ಸನ್ಮಾರ್ಗ ವಾರ್ತೆ
ನವದೆಹಲಿ:ಕಟ್ಟುನಿಟ್ಟಿನ ಕೊರೋನ ನಿಯಮಗಳೊಂದಿಗೆ ಕೇಂದ್ರ ಚುನಾವಣಾ ಆಯೋಗವು ಪಂಚ ರಾಜ್ಯಗಳ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ವರ್ಷ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳು ಹೆಚ್ಚು ವರ್ಚ್ಯುಯಲ್ ರ್ಯಾಲಿಗಳ ಗಮನ ಹರಿಸಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆ ಎದುರಿಸಲಿರುವ 5 ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಫೆ.10 ರಿಂದ ಮತದಾನ ಪ್ರಾರಂಭವಾಗಿ ಮಾ.7 ವರೆಗೆ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾ.10 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಪಂಜಾಬ್, ಗೋವಾ, ಉತ್ತರಾಖಂಡಗಳಲ್ಲಿ ಫೆ.14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಮಣಿಪುರದಲ್ಲಿ ಫೆ.27 ರಂದು ಮೊದಲ ಹಂತ ಹಾಗೂ ಮಾ.03 ರಂದು 2 ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 7 ಹಂತಗಳ ಮತದಾನ ನಡೆಯಲಿದ್ದು ಫೆ.10 ರಂದು ಮೊದಲ ಹಂತದ, ಫೆ.14- ದ್ವಿತೀಯ, ಫೆ.20- ತೃತೀಯ ಹಂತ, ಫೆ.23-4ನೇ ಹಂತ, ಫೆ.27-5 ನೇ ಹಂತ, ಮಾ.3 ರಂದು 6ನೇ ಹಂತ, ಮಾ.07ರಂದು 7 ನೇ ಹಂತದ ಚುನಾವಣೆ ನಡೆಯಲಿದ್ದು ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.












