ಸನ್ಮಾರ್ಗ ಸಂಪಾದಕೀಯ
ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಲಾದ ಅವಮಾನವನ್ನು ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯು ಮಾಧ್ಯಮ ತಾರತಮ್ಯಕ್ಕೆ ಸಂಬಂಧಿಸಿ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಎಂದು ಗುರುತಿಸಿಕೊಂಡಿರುವ ಕನ್ನಡದ ಪ್ರಮುಖ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳು ತಮ್ಮ ಕಾಲಬುಡದಲ್ಲೇ ನಡೆದಿರುವ ಬೃಹತ್ ಪ್ರತಿಭಟನೆಗೆ ಕವರೇಜ್ ನೀಡದಿರಲು ಕಾರಣವೇನು? ಹಿಜಾಬ್ ಧರಿಸಿದ ಪುಟ್ಟ ಬಾಲಕಿಯನ್ನು ಅಟ್ಟಿಸಿಕೊಂಡು ಹೋಗಿ ಕವರೇಜ್ ಮಾಡುವಷ್ಟು ಸುದ್ದಿ ಹಸಿವಿನಿಂದ ಬಳಲುತ್ತಿರುವ ಪತ್ರಕರ್ತರಿಗೆ ಮತ್ತು ಅದನ್ನು ಅಷ್ಟೇ ಆಸಕ್ತಿಯಿಂದ ಪ್ರಸಾರ ಮಾಡಿದ ಟಿ.ವಿ. ಚಾನೆಲ್ಗಳಿಗೆ ಬೆಂಗಳೂರನ್ನೇ ನೀಲಿಮಯಗೊಳಿಸಿದ ಬೃಹತ್ ಪ್ರತಿಭಟನೆಯೇಕೆ ಅಮುಖ್ಯ ಅನಿಸಿತು?
ಉತ್ತರ ಬಹಳ ಸ್ಪಷ್ಟ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರು ದಲಿತರು. ಅವರು ಎತ್ತಿರುವುದು ದಲಿತ ಸ್ವಾಭಿಮಾನದ ಪ್ರಶ್ನೆ. ಅವರ ಬಾಯಲ್ಲಿರುವುದು ಅಂಬೇಡ್ಕರ್. ದಲಿತರು ಮತ್ತು ಮುಸ್ಲಿಮರಿಗೆ ಅವರ ಸ್ವಾಭಿಮಾನ, ಅಸ್ಮಿತೆ, ಹಕ್ಕುಗಳನ್ನು ಕೊಟ್ಟಿರುವುದು ಮತ್ತು ಪಟ್ಟು ಹಿಡಿದು ಅವನ್ನು ಪಡಕೊಳ್ಳುವ ವ್ಯವಸ್ಥೆ ರೂಪಿಸಿರುವುದೂ ಡಾ| ಬಾಬಾ ಸಾಹೇಬ್ ಅಂಬೇಡ್ಕರ್. ಅಂದಮೇಲೆ,
ಇಲ್ಲೊಂದು ಪ್ರಶ್ನೆಯೂ ಉದ್ಭವಿಸುತ್ತದೆ. ಹಾಗಿದ್ದರೆ ದಲಿತರು ಮತ್ತು ಮುಸ್ಲಿಮರಿಗೆ ಇವನ್ನೆಲ್ಲ ನಿರಾಕರಿಸುವುದು ಯಾರು? ಅವರೇಕೆ ನಿರಾಕರಿಸಿದ್ದಾರೆ? ಅವರು ಇವತ್ತು ಎಲ್ಲಿದ್ದಾರೆ? ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅವರು ಇವತ್ತು ಯಾವ ಸ್ಥಾನ-ಮಾನವನ್ನು ಹೊಂದಿದ್ದಾರೆ? ಅಂಬೇಡ್ಕರ್ ಮತ್ತು ಅವರು ರೂಪಿಸಿಕೊಟ್ಟ ಸಂವಿಧಾನದ ಬಗ್ಗೆ ಅವರ ನಿಲುವೇನು?
ಇವು ಮತ್ತು ಇವಕ್ಕೆ ಪೂರಕವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಸಿಗುವ ಉತ್ತರಗಳೇ ಮಾಧ್ಯಮಗಳೇಕೆ ಹೀಗೆ ಎಂಬ ಪ್ರಶ್ನೆಯ ಉತ್ತರ.
