ಸನ್ಮಾರ್ಗ ವಾರ್ತೆ
ಮಂಗಳೂರು: ಸಮಾನತೆ, ಎಲ್ಲರೂ ಪರಸ್ಪರ ಪ್ರೀತಿ ಗೌರವಗಳೊಂದಿಗೆ ಮಾನವೀಯತೆಯೊಂದಿಗೆ ಬದುಕಬೇಕು. ಧರ್ಮಗಳು ಇದಕ್ಕೆ ಪೂರಕವಾಗಲಿ ಎಂದು ಮಂಗಳೂರು ವಿ.ವಿ.ಕ್ರೈಸ್ತ ಅಧ್ಯಯನ ಪೀಠದ ಅಧ್ಯಕ್ಷ ವಂ.ಐವನ್ ಡಿಸೋಜ ಹೇಳಿದ್ದಾರೆ.
ಯುನಿವೆಫ್ ಕರ್ನಾಟಕ ವತಿಯಿಂದ ನಗರದ ಶಾಂತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಸರ್ವ ಧರ್ಮೀಯರೊಂದಿಗೆ ಸ್ನೇಹ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸ್ನೇಹ ಸಂವಾದಂತಹ ಇಂತಹ ಕಾರ್ಯಕ್ರಮ ನಾವೆಲ್ಲರೂ ಒಟ್ಟಾಗಿ ಮಾನವೀಯತೆಯೊಂದಿಗೆ ಬಾಳಲು ಸಾಧ್ಯವಾಗಬೇಕು. ಪರಸ್ಪರ ಧರ್ಮದ ಮೌಲ್ಯಗಳನ್ನು ಗೌರವಿಸುವುದು ಉತ್ತಮ ಧರ್ಮ. ಧರ್ಮ ನಮ್ಮನ್ನು ಪರಸ್ಪರ ಒಂದುಗೂಡಿಸಬೇಕು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ವಾರ್ ಮಾತನಾಡಿ, ಜಾತಿ, ಅಸಮಾನತೆ ಮನುಷ್ಯರು ಸೃಷ್ಟಿಸಿರುವುದು ಅದು ದೇವರ ಸೃಷ್ಟಿಯಲ್ಲ. ಇತರರ ಕಷ್ಟಗಳಿಗೆ ಸ್ಪಂದಿಸುವುದೇ ನಮ್ಮ ಧರ್ಮದ ಮೂಲ ಆಶಯ. ಕೋಮುವಾದವನ್ನು ಯಾವುದೇ ಧರ್ಮ ಬೆಂಬಲಿಸುವುದಿಲ್ಲ, ದ್ವೇಷ ನಮ್ಮನ್ನು ಒಂದು ಗೂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ಭಾರತ ಧರ್ಮದೊಂದಿಗೆ ಸೇರಿ ನಿರ್ಮಾಣವಾದ ದೇಶ. ಆದರೆ ಈ ಧರ್ಮಗಳೇ ಈ ದೇಶಕ್ಕೆ ಅಪಾಯವನ್ನುಂಟು ಮಾಡುತ್ತಿರುವುದು ದುರಂತ, ಧರ್ಮ ಕೇವಲ ಸಂಕೇತಗಳಲ್ಲ. ಆದರೆ ಆ ಸಂಕೇತಗಳೇ ಧರ್ಮದ ಹೆಸರಿನಲ್ಲಿ ಸಂಘರ್ಷಗಳಿಗೆ ಕಾರಣವಾಗಿರುವುದು ವಿಪರ್ಯಾಸ ಎಂದರು.













