ಸನ್ಮಾರ್ಗ ವಾರ್ತೆ
ಮಂಗಳೂರು: ಆರೆಸ್ಸೆಸ್ ಮುಖಂಡ, ಪ್ರಚೋದನಕಾರಿ ಭಾಣಗಾರರಾದ ಕಲ್ಲಡ್ಕ ಪ್ರಭಾಕರ್ ಭಟ್ ರವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಲು ಅವಕಾಶ ನೀಡಿದ ಮಂಗಳೂರು ವಿವಿ ಕುಲಪತಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಎಪಿಸಿಆರ್ ಯುಜಿಸಿಗೆ ದೂರು ಸಲ್ಲಿಸಿದೆ.
ನವದೆಹಲಿಯಲ್ಲಿರುವ ಯುನಿವರ್ಸಿಟಿ ಗ್ರಾಂಟ್ ಕಮಿಶನ್ ನ ಮುಖ್ಯಸ್ಥರಿಗೆ ಈ ಬಗ್ಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೇಂಗ್ರೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ಮಾರ್ಚ್ 30ರಂದು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೊತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ನಿರಂತರ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಸಮಾಜದಲ್ಲಿ ಒಡಕು ಉಂಟು ಮಾಡಿ ಹಿಂಸೆಯನ್ನು ಹರಡುತ್ತಿರುವ ಕಲಡ್ಕ ಪ್ರಭಾಕರ್ ಭಟ್ ಎಂಬ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಕರೆದು ಕಾರ್ಯಕ್ರಮ ನಡೆಸಿರುತ್ತಾರೆ. ಈ ಕಾರ್ಯಕ್ರಮದ ಹೊಣೆಗಾರರಾಗಿರುವ ಎಡಪಡಿತ್ತಾಯ ದ್ವೇಷ ಭಾಷಣ ಮಾಡುವ ವ್ಯಕ್ತಿಯನ್ನು ಕರೆದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿರುತ್ತಾರೆ. ಅಷ್ಟೇ ಅಲ್ಲದೇ ಮಾಧ್ಯಮದ ಮುಂದೆ ದ್ವೇಷ ಭಾಷಣವನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವಾಗ ಒಟ್ಟಿಗೆ ನಿಂತು ಸಾಥ್ ನೀಡಿದ್ದಾರೆ. ಆದ್ದರಿಂದ ಇಂತಹ ದ್ವೇಷ ತುಂಬಿದ ವ್ಯಕ್ತಿಗೆ ಆಹ್ವಾನಿಸಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಧ್ಯೆ ಒಡಕು ಉಂಟು ಮಾಡುವ ಪ್ರಯತ್ನ ಮಾಡಿರುತ್ತಾರೆ ಎಂದು ಎಪಿಸಿಆರ್ ಯುಜಿಸಿಗೆ ಸಲ್ಲಿಸಿದ ದೂರಿನಲ್ಲಿ ಹೇಳಿದೆ.
ಇದು ಅಕ್ಷಮ್ಯ ಅಪರಾಧವಗಿದೆ. ಆದ್ದರಿಂದ ಇದಕ್ಕೆ ಕಾರಣೀಭೂತರಾದ ಉಪಕುಲಪತಿಗಳಾದ ಎಡಪಡಿತ್ತಾಯ ಅವರನ್ನು ತಕ್ಷಣ ವಜಾಗೊಳಿಸಬೇಕು. ಹಾಗೂ ಮುಂದಿನ ದಿನಗಳಲ್ಲಿ ಇಂತಹ ದ್ವೇಷ ಭಾಷಿಗರು ಕಾರ್ಯಕ್ರಮಕ್ಕೆ ಬರದಂತೆ ಎಚ್ಚರ ವಹಿಸಬೇಕು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ನ ಹುಸೇನ್ ಕೋಡಿಬೇಂಗ್ರೆ ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.