ದಲಿತರು ಮತ್ತು ಮುಸ್ಲಿಮರಿಗೆ ಸಂಬಂಧಿಸಿ ಮುಖ್ಯವಾಹಿನಿಯ ಮಾಧ್ಯಮಗಳು ಬಹುತೇಕ ನಕಾರಾತ್ಮಕ ಸುದ್ದಿಗಳನ್ನೇ ಬೆಂಬತ್ತುವ ಚಾಳಿಯನ್ನು ಹೊಂದಿವೆ. ಹಿಜಾಬ್ ಇವುಗಳ ಪಾಲಿಗೆ ಇಂಥದ್ದೇ ಒಂದು ಸರಕು. ಹಿಜಾಬನ್ನು ಮುಸ್ಲಿಮ್ ಮಹಿಳೆಯರು ತಲೆತಲಾಂತರದಿಂದ ಧರಿಸಿಕೊಂಡು ಬರುತ್ತಿದ್ದರೂ ಹೆಚ್ಚಿನ ಟಿ.ವಿ. ಮಾಧ್ಯಮಗಳು ಇದೇ ಮೊದಲ ಬಾರಿ ನೋಡುತ್ತಿರುವಂತೆ ನಟಿಸಿದುವು. ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರ ಬಾಯಿಗೆ ಅಚ್ಚರಿಯಿಂದ ಮೈಕ್ ಹಿಡಿದುವು. ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡ ವಿದ್ಯಾರ್ಥಿನಿಯರಿಂದ ಸಮಾಜದ ಶಾಂತಿ ಮತ್ತು ಸಮಾನತೆಗೆ ಭಂಗವಾಗುತ್ತಿದೆ ಎಂದು ವ್ಯಾಖ್ಯಾನಿಸಿದುವು. ಅವರನ್ನು ಕ್ಯಾಮರಾ ಹಿಡಿದುಕೊಂಡು ಬೆನ್ನಟ್ಟಿದುವು. ಆ ಮಕ್ಕಳ ಬಾಯಿಯಿಂದ ಉದುರುವ ಒಂದೊಂದು ಪದವನ್ನೂ ನ್ಯೂಸ್ ರೂಂನಲ್ಲಿ ಕುಳಿತು ಬಿಡಿಸಿ, ಸೀಳಿ, ತುಂಡರಿಸಿ ವಿವಿಧ ವ್ಯಾಖ್ಯಾನ ಕೊಟ್ಟವು. ಅಷ್ಟಕ್ಕೂ, ಅದೇ ಮೊದಲ ಬಾರಿ ಮೈಕ್ ಮತ್ತು ಕ್ಯಾಮರಾವನ್ನು ಎದುರಿಸುತ್ತಿರುವ ಮಕ್ಕಳ ಗೊಂದಲವಾಗಲಿ, ಅವರ ಎಳಸುತನವಾಗಲಿ ಈ 50 ದಾಟಿದ ಆ್ಯಂಕರ್ಗಳಿಗೆ ಮುಖ್ಯವೇ ಆಗಲಿಲ್ಲ. ಇರುವ ಕಾನೂನುಗಳನ್ನೆಲ್ಲ ಮುರಿದು ಶಾಲಾ ಕ್ಯಾಂಪಸ್ನೊಳಗೂ ತರಗತಿಯೊಳಗೂ ನುಗ್ಗಿ ಮಕ್ಕಳನ್ನು ಸೆರೆ ಹಿಡಿದು ತೋರಿಸುವ ಅತಿ ನೀಚ ಮಟ್ಟಕ್ಕೂ ಚಾನೆಲ್ಗಳು ಇಳಿದುವು. ಹಾಗಂತ,
ಆ ಮಕ್ಕಳ ತಳಮಳವನ್ನು ಪ್ರಸ್ತುತಪಡಿಸುವ ಉದ್ದೇಶದಿಂದ ಹೀಗೆ ಮಾಡಿರುವುದೂ ಅಲ್ಲ. ಈ ಮಕ್ಕಳು ಯಾವಾಗ ಅಲ್ಲಾಹು ಅಕ್ಬರ್ ಹೇಳುತ್ತಾರೆ, ಯಾವಾಗ ಧರ್ಮ ಮುಖ್ಯ ಎಂದು ಘೋಷಿಸುತ್ತಾರೆ, ಕಾನೂನು ಧಿಕ್ಕರಿಸುವ ಮಾತಾಡುತ್ತಾರೆ ಎಂಬುದನ್ನು ಸೆರೆ ಹಿಡಿಯುವ ಮತ್ತು ಹಾಗೆ ಹೇಳದಿದ್ದರೆ ಹಾಗೆ ಹೇಳಿಸುವ ಹಪಹಪಿ ಅಷ್ಟೇ. ಹಿಜಾಬ್ ಧರಿಸುವ ಹಕ್ಕಿಗಾಗಿ ಕೋರ್ಟು ಕಟಕಟೆ ಹತ್ತಿರುವ ಉಡುಪಿಯ ಕಾಲೇಜು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಇದೀಗ ಇಂಥದ್ದೇ ಹಪಹಪಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ತನ್ನ ಅನು ಪಸ್ಥಿತಿಯ ವೇಳೆ ತನ್ನ ಮನೆಗೆ ಸುವರ್ಣ ನ್ಯೂಸ್ ಚಾನೆಲ್ನ ವರದಿಗಾರರು ಬಲವಂತದಿಂದ ಪ್ರವೇಶಿಸಿ ರಹಸ್ಯ ಕ್ಯಾಮರಾದಿಂದ ಚಿತ್ರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಅಜ್ಜಿ ಮತ್ತು ಅಣ್ಣನ ಅಭಿಪ್ರಾಯವನ್ನು ಕದ್ದು ಸಂಗ್ರಹಿಸಿ ಅದನ್ನು ಚಾನೆಲ್ನಲ್ಲಿ ಪ್ರಸಾರ ಮಾಡಿದ್ದಾರೆ. ಈ ಹೋರಾಟದ ಹಿಂದೆ ಐಸಿಸ್ ಇದೆ ಎಂಬರ್ಥದಲ್ಲಿ ಆ ಕಾರ್ಯಕ್ರಮಕ್ಕೆ ಶೀರ್ಷಿಕೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ,
ಆಲಿಯಾ ಅಸ್ಸಾದಿಯ ಬಗ್ಗೆ ಈ ಚಾನೆಲ್ಗಿರುವ ಈ ಕುತೂಹಲವು ಕಾಲೇಜು ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾದ ಯಶ್ಪಾಲ್ ಸುವರ್ಣ ಮತ್ತು ರಘುಪತಿ ಭಟ್ ಬಗ್ಗೆ ಯಾಕಿಲ್ಲ? ‘ಕುತ್ತಿಗೆಯಲ್ಲಿರುವ ಶಾಲನ್ನು ತಲೆವರೆಗೆ ಎಳೆದುಕೊಳ್ಳಲು ಬಿಡಿ’ ಎಂಬ ಈ ಮಕ್ಕಳ ಮನವಿಯನ್ನು ತಿರಸ್ಕರಿಸಿದ್ದ ಈ ಇಬ್ಬರು. ಇವರೇಕೆ ತಿರಸ್ಕರಿಸಿದರು? ಇವರಿಬ್ಬರೂ ಬಿಜೆಪಿಗೆ ಸೇರಿದವರು. ಅಧಿಕಾರ ಪಡೆಯುವುದಕ್ಕಾಗಿ ಮುಸ್ಲಿಮ್ ವಿರೋಧಿ ರಾಜಕೀಯವನ್ನೇ ಆಧರಿಸಿಕೊಂಡು ಬಂದಿರುವ ಪಕ್ಷ ಬಿಜೆಪಿ. ಅಲ್ಲದೇ, ಈ ಇಬ್ಬರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾದ ಚರಿತ್ರೆಯೂ ಇದೆ. ಇವರಿಗೆ ಹೋಲಿಸಿದರೆ ಹಿಜಾಬ್ಗಾಗಿ ಹೋರಾಟ ನಡೆಸುತ್ತಾ ಬಂದಿರುವ ಆ ಹೆಣ್ಮಕ್ಕಳ ಮೇಲೆ ಈವರೆಗೆ ಯಾವ ಪ್ರಕರಣವೂ ದಾಖಲಾಗಿಲ್ಲ. ಅವರಿಗೆ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಹೀಗಿದ್ದೂ ಈ ಸುವರ್ಣ ಚಾ ನೆಲ್ನ ಪತ್ರಕರ್ತರು ಕಳ್ಳ ಕ್ಯಾಮರಾವನ್ನು ಇಟ್ಟುಕೊಂಡು ಆ ಹೆಣ್ಮಗಳ ಮನೆಗೆ ಪ್ರವೇಶಿಸಿದಂತೆ ಈ ಇಬ್ಬರ ಮನೆಗೇಕೆ ಅಕ್ರಮ ಪ್ರವೇಶ ಮಾಡಲಿಲ್ಲ? ಹಿಜಾಬ್ ಬೇಡಿಕೆಯನ್ನು ತಿರಸ್ಕರಿಸುವುದರ ಹಿಂದೆ ಇರಬಹುದಾದ ರಾಜಕೀಯ ಸಂಚನ್ನು ಬಯಲಿಗೆಳೆಯುವ ಪ್ರಯತ್ನಕ್ಕೇಕೆ ಕೈ ಹಾಕಲಿಲ್ಲ?
