ಲೇಖನ: ಇಸ್ಮತ್ ಪಜೀರ್
ತಾಲ ನಡೆದುಬಂದ ದಾರಿ…
ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಹೆಣ್ಮಗಳನ್ನು ಮದುವೆಯಾದ ಉಪ್ಪಳದ ಯುವಕ ಮತ್ತು ಆತನ ಗೆಳೆಯರು ತಾಲಕ್ಕೆ ಬರುವಾಗ ಮೆರೆದ ವಿಕೃತಿ ಇದೀಗ ತಾಲ ಬೇಕು ಮತ್ತು ಬೇಡ ಎಂದು ಚರ್ಚಿಸುವ ಮಟ್ಟಕ್ಕೆ ಬ್ಯಾರಿ ಸಮುದಾಯವನ್ನು ತಲುಪಿಸಿದೆ.ಅವರ ವಿಕೃತಿ ಅದ್ಯಾವ ಮಟ್ಟಕ್ಕೆ ತಲುಪಿತ್ತೆಂದರೆ ನನ್ನಂತಹ ಸಂಸ್ಕೃತಿ ಪ್ರಿಯರು ” ತಾಲ ಸಾಕಿನ್ನು” ಎನ್ನುವಷ್ಟು ನಮ್ಮಲ್ಲಿ ಅಸಹ್ಯ ಹುಟ್ಟಿಸಿದೆ. ಹಾಗಾದರೆ ತಾಲ ಎಂದರೇನು..?ಅನಾಚಾರವೋ, ವಿಕೃತಿಯೋ..? ತಾಲ ಯಾಕೆ ಈ ರೀತಿ ವಿರೂಪಗೊಳ್ಳುತ್ತಿದೆ ಎಂದು ನೋಡೋಣ..
ಮೊದಲನೆಯದಾಗಿ ನಾವು ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ತಾಲ ಎಂಬ ಆಚರಣೆ ಇಸ್ಲಾಮೀ ಆಚರಣೆಯೇನಲ್ಲ. ಹಾಗಂದ ಮಾತ್ರಕ್ಕೆ ತಾಲ ಎಂಬ ಆಚರಣೆಗೆ ಇಸ್ಲಾಮಿನಲ್ಲಿ ವಿರೋಧವೇನಿಲ್ಲ. ಜಗತ್ತಿನಾದ್ಯಂತದ ಮುಸ್ಲಿಮರಲ್ಲಿ ಪ್ರಾದೇಶಿಕವಾಗಿ ಅವರದ್ದೇ ಆದ ಅನನ್ಯ ಸಾಂಸ್ಕೃತಿಕ ಆಚರಣೆಗಳಿವೆ. ಹಾಗೆಯೇ ಈ ತಾಲ ಎನ್ನುವುದು ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಬ್ಯಾರಿ ಮತ್ತು ಮಾಪ್ಲಾ ಮುಸ್ಲಿಮರಲ್ಲಿರುವ ಒಂದು ವಿಶಿಷ್ಟ ಆಚರಣೆ.
ಸುಮಾರು ಮುಕ್ಕಾಲು ಶತಮಾನದ ಹಿಂದೆ ಬ್ಯಾರಿಗಳ ಮದುವೆ ನಡೆಯುತ್ತಿದ್ದುದು ರಾತ್ರಿ ಹೊತ್ತಲ್ಲಿ. ಅಂದರೆ ಮಗ್ರಿಬ್ (ಸೂರ್ಯಾಸ್ತದ) ನಮಾಝಿನ ಬಳಿಕ.
