ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಬಹಿಷ್ಕಾರ ಘೋಷಣೆಯನ್ನು ಸಹಿಸಲ್ಲ: ಬಿಜೆಪಿ ಶಾಸಕ ಅನಿಲ್ ಬೆನಕೆ

0
680

ಸನ್ಮಾರ್ಗ ವಾರ್ತೆ

ಬೆಳಗಾವಿ: ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರುವ ಬೆಳವಣಿಗೆಯನ್ನು ಬಿಜೆಪಿಯ ಬೆಳಗಾವಿ ಶಾಸಕ ಅನಿಲ್ ಬೆನಕೆ ಖಂಡಿಸಿದ್ದಾರೆ. ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಬಹಿಷ್ಕಾರ ಘೋಷಣೆಯನ್ನು ಸಹಿಸಲ್ಲ ಎಂದವರು ಗುಡುಗಿದ್ದಾರೆ.

ಮಂದಿರದ ಆವರಣದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸಂಘಪರಿವಾರದ ತೀರ್ಮಾನಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿದಿರುವುದರ ನಡುವೆಯೇ ಶಾಸಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀವು ನಿರ್ದಿಷ್ಟ ಅಂಗಡಿಯಿಂದ ಮಾತ್ರ ಖರೀದಿಸಿ ಎಂದು ಯಾರಿಗೆ ಆಗಲಿ ಹೇಳುವುದು ತಪ್ಪು. ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಪ್ರಶ್ನೆಯೇ ಇಲ್ಲ. ಅವರನ್ನು ವ್ಯಾಪಾರ ಮಾಡದಂತೆ ನಾವು ತಡೆಯಲಾರೆವು ಎಂದು ಬೆನಕೆ ಹೇಳಿದ್ದಾರೆ.

ಇಲ್ಲಿ ವ್ಯಾಪಾರ ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ಜನರಿಗೂ ಆಯ್ಕೆಯ ಸ್ವಾತಂತ್ರ್ಯ ಇದೆ. ಅವರು ಯಾರಿಂದಲೂ ಖರೀದಿಸುವುದಕ್ಕೆ ಸ್ವತಂತ್ರರು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