ಈದ್ ಸೌಹಾರ್ದ ಕೂಟ| ಮನಸುಗಳನ್ನು ಸರಿ ಮಾಡುವ ಕೆಲಸಗಳು ಆಗಬೇಕಿದೆ

0
570

ಸನ್ಮಾರ್ಗ ವಾರ್ತೆ

ಮುದ್ದೇಬಿಹಾಳ: ಮನುಷ್ಯ ಕೆಟ್ಟಿಲ್ಲ,ಸಮಾಜವೂ ಕೆಟ್ಟಿಲ್ಲ.ಆದರೆ ಸಮಾಜದಲ್ಲಿ ಜೀವಿಸುತ್ತಿರುವ ಮನುಷ್ಯನ ಮನಸ್ಸುಗಳು ಕೆಟ್ಟಿವೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ವಿಜಯಮಹಾಂತೇಶ ಮಂಗಲಭವನದಲ್ಲಿ ಸೋಮವಾರ ರಾತ್ರಿ ಜಮಾಅತೆ ಇಸ್ಲಾಮಿ ಹಿಂದ್ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುರ್‌ಆನ್, ಭಗವದ್ಗೀತೆ,ಬೈಬಲ್ ಕೆಟ್ಟಿಲ್ಲ. ಮನುಷ್ಯನ ಮನಸ್ಸು ಪರಿವರ್ತನೆ ಆಗಬೇಕಿದೆ. ಚಿಕ್ಕವರಿದ್ದಾಗ ಪರಸ್ಪರ ಹೊಂದಿದ್ದ ಒಡನಾಟ ದೊಡ್ಡವರಾಗುತ್ತಿದ್ದಂತೆ ನಮ್ಮ ನಮ್ಮಲ್ಲಿ ಯಾಕೆ ಬೇಧಭಾವ ಬರುತ್ತದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ಘಟಕದ ರಾಜ್ಯ ಕಾರ್ಯದರ್ಶಿ ಜನಾಬ ಮುಹಮ್ಮದ್ ಕುಂಞಿ ಮಾತನಾಡಿ, ವಿಶ್ವದಲ್ಲಿರುವ 750 ಕೋಟಿ ಜನಸಂಖ್ಯೆಯಲ್ಲಿ ಒಬ್ಬರಿಗೆ ಇರುವ ಬೆರಳಚ್ಚು ಮತ್ತೊಬ್ಬರಿಗೆ ಇಲ್ಲ. ಆದರೆ ಇರುವ ರಕ್ತ ಒಂದೇ ಆಗಿದೆ. ಅತ್ತಾಗ ಬರುವ ಕಣ್ಣೀರು ಒಂದೇ ಆಗಿದೆ.ನಾವು ಪ್ರೀತಿಸುವುದನ್ನು ಕಲಿಯಬೇಕಾಗಿದೆ. ಕೆಡಕುಗಳನ್ನು ಅತ್ಯಂತ ಒಳಿತುಗಳ ಮೂಲಕ ನಿವಾರಿಸಬೇಕು ಎಂದು ಧರ್ಮ ಸಂದೇಶಗಳು ಹೇಳುತ್ತವೆ ಎಂದು ಹೇಳಿದರು.

ಅವರವರ ಧಾರ್ಮಿಕ ಆಚರಣೆಗಳು ಪ್ರತಿಯೊಬ್ಬರಿಗೂ ಪವಿತ್ರವಾಗಿವೆ. ಅವರಿಗೆ ಸ್ವತಂತ್ರವಾಗಿ ಆಚರಣೆ ಮಾಡಲು ಬಿಡಿ. ದೀಪಾವಳಿ, ಚೌತಿ ಎಂದರೇನು ಎಂದು ಹಿಂದೂಗಳು ಸಮಾಜಕ್ಕೆ ತಿಳಿಸಿ ಹೇಳಲಿ.ಕ್ರಿಶ್ಚಿಯನ್‍ರು ಕ್ರಿಸ್‌ಮಸ್ ಎಂದರೇನು ಎಂಬ ಬಗ್ಗೆ ಎಲ್ಲ ಧರ್ಮೀಯರನ್ನು ತಿಳಿಸಿ ಹೇಳಿದಾಗ ಅಪನಂಬಿಕೆಗಳು, ತಪ್ಪು ಕಲ್ಪನೆಗಳು ದೂರವಾಗುತ್ತವೆ.ಪರಸ್ಪರ ನಂಬಿಕೆ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಎಂಜಿವಿಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ನರಗುಂದ ಮಾತನಾಡಿದರು. ಬೆಳಗಾವಿ ವಲಯ ಸಂಚಾಲಕ ಮೆಹಬೂಬ ಬಡಗನ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಮಹಮ್ಮದ್ ರಫಿಕ್ ಮದನಿ ನದಾಫ್‌ರವರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಚಾಲಕ ಎಂ.ಡಿ.ಜರತಾರಘರ ಸ್ವಾಗತಿಸಿದರು. ನೂರೇನಬಿ ನದಾಫ್ ನಿರೂಪಿಸಿ ವಂದಿಸಿದರು.