ಸಾಮಾನ್ಯವಾಗಿ ಜಗತ್ತಿನ ಬಹುತೇಕ ಮುಸ್ಲಿಮರಲ್ಲಿ ಮೊದಲು ನಿಕಾಹ್ ಮಾಡಲಾಗುತ್ತದೆ. ನಿಕಾಹ್ ಎಂದರೆ ಅತ್ಯಂತ ಸರಳ. ವರ ಮತ್ತು ವಧುವಿನ ತಂದೆ ಯಾ ಪೋಷಕರು ಎರಡೂ ಕಡೆಯಿಂದ ಗಣ್ಯ ಸಾಕ್ಷಿಗಳ ಸಮ್ಮುಖದಲ್ಲಿ ನಡೆಸುವ ಕರಾರು ಅಷ್ಟೆ. ನಿಕಾಹ್ನಲ್ಲಿ ವರ ತಾನು ಇಂತಿಷ್ಟು ವಧುದಕ್ಷಿಣೆಯನ್ನು ಕೊಡುತ್ತೇನೆಂದು ವಾಗ್ಧಾನ ಮಾಡುತ್ತಾನೆ. ಅಲ್ಲಿ ನಡೆದ ಕರಾರಿನಂತೆ ವರ ವಧುವನ್ನು ಸ್ಪರ್ಶಿಸುವ ಮುನ್ನ ಈಗಾಗಲೇ ಸಾಕ್ಷಿಗಳ ಮುಂದೆ ಹೇಳಿದಷ್ಟು ವಧುದಕ್ಷಿಣೆ ಅಥವಾ ಮಹರನ್ನು ಕೊಡಬೇಕು. ಆ ಬಳಿಕವಷ್ಟೇ ಆತ ವಧುವನ್ನು ಸ್ಪರ್ಶಿಸಬಹುದು. ಹಾಗೆ ಮೊದಲ ರಾತ್ರಿ ಗಂಡು- ಹೆಣ್ಣು ಸಮಾಗಮವಾದ ಬಳಿಕ ಮರುದಿನ ಊರವರಿಗೆ, ಸಂಬಂಧಿಕರಿಗೆ, ಗೆಳೆಯರಿಗೆ ವಲೀಮಾ ಅರ್ಥಾತ್ ಔತಣಕೂಟವನ್ನು ಗಂಡಿನ ಖರ್ಚಲ್ಲಿ ಕೊಡಬೇಕು.ಬ್ಯಾರಿಗಳಲ್ಲೂ ನಿಕಾಹ್ ಮತ್ತು ಮಹರ್ಗೆ ಸಂಬಂಧಿಸಿದಂತೆ ಯಥಾವತ್ತಾಗಿ ನಡೆಯುತ್ತದೆ.ಅದು ಧಾರ್ಮಿಕ ವಿಚಾರವಾದ ಕಾರಣ ಅದರಲ್ಲಿ ಪ್ರಾದೇಶಿಕವಾಗಿ ಬದಲಾವಣೆ ಮಾಡುವಂತಿಲ್ಲ.
ಆದರೆ ಬ್ಯಾರಿಗಳಲ್ಲಿ ವಲೀಮಾಕ್ಕೆ ಸಂಬಂಧಿಸಿದ ಇಂತಹ ಪರಿಕಲ್ಪನೆಯೇ ಇಲ್ಲ.ಬ್ಯಾರಿಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಕೋಲಿಚೋರು,ನಿಕಾಹ್ ಆದ ಕೂಡಲೇ ಔತಣ ಕೂಟ ( ಮಹರನ್ನು ನಿಕಾಹ್ನ ಸಭೆಯಲ್ಲೇ ಹೆಣ್ಣಿನ ಪೋಷಕರ ಕೈಗೊಪ್ಪಿಸಲಾಗುತ್ತದೆ.)ಅಂದೇ ರಾತ್ರಿ ಹೆಣ್ಣಿನ ಮನೆಯಲ್ಲಿ ತಾಲ, ಮರುದಿನ ಕುಪ್ಪಳೆ (ಹೆಣ್ಣಿಗೆ ಗಂಡಿನ ಕಡೆಯ ಹೆಂಗಸರು ಹೋಗಿ ಬಲೆ ಮತ್ತಿತರ ಆಭರಣ, ವಸ್ತ್ರಗಳನ್ನು ಉಡಿಸಿ ಸಿಂಗರಿಸಿ ಕರೆತರುವುದು) ಒಪ್ಪನೆ (ಮದು ಮಗಳ ಒಡವೆ, ವಸ್ತ್ರಗಳನ್ನು ನೋಡಲು ಮತ್ತು ಆಕೆಯ ಪರಿಚಯ ಮಾಡಿಕೊಳ್ಳಲು ಊರವರು ಬರುವುದು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಹಾಡು, ತಮಾಷೆಗಳು.) ಮತ್ತೆ ಮದುಮಗಳನ್ನು ಆಕೆಯ ತಂದೆ, ತಾಯಿ ಕುಟುಂಬಿಕರು ಹೋಗಿ ಗಂಡಿನ ಮನೆಯಿಂದ ಒಮ್ಮೆ ತವರಿಗೆ ಕರೆದುಕೊಂಡು ಹೋಗುವುದರೊಂದಿಗೆ ಮದುವೆ ಮುಗಿಯುತ್ತದೆ.
