ಉಕ್ರೇನ್‌ – ರಷ್ಯಾ ಬಿಕ್ಕಟ್ಟು: ಪೋಲ್ಯಾಂಡ್ ನತ್ತ ಹೆಚ್ಚುವರಿ ಮೂರು ಸಾವಿರ ಸೈನಿಕರನ್ನುಕಳುಹಿಸಲು ಅಮೆರಿಕ ಚಿಂತನೆ

0
521

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ : ಉಕ್ರೇನ್‌ ಹಾಗೂ ರಷ್ಯಾ ನಡುವೆ ಬಿಕ್ಕಟ್ಟು ಏಳುವ ಲಕ್ಷಣಗಳು ಹೆಚ್ಚುತ್ತಿರುವ ಮಧ್ಯೆಯೇ ಪೋಲ್ಯಾಂಡ್ ನತ್ತ ಹೆಚ್ಚುವರಿಯಾಗಿ ಮೂರು ಸಾವಿರ ಸೈನಿಕರನ್ನು ಕಳುಹಿಸಲು ಅಮೆರಿಕ ಚಿಂತನೆ ನಡೆಸಿರುವ ಬಗ್ಗೆ ಪೋಲ್ಯಾಂಡ್ ನ ಗೃಹ ಸಚಿವ ಮಾರಿಯುಸ್ಜ್ ಬ್ಲಾಸ್ಜಾಕ್ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ಮಾಹಿತಿ ನೀಡಿದ್ದಾರೆ.

ನಾವು ಉಕ್ರೈನ್ ಮೇಲೆ ದಾಳಿ ಮಾಡುವ ಯಾವುದೇ ಆಲೋಚನೆಗಳಿಲ್ಲ ಎಂದು ರಷ್ಯಾ ನಿರಾಕರಿಸುತ್ತಿದರೂ, ಬೆಲಾರಸ್, ಕ್ರೈಮಿಯಾ ಮತ್ತು ಪಶ್ಚಿಮ ರಷ್ಯಾದಲ್ಲಿ ಈಗಾಗಲೇ ರಷ್ಯಾದ ಸೇನೆಯು ನೆಲೆಯೂರಿರುವ ಉಪಗ್ರಹದ ಫೋಟೋಗಳು ಸದ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನ್ಯಾಟೊ ಮಿತ್ರರಾಷ್ಟ್ರಗಳಿಗೆ ತನ್ನ ಬೆಂಬಲ ಸೂಚಿಸುವ ಸಲುವಾಗಿ ಅಮೇರಿಕ ಈಗಾಗಲೇ ಪೋಲಂಡ್‌ನಲ್ಲಿ 1,700 ಯೋಧರನ್ನು ನಿಯೋಜಿಸಿದೆ. ಈಗ ಇನ್ನೂ ಹೆಚ್ಚುವರಿಯಾಗಿ 3,000 ಯೋಧರನ್ನು ಕಳುಹಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅಮೆರಿಕ ರಕ್ಷಣಾ ಇಲಾಖೆ (ಪೆಂಟಗನ್) ತಿಳಿಸಿದ್ದು, ಯಾವುದೇ ಕ್ಷಣದಲ್ಲೂ ಅಮೇರಿಕಾದ ಹೆಚ್ಚುವರಿ ಸೇನೆ ಬರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಪೋಲ್ಯಾಂಡ್ ನ ಗೃಹ ಸಚಿವ ಮಾರಿಯುಸ್ಜ್ ಬ್ಲಾಸ್ಜಾಕ್ ಟ್ವೀಟ್ ಮಾಡಿದ್ದಾರೆ.

ರಷ್ಯಾ ಪಡೆಗಳು ಉಕ್ರೇನ್‌ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚುತ್ತಿರುವ ಕಾರಣ, ಉಕ್ರೇನ್‌ ತೊರೆಯುವಂತೆ ಹಲವು ದೇಶಗಳು ತಮ್ಮ ಪ್ರಜೆಗಳಿಗೆ ಶನಿವಾರ ಸೂಚನೆ ನೀಡಿವೆ. ಕಳೆದ ಕೆಲವು ದಿನಗಳಿಂದ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧದ ಭೀತಿ ನಿರ್ಮಾಣವಾಗಿದೆ.