ಯಾಕೆಂದರೆ, ಮುಸ್ಲಿಮರು ಈ ಎಲ್ಲ ಮಾಧ್ಯಮಗಳ ಪಾಲಿಗೆ ನಕಾರಾತ್ಮಕ ಸರಕುಗಳು. ದಲಿತರೂ ಅಷ್ಟೇ. ಗಣರಾಜ್ಯೋತ್ಸವ ಆಚರಣೆ ವೇಳೆ ಡಾ| ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ಆರೋಪಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ದಲಿತರು ನಡೆಸಿದ ಪ್ರತಿಭಟನೆಯಲ್ಲಿ ನಕಾರಾತ್ಮಕವಾದುದು ಏನೂ ಘಟಿಸಿಲ್ಲವಾದ ಕಾರಣ ಆ ಇಡೀ ಪ್ರತಿಭಟನೆಯನ್ನೇ ನಿರ್ಲಕ್ಷಿಸುವುದು ಮಾಧ್ಯಮಗಳ ಪಾಲಿಗೆ ಅನಿವಾರ್ಯವಾಯಿತು. ಒಂದುವೇಳೆ,
ಆ ಪ್ರತಿಭಟನೆಯಲ್ಲಿ ಬಸ್ಸುಗಳಿಗೆ ಕಲ್ಲೆಸೆದಿರುತ್ತಿದ್ದರೆ, ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿರುತ್ತಿದ್ದರೆ ಅಥವಾ ನ್ಯಾಯಾಲಯಕ್ಕೆ ನುಗ್ಗುವ ಪ್ರಯತ್ನಗಳಾಗಿರುತ್ತಿದ್ದರೆ ಆ ದಿನದ ಮುಖ್ಯ ಸುದ್ದಿಯಾಗಿ ಅದು ಪ್ರಸಾರವಾಗುತ್ತಿತ್ತು. ಯಾವ ಬಸ್ಸಿಗೆ ಎಷ್ಟು ಹಾನಿಯಾಗಿದೆ, ಎಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ, ಸರ್ಕಾರಿ ಕಚೇರಿ ಮೇಲಾದ ದಾಳಿಯಿಂದ ಆಗಿರುವ ಹಾನಿ ಎಷ್ಟು, ನ್ಯಾಯಾಲಯದ ಮೇಲೆಯೇ ಗೌರವ ಇಲ್ಲದವರು ಅಂಬೇಡ್ಕರ್ ಅಭಿಮಾನಿ ಹೇಗಾಗುತ್ತಾರೆ… ಎಂಬುದನ್ನೆಲ್ಲ ವಿವಿಧ ರೀತಿಯಲ್ಲಿ ತರ್ಕಕ್ಕೆ ಒಡ್ಡಿ ಹಲವು ಕಾರ್ಯಕ್ರಮಗಳನ್ನು ಟಿ.ವಿ. ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದುವು. ದಿನಪತ್ರಿಕೆಗಳಲ್ಲಿ ಈ ಬಗ್ಗೆ ಲೇಖನಗಳು ಪ್ರಕಟವಾಗುತ್ತಿತ್ತು. ನಿಜವಾಗಿ,
ದಲಿತರು ಮತ್ತು ಮುಸ್ಲಿಮರು ಈ ದೇಶದಲ್ಲಿ ಸಮಾನ ದುಃಖಿಗಳು. ಅವರು ಈ ದೇಶದ ಮುಖ್ಯವಾಹಿನಿಯ ಮಾಧ್ಯಮಗಳ ಪಾಲಿಗೆ ನಕಾರಾತ್ಮಕ ಸುದ್ದಿ ಸರಕುಗಳೇ ಹೊರತು ಇನ್ನೇನಲ್ಲ. ಇವತ್ತು ಸಾಮಾಜಿಕ ಜಾಲತಾಣಗಳೇ ಈ ಎರಡೂ ಸಮುದಾಯಗಳ ಬಹುಮುಖ್ಯ ಅಸ್ತ್ರ. ಇವು ಇಲ್ಲದೇ ಇರುತ್ತಿದ್ದರೆ ಹತ್ರಾಸ್ ಈ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತೋ, ಹೇಳಲಾಗದು. ಮುಸ್ಲಿಮ್ ವಿರೋಧಿ ದೌರ್ಜನ್ಯಗಳು ಮತ್ತು ಘೋಷಣೆಗಳು ಬಹಿರಂಗಕ್ಕೆ ಬರುತ್ತಿತ್ತೋ, ಅದನ್ನೂ ಹೇಳಲಾಗದು.