ಈಗಾಗಲೇ ಬರೆದಂತೆ ಹಿಂದೆ ಬ್ಯಾರಿಗಳಲ್ಲಿ ಸೂರ್ಯಾಸ್ತದ ( ಮಗ್ರಿಬ್) ನಮಾಝಿನ ಬಳಿಕ ಮದುವೆ ನಡೆಯುತ್ತಿತ್ತು. ಹೆಣ್ಣಿನ ಮನೆ ನಡೆದು ಹೋಗುವಷ್ಟು ಸನಿಹವಿದ್ದರೆ ಅಂದು ರಾತ್ರಿಯೇ ನಿಕಾಹ್ ಬಳಿಕ ಮಧುಮಗ ಮದುಮಗಳ ಮನೆಗೆ ತನ್ನ ಮನೆಯವರು, ಗೆಳೆಯರೊಂದಿಗೆ ಗ್ಯಾಸ್ ಲೈಟ್, ಚಿಮಿನಿ ಬೆಳಕಿನಲ್ಲಿ ಮೆರವಣಿಗೆಯಲ್ಲಿ ಹೋಗಿ ಹಾರ ಹಾಕುತ್ತಾನೆ. ಈ ಹಾರ ಬದಲಿಸುವುದಕ್ಕೆ ಬ್ಯಾರಿಗಳಲ್ಲಿ ಚರ್ಡ್ ಎನ್ನುತ್ತಾರೆ. ಈ ಚರ್ಡ್ ನೆಲಸಂಸ್ಕೃತಿಯ ಪ್ರಭಾವದಿಂದ ಹುಟ್ಟಿಕೊಂಡದ್ದೇ ಹೊರತು ಧಾರ್ಮಿಕವಾಗಿ ಅದಕ್ಕೆ ಯಾವ ಮಹತ್ವವೂ ಇಲ್ಲ.
ಒಂದು ವೇಳೆ ಹೆಣ್ಣಿನ ಮನೆ ದೂರವಿದ್ದರೆ ಆ ಕಾರ್ಯಕ್ರಮ ಮರುದಿನಕ್ಕೆ ಮುಂದವರಿಯುತ್ತಿತ್ತು.
ಒಟ್ಟಿನಲ್ಲಿ ಹಿಂದಿನ ಕಾಲದಲ್ಲಿ ತಾಲ ಮದುವೆಯ ಮರುದಿನವಿರುತ್ತಿತ್ತು.
ಈಗ ಮದುವೆಗಳು ಹಗಲು ಹೊತ್ತೇ ಹೆಚ್ಚಾಗಿ ನಡೆಯುವುದರಿಂದ ತಾಲ ಅದೇ ರಾತ್ರಿಯಿರುತ್ತದೆ.
