ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಯೋತ್ಪಾದಕ ಸಂಘಟನೆ ಐಎಸ್ಗೆ ಸೇರ್ಪಡೆಯಾಗಲು ಅಫ್ಘಾನಿಸ್ತಾನಕ್ಕೆ ಹೋಗಿ ಜೈಲುಪಾಲಾದ ಆಯಿಶಾ ಯಾನೆ ಸೋನಿಯಾ ಸೆಬೆಸ್ಟಿಯನ್ ಮತ್ತು ಮಗಳು ಸಾರಾರನ್ನು ಭಾರತಕ್ಕೆ ಮರಳಿ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಎಂಟು ವಾರದೊಳಗೆ ತೀರ್ಮಾನ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಕೇಂದ್ರದ ತೀರ್ಮಾನ ಬಾರದಿದ್ದರೆ ಮಗಳ ಬಿಡುಗಡೆಗೆ ಅರ್ಜಿ ಸಲ್ಲಿಸಿದ ತಂದೆ ವಿ.ಜೆ. ಸೆಬಾಸ್ಟಿಯನ್ ಸಂವಿಧಾನದ 22ನೇ ವಿಧಿಯಂತೆ ಹೈಕೋರ್ಟಿನ ಮೊರೆ ಹೋಗಬಹುದು ಎಂದು ಜಸ್ಟಿಸ್ ಎಲ್ ನಾಗೇಶ್ವರ ರಾವ್, ಬಿಆರ್ ಗವಾಯ್ರ ಪೀಠ ತಿಳಿಸಿದೆ.
ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ಎತ್ತಿಕೊಳ್ಳುವ ಮೊದಲು ಸೆಬಾಸ್ಟಿಯನ್ ಅರ್ಜಿ ಸಲ್ಲಿಸಿದ್ದರು ಎಂದು ಸೆಬಾಸ್ಟಿಯನ್ರಿಗಾಗಿ ಹಾಜರಾದ ಅಡ್ವೊಕೇಟ್ ರಂಜಿತ್ ಮಾರಾರ್ ವಾದಿಸಿದರು. 2021 ರ ಜುಲೈಯಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಆನಂತರ ತಾಲಿಬಾನ್ ಆಳ್ವಿಕೆ ಬಂದಿತ್ತು.
ಆನಂತರ ಜೈಲು ಕೆಡವಿ ಹಾಕಲಾಗಿದ್ದರೂ ಸೋನಿಯಾ ಹಾಗೂ ಮಗಳು ಸಾರಾ ಜೈಲಲ್ಲಿಲ್ಲ ಎಂದು ಹೇಳಲಾಗದು ಎಂದು ಅವರು ವಾದಿಸಿದ್ದಾರೆ.
ವಿದೇಶದಿಂದ ಪ್ರಜೆಗಳ್ನು ಮರಳಿ ಕರೆತರುವ ವಿಷಯದಲ್ಲಿ ಸುಪ್ರೀಂಕೋರ್ಟಿಗೆ ತೀರ್ಮಾನ ಮಾಡಲು ಆಗುವುದಿಲ್ಲ. ಆದರೆ ಕೇಂದ್ರ ಸರಕಾರಕ್ಕೆ ತಿಳಿಸಲಾಗುವುದು ಎಂದು ಪೀಠ ಅರ್ಜಿದಾರರಿಗೆ ತಿಳಿಸಿತು. ಇಂತಹ ವಿಷಯದಲ್ಲಿ ಸರಕಾರ ತೀರ್ಮಾನಿಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.