ಒಂದು ನಿರ್ದಿಷ್ಟ ಮಾಧ್ಯಮ ಮಂದಿಯ ಕ್ಯಾಮರಾ ಸದಾ ಮುಸ್ಲಿಮರು ಮತ್ತು ದಲಿತರತ್ತಲೇ ದೃಷ್ಟಿ ನೆಟ್ಟುಕೊಂಡು ಕೂತಿವೆ. ಪೆನ್ನುಗಳೂ ಅಷ್ಟೇ. ಈ ಎರಡೂ ಸಮುದಾಯಗಳಿಂದ ಎಲ್ಲಿ ತಪ್ಪುಗಳು, ಪ್ರಮಾದಗಳು ಸಂಭವಿಸುತ್ತವೆ ಎಂಬುದಕ್ಕಾಗಿ ಕಾಯುವುದೇ ಈ ಕ್ಯಾಮರಾ ಮತ್ತು ಪೆನ್ನುಗಳ ಗುರಿ. ಒಂದುವೇಳೆ ತಪ್ಪುಗಳೇ ಸಿಗದಿದ್ದರೆ ಸರಿಯನ್ನೇ ತಪ್ಪು ಎಂದು ಬಿಂಬಿಸಿ ಅದನ್ನು ಬಿತ್ತರಿಸುವುದು ಈ ಮಾಧ್ಯಮಗಳ ಪ್ಲ್ಯಾನ್ ಬಿ ಅಜೆಂಡಾ. ಒಂದೋ ಅವರ ತಪ್ಪನ್ನು ಪತ್ತೆ ಹಚ್ಚಬೇಕು ಅಥವಾ ಸರಿಯನ್ನೇ ತಪ್ಪೆಂದು ಬಿಂಬಿಸಬೇಕು, ಇದನ್ನೇ ಮಾಧ್ಯಮ ಧರ್ಮ ಎಂದು ತಿಳಿದುಕೊಂಡಿರುವುದರ ಪರಿಣಾಮವೇ ಬೆಂಗಳೂರು ಪ್ರತಿಭಟನೆಯು ಮಾಧ್ಯಮ ಅವಜ್ಞೆಗೆ ಒಳಗಾಗಲು ಕಾರಣ. ಅದರಲ್ಲೂ, ದಲಿತ ಪ್ರತಿಭಟನೆಯಲ್ಲಿ ತಪ್ಪನ್ನು ಹುಡುಕುವುದಕ್ಕಿಂತ ಹಿಜಾಬೇ ಹೆಚ್ಚು ಸುರಕ್ಷಿತ. ಆದ್ದರಿಂದಲೇ ಅವು ಹಿಜಾಬನ್ನು ಹೊದ್ದುಕೊಂಡು ದಲಿತ ಪ್ರತಿಭಟನೆಯನ್ನು ತಣ್ಣಗೆ ನಿರ್ಲಕ್ಷಿಸಿವೆ. ಅಂದಹಾಗೆ,
ದಲಿತ ಪ್ರತಿಭಟನೆಗೆ ಮುಖಪುಟ ಬಿಟ್ಟುಕೊಟ್ಟ ವಾರ್ತಾಭಾರತಿಗೆ ಅಭಿನಂದನೆಗಳು.