ಬ್ಯಾರಿಗಳಲ್ಲಿ ಮೊದಲ ರಾತ್ರಿ ಹೆಣ್ಣಿನ ಮನೆಯಲ್ಲೇ ನಡೆಯುತ್ತದೆ. ಮೊದಲ ರಾತ್ರಿ ಗಂಡು ತನ್ನ ಗೆಳೆಯರು, ಅಣ್ಣ ತಮ್ಮಂದಿರು, ಬಾವಂದಿರು, ಚಿಕ್ಕಪ್ಪ, ಚಿಕ್ಕಪ್ಪನ ಮಕ್ಕಳೊಂದಿಗೆ ಹೋಗುತ್ತಾನೆ. ಹಾಗೆ ಹೋಗುವಾಗ ಸಿಹಿತಿಂಡಿಗಳು, ಹಣ್ಣು ಹಂಪಲುಗಳು, ಹೂವು ಮತ್ತಿತರ ವಸ್ತುಗಳನ್ನು ಉಡುಗೊರೆಯಾಗಿ ಕೊಂಡೊಯ್ಯುತ್ತಾನೆ. ಅಲ್ಲಿ ಮದುಮಗ ಮತ್ತು ಆತನ ಸಂಗಡಿಗರಿಗೆ ಭರ್ಜರಿ ಔತಣಕೂಟವಿರುತ್ತದೆ. ಹತ್ತಾರು ಬಗೆಯ ತಿಂಡಿಗಳು, ಪಾನಕಗಳು, ವಿವಿಧ ಮಾಂಸದ ಖಾದ್ಯಗಳು ಹೀಗೆ ಹೊಟ್ಟೆ ಬಿರಿಯುವಷ್ಟು ಉಣಬಡಿಸುತ್ತಾರೆ.ಇದನ್ನೇ ತಾಲವೆನ್ನುತ್ತಾರೆ. ತಾಲವೆಂದರೆ ಎರಡೂ ಕಡೆಗಳಿಂದ ತಮಾಷೆ, ಕುಶಾಲು, ಚೇಡಿಸುವುದು ಹೀಗೆ ಇದ್ದೇ ಇರುತ್ತದೆ.ಅಂದು ಉಣಬಡಿಸುವ ಬಾಳೆ ಹಣ್ಣಿನ ತಿಂಡಿ(ಬಾಳೆಪ್ಪ), ನೈಯಪ್ಪ, ಮುಟ್ಟೆರಪ್ಪ (ಮೊಟ್ಟೆಯ ತಿಂಡಿ) ಹೀಗೆ ಹತ್ತಾರು ಬಗೆಯವಿರುತ್ತವೆ. ಈಗ ಆಧುನಿಕ ಪುಡ್ಡಿಂಗ್ಗಳು, ಐಸ್ ಕ್ರೀಂ, ಸಿಹಿ ತಿಂಡಿಗಳೆಲ್ಲಾ ಇರುತ್ತವೆ. ಇಂತಹ ಹತ್ತಾರು ತಿಂಡಿಗಳನ್ನು ಮನೆಯವರಿಗೆ ತಯಾರಿಸಲು ಕಷ್ಟವಾಗುತ್ತದೆಂದು, ನೆರೆ ಮನೆಯವರು, ಸಂಬಂಧಿಕರು ಒಂದೊಂದು ಬಗೆಯ ತಿಂಡಿಯನ್ನು ತಯಾರಿಸಿ ತರುತ್ತಾರೆ.ಹಾಗೆ ತಯಾರಿಸುವ ಸಿಹಿತಿಂಡಿಗಳಲ್ಲಿ ಒಂದೊಂದರ ಮಧ್ಯೆ ಮೆಣಸು, ಕಡ್ಡಿಗಳು, ಉಪ್ಪು, ಕಲ್ಲು ಹೀಗೆ ಏನೇನನ್ನೋ ಇಡುತ್ತಾರೆ. ಪಾನಕಗಳಲ್ಲಿ ಯಾವುದಾದರೂ ಒಂದು ಲೋಟಕ್ಕೆ ಖಾರ, ಉಪ್ಪು ಕಲಸಿ ಇಟ್ಟು ಬಿಡುತ್ತಾರೆ. ಅಂತಹದ್ದನ್ನು ತಿಂದು ಮೋಸ ಹೋದವನನ್ನು ಎಲ್ಲರೂ ಸೇರಿ ತಮಾಷೆ ಮಾಡಿ ನಗುವುದು, ಚೇಡಿಸುವುದು ಇವೆಲ್ಲಾ ಸಾಮಾನ್ಯ.