳು ದ್ವೇಷಭಾಷಣದ ವಿರುದ್ಧ ಪ್ರತಿಭಟಿಸಿತ್ತು.