ಮದುಮಗನ ಕಡೆಯವರು ಇದಕ್ಕೆ ಪ್ರತಿಯಾಗಿ ಏನಾದರೂ ಚಿಕ್ಕ ಪುಟ್ಟ ಕೀಟಲೆ ಕೊಡುವುದು ಇವೆಲ್ಲಾ ಸಾಮಾನ್ಯ. ಇದರಿಂದ ಯಾರೂ ಸಿಟ್ಟಾಗುವುದೋ, ಜಗಳಾಡುವುದೋ ಮಾಡುವುದಿಲ್ಲ. ತಾಲಕ್ಕೆಂದು ಹೋದ ಹುಡುಗರು ಹಾಡು ಹಾಡುವುದು ಇವೂ ಸರ್ವೇ ಸಾಮಾನ್ಯ.ಈ ಎಲ್ಲಾ ತಮಾಷೆ, ಚೇಡಿಸುವಿಕೆ ಎಲ್ಲಾ ಮುಗಿದು ಚೆನ್ನಾಗಿ ತಿಂದುಂಡು ಬರುವಾಗ ಪರಸ್ಪರ ಪರಿಚಯ ಮಾಡಿಸಿಕೊಂಡು ಹಸ್ತಲಾಘವ ಮಾಡಿ ಆಲಿಂಗಿಸಿ ಖುಷಿಯಿಂದ ಮರಳುತ್ತಾರೆ.ಇಂತಹ ತಾಲಗಳಿಂದ ಎಲ್ಲರೂ ಖುಷಿಪಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ತಾಲಗಳು ತಾಳ ತಪ್ಪಿ ಏನೇನೋ ಅನಾಹುತಗಳು, ಅನಾಚಾರಗಳು ನಡೆಯುತ್ತವೆ.ಅಂತಹ ಅತಿರೇಕದ ಇತ್ತೀಚಿನ ಉದಾಹರಣೆಯೇ ಮೊನ್ನೆ ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ವೇಷ ಹಾಕಿದ ತಾಳ ತಪ್ಪಿದ ತಾಲ. ಇದು ಒಂದು ಉದಾಹರಣೆಯಾದರೆ ಕೆಲವರು ಹೆಣ್ಣಿನ ಮನೆಗೆ ಹಾನಿಯೆಸಗುವುದು,ಇಲೆಕ್ಟ್ರಿಕ್ ಕನೆಕ್ಷನ್ ತಪ್ಪಿಸುವುದು, ಮದುಮಗನನ್ನು ರಾತ್ರಿ ಹೊತ್ತು ಹೊತ್ತುಕೊಂಡು ಹೋಗಿ ಮುಂಜಾವಿನ ವರೆಗೆ ತಿರುಗಾಡಿಸಿ ಸೂರ್ಯೋದಯದ ಹೊತ್ತಿಗೆ ಹೆಣ್ಣಿನ ಮನೆಗೆ ತಂದು ಬಿಡುವುದು.ಇಂತಹದ್ದರಿಂದಾಗಿ ಬ್ಯಾರಿ ಸಂಸ್ಕೃತಿಯ ಸುಂದರ ಆಚರಣೆಗಳು ಈಗೀಗ ಸಮುದಾಯಕ್ಕೆ ದುಬಾರಿಯೆನಿಸುತ್ತಿದೆ. ಇಂತಹ ಬೆರಳೆಣಿಕೆ ಮಂದಿಯ ದುರಾಚಾರಗಳಿಂದ ಬೇಸತ್ತು ಇಂದು ಸಮುದಾಯ ತಾಲವನ್ನೇ ನಿಷೇಧಿಸಬೇಕು ಎಂದು ಕೂಗೆಬ್ಬಿಸುತ್ತಿದೆ.












